About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Thursday, May 19, 2011

ಶಿಕಾರಿಗೆ ಸಿಕ್ಕ ಪಶು

ಹಸನಾಯಿತು ಸಹನೆಯ ಬಾಳು
ವೆಂಕಟರೆಡ್ಡಿ, ಆ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತಿದ್ದರೂ ಆತನ ದೃಷ್ಟಿ ಎಲ್ಲಾ ಮುಂದಿನ ರಸ್ತೆ ಮೇಲೆಯೇ ಬಿದ್ದಿದೆ. ಅವನು ಬರ್ತಾನಾ ? ಬಂದೇ ಬರ್ತಾನೆ. ದೇಹ ಮಾರಿಕೊಂಡು ತುತ್ತು ತಿನ್ನೋ ಮಹಿಳೆಯರನ್ನೂ ಬಿಡದ, ಮಾನ, ಮರ್ಯಾದೆ, ನಾಚಿಕೆ ಇಲ್ಲದ ಅವನು ಇಲ್ಲಿಗೆ ಬರದೇ ಇರಲು ಸಾಧ್ಯವೇ? ಹೀಗಂತ ಬೆಳಗ್ಗೆ ಎದ್ದಾಗಲಿಂದ ಅದೆಷ್ಟು ಬಾರಿ ತನಗೆ ತಾನೆ ಈ ಪ್ರಶ್ನೆಯನ್ನು ಕೇಳಿಕೊಂಡಿದ್ದನೋ.
---
ಪ್ರತಿ ದಿನ ಎದ್ದ ಕೂಡಲೇ ರಿಸೆಪ್ಷನ್ ನಲ್ಲಿರುವ ತಿರುಪತಿ ವೆಂಕಟರಮಣಸ್ವಾಮಿ ಫೋಟೋಗೆ ಹೂಮಾಲೆ ಹಾಕಿ, ಊದುಬತ್ತಿ ಹಚ್ಚಿ ವೇಟರ್ ತಂದುಕೊಟ್ಟ ಕಾಫಿ ಕುಡಿದು ದೂರದ ಊರುಗಳಿಂದ ಬರುವ ಜನರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ತಾನು ಭೋಗ್ಯಕ್ಕೆ ಪಡೆದಿರುವ ಹಿಮವಂತ್ ಲಾಡ್ಜ್ ನ ರಿಸೆಪ್ಷನ್ ನಲ್ಲಿ ಕೂತರೆ ಗಮನವೆಲ್ಲವೂ ಬರುವ ಗಿರಾಕಿಗಳ ಮೇಲೆಯೇ.

ಆತನ ಹೆಸರು ವೆಂಕಟರೆಡ್ಡಿ. ಆತ್ಮೀಯರು ಆತನನ್ನು ರೆಡ್ಡಿ ಎಂದು ಕರೆಯುತ್ತಾರೆ. ಆಂಧ್ರ ಮೂಲದವನು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದವ, ಸ್ವಲ್ಪ ಹಣ ಕೂಡಿಟ್ಟು ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಕಾಟನ್ ಪೇಟೆಯಲ್ಲಿರುವ ಲಾಡ್ಜ್ ಒಂದನ್ನು ಲೀಸ್ ಗೆ ಪಡೆದಿದ್ದಾನೆ. ಈತನಿಗೆ ಒಬ್ಬ ಮಗ ಮತ್ತು ಮಗಳು. ಆಕೆ ತುಂಬಾ ರೂಪವಂತೆ. ಅದೇ ಅವನ ಇಂದಿನ ಗಾಬರಿಗೆ ಕಾರಣ!

ಹಾಗಂತ ಅವಳೇನೂ ಯಾರನ್ನೂ ಪ್ರೀತಿಸಿ ಓಡಿ ಹೋಗಿಲ್ಲ. ಆದರೆ, ಬೆಳ್ಳಗಿರುವುದೆಲ್ಲಾ ಹಾಲು ಎಂದು ನಂಬಿದ್ದಳಷ್ಟೇ. ಪದವಿ ಮುಗಿಸಿದ ಬಳಿಕ ತಂದೆಗೆ ಸಹಾಯ ಮಾಡುವ ದೃಷ್ಟಿಯಿಂದ ಮತ್ತು ಸುಂದರವಾದ ಹುಡುಗಿ ರಿಸೆಪ್ಷನ್್ನಲ್ಲಿದ್ದರೆ ಗಿರಾಕಿಗಳನ್ನು ಸೆಳೆಯಬಹುದು ಎಂಬ ವ್ಯಾಪಾರ ತಂತ್ರದಿಂದ ಆಗಾಗ್ಗೆ ರಿಸೆಪ್ಷನ್್ನಲ್ಲಿ ಕೂರುತ್ತಿದ್ದಳು. ಅದೇ ಅವಳಿಗೆ ಮುಳುವಾಗುತ್ತೆ ಎಂಬುದನ್ನು ಪಾಪ, ರೆಡ್ಡಿ ಊಹಿಸಲೇ ಇಲ್ಲ.
--
ದುಗುಡಕ್ಕೆ ಕಾರಣ

ಬಿಳಿಗಿರಿ ರಂಗನಬೆಟ್ಟ ಗೊತ್ತಲ್ಲ ? ಅದರ ಪಕ್ಕದಲ್ಲೇ ಇದೆ ರಾಂಪುರ. ಸುಮಾರು 20 ಮನೆಗಳಿರುವ ಈ ಹಳ್ಳಿ ಹೊರ ಜಗತ್ತಿನ ಮಟ್ಟಿಗೆ ಅನಾಮಿಕ. ಹಾಗಾಗಿ, ಆ ಊರಿನ ಯಾರೇ ಆಗಲಿ ಮೈಸೂರು ಅಥವಾ ಬೆಂಗಳೂರಿಗೆ ಬಂದಾಗ ಎಲ್ಲರೂ ಊರ ಹೆಸರು ಹೇಳಬೇಕಾದರೆ ಬಿಳಿಗಿರಿರಂಗನ ಬೆಟ್ಟ ಎಂದೇ ಹೇಳುತ್ತಾರೆ.

ಅದೇ ಊರಿಂದ ಬಂದವನು ಸೂರ್ಯ. ಯಾರಾದರು ಊರ ಹೆಸರು ಕೇಳಲಿ ಕೇಳದಿರಲಿ, ಅವನು ಬಿಳಿಗಿರಿ ಎಂದು ಹೇಳುತ್ತಿದ್ದ. ತನ್ನನ್ನು ತಾನು ಸೂರ್ಯ ಬಿಳಿಗಿರಿ ಎಂದೇ ಕರೆಸಿಕೊಂಡಿದ್ದ. ಅವನೂ ಹೊಟ್ಟೆ ಪಾಡಿಗಾಗಿ ಬೆಂಗಳೂರಿಗೆ ಬಂದವನೇ. ಕೆಲ ದಿನ ಊರಿನ ಕಾಲೇಜೊಂದರಲ್ಲಿ ಪಾಠ ಮಾಡಿಕೊಂಡಿದ್ದ ಪದವೀಧರ. ಆದರೆ, ತನ್ನ ವಿದ್ಯಾರ್ಥಿನಿ ಜತೆಯೇ ಅಸಭ್ಯವಾಗಿ ವರ್ತಿಸಿ ಗೂಸಾ ತಿಂದು ಓಡಿ ಬಂದವ. ತಾನೊಬ್ಬ ಖುಷ್ವಂತ್್ಸಿಂಗ್್ನಂತೆ ಆಗಬೇಕು ಎಂಬುದು ಅವನ ಆಸೆ. ಆದ್ದರಿಂದಲೇ ಅವನು ಪತ್ರಿಕೋದ್ಯಮಕ್ಕೆ ವಕ್ಕರಿಸಿ ಅವನಿಗಿಂತ ಮೊದಲೇ ಆರಂಭವಾಗಿದ್ದ ಪೀತ ಪತ್ರಿಕೋದ್ಯಮದ ಸದಸ್ಯನಾದ.

ಪತ್ರಕರ್ತನಾದವನು ಹೊಟ್ಟೆಪಾಡಿಗಾಗಿ ಮತ್ತೇನಾದರೂ ಕಸುಬು ಮಾಡಲೇಬೇಕಾದ ಸ್ಥಿತಿ ಇದ್ದ ಸಮಯವದು. ಆದರೆ, ಈ ಬಿಳಿಗಿರಿ ಆಯ್ದಕೊಂಡಿದ್ದೇ ಬೇರೆ ಕಸಬು! ಮೆಜೆಸ್ಟಿಕ್್ನ ಅಕ್ಕಪಕ್ಕದ ಕೆಲವು ಲಾಡ್ಜ್ ಸೇರಿದಂತೆ ಕೆ. ಆರ್. ಮಾರುಕಟ್ಟೆಯ ಕೆಲವು ಲಾಡ್ಜ್ ಗಳಲ್ಲಿ ಇಂದಿಗೂ ಅವ್ಯಾಹತವಾಗಿ ವೇಶ್ಯಾವಾಟಿಕೆ ನಡೆಯುತ್ತಿದೆ. ಇದು ಗೊತ್ತಿದ್ದರೂ ಪೊಲೀಸರು ಜಾಣ ಕುರುಡು ಪ್ರದರ್ಶಿಸುತ್ತಾರೆ. ಅದಕ್ಕೆ ಕಾರಣ ಹೊಟ್ಟೆಪಾಡಿಗಾಗಿ ಪರದಾಡುವ ಹೆಣ್ಣುಗಳ ಬಗ್ಗೆ ಸ್ವಲ್ಪ ಮಟ್ಟಿಗಿನ ಕನಿಕರದ ಜೊತೆಗೆ ಲಾಡ್ಜ್ ಗಳಿಂದ ತಿಂಗಳು ತಿಂಗಳು ಬರುವ ಮಾಮೂಲಿಯೂ ಒಂದು ಕಾರಣ.

ಈ ಗುಟ್ಟನ್ನು ಮೊದಲು ಗುರ್ತಿಸಿದವನು ಬಿಳಿಗಿರಿ. ಮೊದಲೇ ಭಗನಿ ಕಳ್ಳು, ನಾಟಿ ಸಾರಾಯಿ ಕುಡಿದು ಬೆಳೆಸಿದ್ದ ದೇಹಕ್ಕೆ ಪ್ರತಿ ದಿನ ಮದ್ಯ, ಮಾನಿನಿ ಇಲ್ಲದೆ ಕಾಲ ಕಳೆಯುವುದು ಅಸಾಧ್ಯವಾಗಿತ್ತು. ಇಂಥ ಸಂದರ್ಭದಲ್ಲಿ ಇವನು ಬಳಸಿಕೊಂಡಿದ್ದು ಪೀತ ಪತ್ರಿಕೋದ್ಯಮವನ್ನು. ಲಾಡ್ಜ್ ನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆಯುವುದಾಗಿ ಹೆದರಿಸಿ ಲಾಡ್ಜ್್ಗಳಿಂದ ತಿಂಗಳ ಮಾಮೂಲಿ ವಸೂಲಿ ಮಾಡಲು ಆರಂಭಿಸಿದ. ಲಾಡ್ಜ್್ನವರೂ ಪತ್ರಿಕೆಯವರನ್ನು ಎದುರು ಹಾಕಿಕೊಳ್ಳುವುದು ಯಾಕೆ ಎಂದು ಚಿಲ್ಲರೆ ಕೊಟ್ಟು ಕಳುಹಿಸುತ್ತಿದ್ದರು.

ಇದರ ರುಚಿ ಕಂಡ ಬಿಳಿಗಿರಿ ಹೊಟ್ಟೆ ಪಾಡಿಗಾಗಿ ಮೈಮಾರಿಕೊಳ್ಳುವ ಹೆಂಗಸರನ್ನೂ ಬಿಡಲಿಲ್ಲ. ಲಾಡ್ಜ್್ಗಳಲ್ಲಿ ದುಡಿಯುವ ಹೆಂಗಸರು ಇವನಿಗೆ ಉಚಿತವಾಗಿ ಸಿಗಬೇಕಿತ್ತು! ಪ್ರಶ್ನಿಸಿದರೆ ಪತ್ರಿಕೆಯಲ್ಲಿ ಬರೆಯುವ ಬೆದರಿಕೆ. ವಿಧಿ ಇಲ್ಲದೆ ಅವರೂ ಇವನ ಹಿಂಸೆಯನ್ನು ತಡೆದುಕೊಳ್ಳಬೇಕಿತ್ತು. ಇಂಥ ಗುಳ್ಳೆ ನರಿಯ ಬಿಳಿಗಿರಿ ರೆಡ್ಡಿಗೆ ಪರಿಚಯವಾಗಿದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ.
--
ಹಿಮವಂತ್ ಲಾಡ್ಜ್ ಪಕ್ಕದಲ್ಲೇ ಇದ್ದ ಒಂದು ಲಾಡ್ಜ್ ನಲ್ಲಿ ಅಕ್ರಮ ಚಟುವಟಿಕೆಗಳು ಹೇರಳವಾಗಿ ನಡೆಯುತ್ತಿರುತ್ತವೆ. ಒಂದು ದಿನ ಆ ಲಾಡ್ಜ್್ನಲ್ಲಿ ಒಬ್ಬ ಹೆಂಗಸಿನ ಕೊಲೆಯಾಗುತ್ತದೆ. ಇದರ ಜತೆ ರೆಡ್ಡಿ ಲಾಡ್ಜ್ ಗೆ ವ್ಯಾಪಾರ ಪೈಪೋಟಿ ಇತ್ತಾದರೂ ರೆಡ್ಡಿ ಲಾಡ್ಜ್್ನಲ್ಲಿ ಯಾವುದೇ ಅಕ್ರಮಗಳು ನಡೆಯದ ಕಾರಣ, ಸಂಪ್ರದಾಯಸ್ಥರು ಮಾತ್ರ ಹಿಮವಂತ್ ಲಾಡ್ಜ್್ಗೆ ಬಂದು ವ್ಯಾಪಾರ ಕಡಿಮೆ ಇರುತ್ತಿತ್ತು. ಕೊಲೆಯಾದಾಗ ಅದನ್ನು ಪತ್ರಿಕೆಯಲ್ಲಿ ಬರೆಸಿದರೆ ತಮ್ಮ ಲಾಡ್ಜ್ ವ್ಯಾಪಾರದಲ್ಲಿ ಮುಂದುವರಿಯುತ್ತದೆ ಎಂಬ ಯೋಚನೆಯಿಂದ ರೆಡ್ಡಿ ಮೊದಲ ಬಾರಿಗೆ ಬಿಳಿಗಿರಿಗೆ ಪುಡಿಗಾಸು, ಅಗ್ಗದ ಮದ್ಯ ನೀಡಿ ಪತ್ರಿಕೆಯಲ್ಲಿ ಬರೆಸಿದ. ಒಂದು ಬಾರಿ ರುಚಿ ಕಂಡರೆ ಬಿಡುವವನಲ್ಲ ಬಿಳಿಗಿರಿ. ಎಲ್ಲೂ ಎಣ್ಣೆ ಸಿಗಲಿಲ್ಲವೆಂದರೆ ರೆಡ್ಡಿ ಬಳಿ ಬಂದು ಜೊಲ್ಲು ಸುರಿಸುತ್ತಿದ್ದ. ಹಾಗೆ ಪರಿಚಯವಾದ ಅವರ ಸ್ನೇಹ ಮನೆವರೆಗೂ ಮುಟ್ಟಿತು. ಬಿಳಿಗಿರಿಯ ನರಿ ಬುದ್ಧಿ ತಿಳಿಯದ ರೆಡ್ಡಿ ಯಾವಾಗ ಮನೆಗೆ ಬಿಟ್ಟುಕೊಂಡನೋ ಅದೇ ದಿನ ಅವನ ಮನೆಗೆ ಗೂಬೆ ಪ್ರವೇಶವಾದಂತಾಗಿತ್ತು!

ಮೊದಲಿಗೆ ರೆಡ್ಡಿ ಇದ್ದಾಗ ಬರುತ್ತಿದ್ದ ಬಿಳಿಗಿರಿ ಕ್ರಮೇಣ ರೆಡ್ಡಿ ಇಲ್ಲದ ಸಮಯದಲ್ಲೇ ಬರತೊಡಗಿದ. ಮೊದಲಿಗೆ ಏನೂ ತಿಳಿಯದ ರೆಡ್ಡಿ ಸುಮ್ಮನಿದ್ದ. ಆದರೆ, ಕ್ರಮೇಣ ಹೆಂಡತಿಯಲ್ಲಿ ಕೆಲ ಬದಲಾವಣೆಗಳನ್ನು ಕಂಡ. ಬಿಳಿಗಿರಿ ಮಾಡುತ್ತಿರುವ ದ್ರೋಹಕ್ಕೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ರೆಡ್ಡಿ ಒದ್ದಾಡತೊಡಗಿದ. ಹೆಂಡತಿ ವಿಚಾರವಾಗಿ ಸಹಿಸಿಕೊಂಡಿದ್ದ ರೆಡ್ಡಿಗೆ ಮತ್ತೊಂದು ಶಾಕ್; ಮಗಳು ಕೂಡಾ ಅದೇ ಬಿಳಿಗಿರಿಯ ಮೋಸದ ಜಾಲದಲ್ಲಿ ಸಿಲುಕಿದ್ದಳು! ಇದನ್ನು ತಿಳಿದು ಹೌಹಾರಿದ ರೆಡ್ಡಿ ಮಗಳಿಗೆ ಬುದ್ಧಿ ಹೇಳಿದ. ಆದರೆ, ಪ್ರಯೊಜನ ಆಗಲಿಲ್ಲ. ಮೊದಲೆಲ್ಲಾ ತಂದೆಗೆ ತಿಳಿಯದ ಹಾಗೆ ಓಡಾಡುತ್ತಿದ್ದ ಮಗಳು ಈಗ ನಿರ್ಭಯವಾಗಿ ತಂದೆಯ ಎದುರಿಗೇ ಓಡಾಡಲು ಆರಂಭಿಸಿದ್ದಳು. ಇದೆಲ್ಲವೂ ನಡೆಯುತ್ತಿರುವಾಗಲೇ

ಅವಳಿಗೆ ಅರಿವಾಗತೊಡಗಿತು; ಇವನು ಕೇವಲ ತನ್ನನ್ನು ಬಳಸಿಕೊಳ್ಳುತ್ತಾನೆ, ಹೊರತು ಬಾಳು ಕೊಡುವುದಿಲ್ಲ ಎಂಬುದು. ಅಷ್ಟರಲ್ಲಾಗಲೇ ಆಕೆ ಬಹುದೂರ ಬಂದಾಗಿತ್ತು. ಅವನಿಂದ ದೂರವಾಗುವ ಪ್ರಯತ್ನ ಮಾಡತೊಡಗಿದಳು. ಅದು ಸುಲಭವಿರಲಿಲ್ಲ. ಮಗಳ ಸ್ಥಿತಿ, ತಾನು ಮಾಡಿದ ತಪ್ಪಿನ ಅರಿವಾಗ ತೊಡಗಿತ್ತು ರೆಡ್ಡಿಯ ಹೆಂಡತಿಗೆ. ಆಕೆ ಕೂಡಾ ಬಿಳಿಗಿರಿಯ ತೆಕ್ಕೆಯಿಂದ ದೂರವಾದಳು. ಆದರೆ, ಇವರ ಅಗಲಿಕೆ ಬಿಳಿಗಿರಿಯ ಕೋಪಕ್ಕೆ ತಿರುಗಿತು.

'ತನಗೆ ಅವಶ್ಯವಿರುವ ಅಷ್ಟೂ ದಿನ ತನ್ನಿಂದ ದೂರವಾಗಲು ಬಿಡುವುದಿಲ್ಲ. ಒಂದು ವೇಳೆ ದೂರವಾಗುವ ಪ್ರಯತ್ನ ಮಾಡಿದರೆ ನಿಮ್ಮ ನನ್ನ ನಡುವಿನ ಸಂಬಂಧದ ಬಗ್ಗೆ ಪತ್ರಿಕೆಯಲ್ಲಿ ಬರೆಯುತ್ತೇನೆ. ಅಷ್ಟೇ ಅಲ್ಲ, ನಿಮ್ಮ ತಂದೆ ನಡೆಸುತ್ತಿರುವ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಪೊಲೀಸ್ ರೈಡ್ ಮಾಡಿಸುತ್ತೇನೆ' ಎಂಬ ಬೆದರಿಕೆ ಹಾಕತೊಡಗಿದ. ಸಹಜವಾಗಿ ಇಡೀ ಕುಟುಂಬದ ನೆಮ್ಮದಿ ಹಾಳಾಯಿತು.

ಇವನಿಗೆ ತಿಳಿಯದ ಹಾಗೆ ಮಗಳ ಮದುವೆ ಮಾಡಿ ಮುಗಿಸಿದರೆ ಮುಂದೆ ತಮ್ಮ ಬಾಳು ಹೇಗಾದರೂ ಆಗಲಿ ಎಂಬ ತೀರ್ಮಾನಕ್ಕೆ ರೆಡ್ಡಿ ದಂಪತಿ ಬಂದರು. ಹುಡುಗಿಗೆ ಒಂದು ಒಳ್ಳೆಯ ಸಂಬಂಧವೂ ಗೊತ್ತಾಯಿತು. ಈ ಸಂಬಂಧ ಒಪ್ಪಿದರೆ ಮಗಳು ವಿದೇಶದಲ್ಲಿ ನೆಲೆಸುತ್ತಾಳೆ. ನಂತರವಾದರೂ ಈ ಬಿಳಿಗಿರಿಯಿಂದ ಮುಕ್ತಿ ಸಿಗುತ್ತದೆ ಎಂಬುದು ರೆಡ್ಡಿಯ ಯೋಚನೆ. ಇದಕ್ಕೆ ಮಗಳೂ ಒಪ್ಪಿದಳು. ಆದರೆ, ಈ ವಿಷಯವನ್ನು ಹೇಗೋ ತಿಳಿದ ಬಿಳಿಗಿರಿ ಹಿಂದಿನ ದಿನದ ರಾತ್ರಿ ಫೋನ್ ಮಾಡಿ ನಾಳೆ ಬಂದು ಹುಡುಗನ ಮುಂದೆ ಎಲ್ಲಾ ವಿಚಾರ ಹೇಳುವುದಾಗಿ ಧಮಕಿ ಹಾಕಿದ. ಅದೇ ಕಾರಣಕ್ಕೆ ಇಂದು ರೆಡ್ಡಿ ತೀರಾ ತಲೆ ಕೆಡಿಸಿಕೊಂಡು ಪದೇ ಪದೇ ರಸ್ತೆಯ ಕಡೆ ನೋಡುತ್ತಿದ್ದಾನೆ.
--
ಬಂತು ಗುಳ್ಳೆನರಿ!

ಲಾಡ್ಜ್ ಮುಂದೆ ಕೆಂಪು ಬಣ್ಣದ ಸ್ಕೋಡಾ ಕಾರು ಬಂದು ನಿಂತಿತೆಂದರೆ ಸಾಕು ರೆಡ್ಡಿಯ ಎದೆ ಬಡಿತ ಹೊರಗೆ ಕೇಳಿಸುವಷ್ಟು ಗಟ್ಟಿಯಾಗಿ ಬಡಿದುಕೊಳ್ಳುತ್ತದೆ. ಯಾಕೆಂದರೆ, ಆ ಕಾರು ಬಿಳಿಗಿರಿಯದು ಎಂದು ಅವನಿಗೆ ಚೆನ್ನಾಗಿ ಗೊತ್ತಿದೆ. ಅನೇಕ ಮಾಂಸದ ಮನೆಗಳ ಅದೆಷ್ಟೋ ಹೆಣ್ಣುಮಕ್ಕಳು ಬೆವರು ಸುರಿಸಿ ರಾತ್ರಿ ಹಗಲು ದುಡಿದು ಸಂಪಾದಿಸಿದ ಹಣದಲ್ಲೂ ಪಾಲು ಪಡೆದು ಈ ಕಾರು ಪಡೆದಿದ್ದಾನೆ ಎಂಬ ಸತ್ಯವೂ ರೆಡ್ಡಿಗೆ ಗೊತ್ತು. ಆದರೆ, ಏನು ಮಾಡಲೂ ರೆಡ್ಡಿ ನಿಸ್ಸಾಹಯಕ. ಯಾಕೆಂದರೆ, ಅವನಿಗೆ ಪತ್ರಕರ್ತನೆಂಬ ಹಣೆಪಟ್ಟಿಯಿದೆ; ಅದೇ ಕಾರಣಕ್ಕೆ ಪೊಲೀಸ್ ಅಧಿಕಾರಿಗಳ ಸ್ನೇಹವಿದೆ, ರಾಜಕಾರಣಿಗಳ ಬೆಂಬಲವಿದೆ!

ಕಾರಿಳಿದು ಒಳಬರುತ್ತಿರುವ ಬಿಳಿಗಿರಿಯನ್ನು ಕಂಡ ರೆಡ್ಡಿ ಕೈ ಮುಗಿದು ಬೇಡಿಕೊಳ್ಳುತ್ತಾನೆ. ಆದರೆ, ಕೇಳುವುದಕ್ಕೆ ಬಿಳಿಗಿರಿ ಅನ್ನೋ ಪ್ರಾಣಿಗೆ ಮಾನವೀಯತೆ ಅನ್ನೋದು ಇದ್ದರೆ ತಾನೆ? ಇದ್ಯಾವುದಕ್ಕೂ ಸೊಪ್ಪು ಹಾಕದ ಅವನು ನೇರವಾಗಿ ಮನೆಯೊಳಗೆ ಹೋಗಿ ರೆಡ್ಡಿ ಮಗಳನ್ನು ತನ್ನ ಜೊತೆ ಬರುವಂತೆ ಆದೇಶಿಸುತ್ತಾನೆ. ಆದರೆ, ಇದನ್ನು ಮೊದಲೇ ಊಹಿಸಿದ್ದ ಅವಳು ನೇರವಾಗಿ ಮುಖದ ಮೇಲೆ ಕ್ಯಾಕರಿಸಿ ಉಗಿದು ನಿರಾಕರಿಸುತ್ತಾಳೆ. ಇಂಥ ಅಸಹ್ಯಗಳನ್ನು ಅದೆಷ್ಟೋ ನೋಡಿರುವ

ಅವನಿಗೆ ಇದೇನು ಮಹಾ ಲೆಕ್ಕ? ಮುಖದ ಮೇಲಿನ ಉಗುಳನ್ನು ಒರೆಸಿಕೊಂಡು 'ನೋಡಿಕೊಳ್ಳುತ್ತೇನೆ' ಎಂಬ ಧಮಕಿ ಹಾಕಿ ಹೊರಬಂದ. ಅದೇ ಸಮಯಕ್ಕೆ ಗಂಡಿನ ಕಡೆಯಿಂದ ಫೋನು ಬಂದು ಅಂದು ನಡೆಯಲಿರುವ ವಧು ಪರೀಕ್ಷೆ ಮುಂದೂಡಿರುವ ಬಗ್ಗೆ ತಿಳಿಸುತ್ತಾರೆ. ಇದರಿಂದ ರೆಡ್ಡಿ ಕುಟುಂಬ ಸ್ವಲ್ಪ ಮಟ್ಟಿಗೆ ನಿರಾಳವಾಗುತ್ತೆ ನಿಜ. ಆದರೆ, ಈ ಬಿಳಿಗಿರಿಯಿಂದ ಪಾರಾಗುವ ಮಾರ್ಗದ ಬಗ್ಗೆ ದಿಕ್ಕು ಕಾಣದೆ ಪರದಾಡುತ್ತಾರೆ.

ಮುಂದೇನಾಯ್ತು?

ಶತ್ರುವಿನ ಶತ್ರು ಮಿತ್ರ ಅಂತಾರೆ; ಇಲ್ಲಿ ಆಗಿದ್ದು ಅದೇ. ಈ ಬಿಳಿಗಿರಿ ಇದ್ದಾನಲ್ಲಾ ಇವನಿಗೆ ಸಜ್ಜನರನ್ನು ಕಂಡರೆ ಅವನ ಅಪ್ಪನಾಣೆಗೂ ಆಗೋದಿಲ್ಲ. ಒಳ್ಳೆಯ ವ್ಯಕ್ತಿಗಳ ಮೇಲೆ ಕೆಟ್ಟ ಸುದ್ದಿ ಹಬ್ಬಿಸೋದು

ಅವನ ಜಾಯಮಾನ. ಹಾಗಂತ ಅವನು ಹೇಳಿದ್ದೆಲ್ಲಾ ಸತ್ಯ ಎಂದು ನಂಬುವವರಿಲ್ಲ ಅದು ಬೇರೆ ಪ್ರಶ್ನೆ. ಆದರೂ ಮಾನವಂತರಾದವರಿಗೆ ಇವನ ಗಾಸಿಪ್ ಗಳಿಗೆ ಇರುಸು ಮುರುಸಾಗುವುದು ತಪ್ಪುತ್ತಿರಲಿಲ್ಲ. ಅಂಥ ಅನವಶ್ಯಕ ಗಾಸಿಪ್್ಗಳಿಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರಿಗೆ ರೆಡ್ಡಿಯ ದುಃಖ ತಿಳಿಯಿತು. (ಅವರ ಹೆಸರು ಇಲ್ಲಿ ಅಪ್ರಸ್ತುತ) ಕೂಡಲೇ ಧಾವಿಸಿ ಬಂದ ಅವರು ರೆಡ್ಡಿಯ ಬೆನ್ನಿಗೆ ನಿಂತರು. ರೆಡ್ಡಿಯ ಹಿಂದೆ ಆ ಪ್ರಮುಖ ವ್ಯಕ್ತಿ ಇರುವುದನ್ನು ತಿಳಿದ ಬಿಳಿಗಿರಿ ಬಾಲ ಮುದುರಿಕೊಂಡು ಆ ಕಡೆ ಮುಖ ಹಾಕುವುದನ್ನು ಬಿಟ್ಟ. ಹಾಗಾಗಿ, ಯಾವುದೇ ಅಡ್ಡಿ ಇಲ್ಲದೆ ರೆಡ್ಡಿಯ ಮಗಳ ಮದುವೆಯಾಗಿದೆ. ಆಕೆ ಸದ್ಯ ಆಸ್ಟ್ರೇಲಿಯಾದಲ್ಲಿ ನೆಮ್ಮದಿಯಿಂದ ಇದ್ದಾಳೆ. ಬಿಳಿಗಿರಿ ಇನ್ನೂ ಇಂಥ ಹಲವು ಹೆಣ್ಣು ಮಕ್ಕಳ ಬಾಳು ಹಾಳು ಮಾಡುವ ಸಂಚು ಮುಂದುವರಿಸಿದ್ದಾನೆ. ಹೆಣ್ಣು ಹೆತ್ತವರೇ ಎಚ್ಚರ, ಆತ ಇನ್ನೂ ನಮ್ಮ ನಡುವೆ ಇದ್ದಾನೆ !
- ಅಶ್ವಪ್ರಭ