About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Tuesday, February 22, 2011

ಪ್ರೀತಿಯ ಸೇಸೆಗೆ ಶಿರವೊಡ್ಡಿ...


ಆ ಸುಂದರ ಸಂಜೆಯ ಮಳೆಯಲ್ಲಿ ನೆನೆದು ತೊಪ್ಪೆಯಾಗಿಬಿಡಬೇಕೆಂಬ ತವಕ. ಹುಚ್ಚೆದ್ದು ಕುಣಿಯುವ ಉತ್ಸಾಹ....


ಅದೇಕೋ ಕಾಣೆ, ಕಳೆದು ಮೂರ‍್ನಾಲ್ಕು ದಿನಗಳಿಂದ ಬೆಂಗಳೂರೆಂಬ ಬೆಂಗಳೂರಿನ ವಾತಾವರಣ ಇನ್ನಿಲ್ಲದಂತೆ ಜನರನ್ನು ಕಾದು ಕಂಗೆಡಿಸಿಬಿಟ್ಟಿತ್ತು. ಮೈಮನಗಳೆಲ್ಲ ಗಾರು ಗಬರೆದ್ದುಹೋಗಿತ್ತು. ನಡುವೆಯೇ ಹಾದು ಹೋದ ಹುಣ್ಣಿಮೆಯ ಬೆಳದಿಂಗಳ ರಾತ್ರಿಯೂ ಸಹ ತಣ್ಣನೆಯ ಅನುಭವನ್ನು ಕಸಿದುಕೊಂಡುಬಿಟ್ಟಿತ್ತು. ಶಿವರಾತ್ರಿಗೆ ಇನ್ನೂ ಹದಿನೈದು ದಿನಗಳಿವೆ ಎಂಬಾಗಲೇ ಚಳಿ ಸುಳಿವಿಲ್ಲದಂತೆ ಓಡಿ ಹೋಗಿತ್ತು. ಅದೆಂಥದ್ದೋ ಅರ್ಥವಿಲ್ಲದ ಅಸಹನೆ, ಆಯಾಸ, ದುಗುಡಗಳು ಸುಳಿದಾಡುತ್ತಿದ್ದವು. ಒಂದಕ್ಕೂ ಉತ್ತರ ಸಿಕ್ಕುತ್ತಿರಲಿಲ್ಲ. ಸುದೀರ್ಘ ತಾಳ್ಮೆಯ ಎಳೆ ಎಲ್ಲೋ ಬಿಚ್ಚಿಕೊಳ್ಳಲಾರಂಭಿಸಿದ ಅನುಭವ. ವ್ಯಾಖ್ಯಾನಕ್ಕೆ ಸಿಗದ ಬೇಸರ. ಇವೆಲ್ಲದರ ಪ್ರತೀಕವೋ ಎಂಬಂತೆ ನಿನ್ನೆ ಸೋಮವಾರದ ಬೆಳಗು ಎಂದಿನಂತಿರಲಿಲ್ಲ. ಸೂರ್ಯ ಮೂಡಿ ತಾಸು ಎರಡಾದರೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಹಾಗಿದ್ದರೂ ಒಳಗೊಳಗೇ ಬೆವರು ಕಿತ್ತು ಬರುತ್ತಿತ್ತು. ಸ್ವಲ್ಪ ಹೊತ್ತಷ್ಟೇ ಮತ್ತೆ ಬಿಸಿಲು ಕಣ್ಬಿಟ್ಟಿತ್ತು. ಬಹುಶಃ ಮನದ ಸ್ಥಿತಿಯೂ ಅದೇ ಆಗಿತ್ತೇನೋ ?


ಇದ್ದ ಬದ್ದ ಉತ್ಸಾಹವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೊರಟರೂ ಲವಲವಿಕೆಯ ಸುಳಿವಿಲ್ಲ. ಬಹುತೇಕ ಅದೇ ಸ್ಥಿತಿಯಲ್ಲೇ ರಾಜವೀಥಿಯ ಮಗ್ಗುಲಲ್ಲೇ ಮೇಲೆದ್ದು ನಿಂತಿರುವ ‘ಕನ್ನಡಪ್ರಭ’ಕಟ್ಟಡದ ನಾಲ್ಕನೇ ಮಹಡಿಯನ್ನೇರಿದ್ದೆ. ಬಿಸಿಲು ಅದೇ ಪರಿ ಬಾರಿಸುತ್ತಲೇ ಇತ್ತು. ನೆಚ್ಚಿನ ಸಂಪಾದಕರ ಕೊಠಡಿಯನ್ನು ಪ್ರವೇಶಿಸಿದಾಗ ೩.೪೦. ಐದೇ ನಿಮಿಷದಲ್ಲಿ ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆಯ ಆದೇಶ ಕೈ ಸೇರಿತ್ತು. ಔಪಚಾರಿಕ ಪ್ರಕ್ರಿಯೆ ಮುಗಿದು ಹೊಸ ಸಹೋದ್ಯೋಗಿಗಳತ್ತ ಸ್ನೇಹದ ಹಸ್ತ ಚಾಚಿದರೆ ಅಭೂತಪೂರ್ವ ಪ್ರತಿಕ್ರಿಯೆ. ಯಾರೊಬ್ಬರೂ ಹೊಸಬರಂತೆ ಅನ್ನಿಸಲೇ ಇಲ್ಲ. ಅರ್ಧಕ್ಕಿಂತ ಹೆಚ್ಚುಮಂದಿ ವೃತ್ತಿಯಿಂದ ಪರಿಚಿತರೇ. ಉಳಿದವರದ್ದು ಹೊಸ ಮುಖ. ಒಂದು ಸುತ್ತು ಮುಗಿಸಿ ಕಿಟಕಿಯಿಂದ ಹೊರಗಿಣುಕಿದರೆ ಬೆಳಗ್ಗೆ ಕಂಡದ್ದಕ್ಕಿಂತಲೂ ದಟ್ಟ ಮೋಡ ಕಚೇರಿಯ ಮೇಲಿನ ಬಾನಿನಲ್ಲಿ ಆವರಿಸಿದಂತೆ ಕಂಡುಬರುತ್ತಿತ್ತು. ಒಮ್ಮೆ ಆಗಸದತ್ತ ಮುಖಮಾಡಿ ನಿಟ್ಟುಸಿರು ಬಿಟ್ಟು ಬರುವ ಬಯಕೆಯಾಗಿ ಹೊರ ಬಂದರೆ, ಇದ್ದಕ್ಕಿದ್ದಂತೆ ನಾಲ್ಕಾರು ಹನಿಗಳ ಸಿಂಚನ. ಹನಿಗಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಇದ್ದಕ್ಕಿದ್ದಂತೆ ಧೋ ಗುಟ್ಟುತ್ತಾ ಮಳೆ ಸುರಿಯಲಾರಂಭಿಸಿತು. ಪಕ್ಕದಲ್ಲಿದ್ದ ಗೆಳೆಯರಾರೋ ಪ್ರಶ್ನಿಸಿದರು; ಇದೆಂಥಾ ಮಳೆ ? ಸ್ವಗತವೆಂಬಂತೆ ಆದರೆ, ಸ್ವರ ಬಿಟ್ಟೇ ಉಸುರಿದ್ದೆ ಒನಕೆಮಳೆ’, ಮುಸಲಧಾರೆ !


ಬಿಟ್ಟೂಬಿಡದೇ ಅರ್ಧ ತಾಸು ನನ್ನ ನೆಚ್ಚಿನ ಮಳೆ ಸುರಿಯುತ್ತಲೇ ಇತ್ತು. ಹೊಸ ಮಿತ್ರರಲ್ಲಿ ಕೆಲವರು ರೇಗಿಸಿದರು; ನೆರಳೂ ಸಿಕ್ಕಿತ್ತು, ಜತೆಗೆ ನೀರೂ ಬಂತು. ಅವರದನ್ನು ಹಾಗೇ ಸುಮ್ಮನೇ ಹೇಳಿದ್ದರೂ ನನ್ನ ಪಾಲಿಗೆ ನೀರು-ನೆರಳೆರಡೂ ಹೊಸ ಕಚೇರಿಯ ಬಾಗಿಲಲ್ಲೇ ದಕ್ಕಿತ್ತು.


ಕೊನೆಗೂ ಎರಡೂವರೆ ತಿಂಗಳ ವನವಾಸಕ್ಕೆ ಮಂಗಳ ಹಾಡಿದ್ದೆ. ಡಿಸೆಂಬರ್ ೮, ೨೦೧೦ರ ಮಧ್ಯಾಹ್ನ ವಿಜಯ ಕರ್ನಾಟಕವನ್ನು ತೊರೆದು ಬಂದ ಬಳಿಕ ಪತ್ರಿಕಾ ಕಚೇರಿಗಳ ಕಡೆ ಮುಖ ಹಾಕಿ ನೋಡಿರಲಿಲ್ಲ. ಇಷ್ಟು ಸುದೀರ್ಘ ವಿಶ್ರಾಂತಿಯೆಂದರೆ ನಿಜವಾದ ಪತ್ರಕರ್ತನೊಬ್ಬನಿಗೆ ಅದಕ್ಕಿಂತಲೂ ಕಠಿಣ ಶಿಕ್ಷೆ ಬೇರೊಂದು ಇರಲಾರದು. ಆದರೆ ಇದೊಂದು ರೀತಿಯ ಅದ್ಭುತ ಅನುಭವ. ಜೀವನದಲ್ಲಿ ಮ್ಮೆಯಾದರೂ ಇಂಥ ಸಮಯ ಬರದಿದ್ದರೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಲೇ ಆಗದೇನೋ. ನಾವೇನು ಎಂಬುದನ್ನು ಕಂಡುಕೊಳ್ಳುವುದರ ಜತೆಗೆ ನಿಜವಾಗಿ ನಮ್ಮವರು ಯಾರು ಎಂಬುದನ್ನು ಅರಿಯಲು ಸಾಧ್ಯವಾದದ್ದು ಈ ಅವಯ ಲಾಭ. ಹಾಗೆ ನೋಡಿದರೆ ನಿಜವಾಗಿ ನನ್ನ ಜತೆಗೆ ನಿಂತವರು ನನ್ನ ಅಭಿಮಾನಿ ಓದುಗರು. ಯಾವುದೇ ಕಾರಣವಿಲ್ಲದೇ ಕೇವಲ ನನ್ನ ಬರಹಗಳಿಗಾಗಿಯೇ ನನ್ನನ್ನು ಪ್ರೀತಿಸಿದವರು ಅವರು. ನಾವು ಪತ್ರಿಕೆಯ ಒಳಗಿದ್ದಾಗಲೂ ಹೊರಗಿದ್ದಾಗಲೂ ಒಂದೇ ರೀತಿಯಲ್ಲಿ ಕಂಡವರು. ಏನಂದರೆ ಏನನ್ನೂ ಅಪೇಕ್ಷಿಸದೇ ನಿಷ್ಕಲ್ಮಷವಾದ ಪ್ರೀತಿಯ ಧಾರೆ ಹರಿಸಿದರು. ಅದೇ ನನ್ನಲ್ಲಿ ಧೈರ್ಯ, ವಿಶ್ವಾಸ ಮೂಡಿಸಿದವು. ಮತ್ತೆ ಹೊಸ ಸಾಹಸಕ್ಕೆ ಹುರಿದುಂಬಿಸಿದವು. ಯಾರ‍್ಯಾರೋ ಏನೇನೋ ಬರೆದರು, ಹೀಗಳೆದರು, ನಿಂದಿಸಿದರು, ಬಿದ್ದಾಗಲೇ ಕಲ್ಲು ಎಸೆಯಲು ಹವಣಿಸಿದರು, ಮತ್ತೆ ಕೆಲವರು ಹೊಗಳಿದರು, ಸಹಾನುಭೂತಿಯನ್ನೂ ವ್ಯಕ್ತಪಡಿಸಿದರು, ವೃಥಾ ಅನುಕಂಪ ತೋರಿದವರಿಗೂ ಕಡಿಮೆ ಇಲ್ಲ. ಇದಾವುದಕ್ಕೂ ನನ್ನ ಓದುಗರು ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಗೊತ್ತಿರುವುದು ನಿಷ್ಕಪಟ ಪ್ರೀತಿ. ಅದನ್ನು ನಿರಂತರ ನೀಡಿ, ನನ್ನಲ್ಲಿ ಬರಹ ಪ್ರೀತಿಯನ್ನು ಹೆಚ್ಚಿಸಿದರು.


ಹೆಚ್ಚಿಗೆ ಹೇಳಲೇನು ? ಮತ್ತೆ ಲೇಖನಿಗೆ ಸಾಣೆ ಹಿಡಿದುಕೊಂಡು ಸಜ್ಜಾಗಿದ್ದೇನೆ ಓದುಗರ ಅಪ್ಪಣೆಯ ಪಾಲಿಸಲು. ಮತ್ತದೇ ತುಂತುರು ಮಳೆ ಮನಕ್ಕೆ ಹಿತ ನೀಡುತ್ತಿದೆ. ಒಬ್ಬೊಬ್ಬ ಓದುಗನ ಪ್ರೀತಿಯೂ ಒಂದೊಂದು ಹನಿಯ ರೂಪದಲ್ಲಿ ಸೇಸೆಯಾಗುತ್ತಿದೆ. ಅದಕ್ಕೆ ತಲೆ ಒಡ್ಡಿದೇನೆ....ಇನ್ನೇನು ಬೇಕು ಜೀವನದಲ್ಲಿ ?

7 comments:

  1. All the best!! This positivism and hope is what we look for, in you writings.

    -Guru

    ReplyDelete
  2. ನೆರಳೂ ಸಿಕ್ಕಿತ್ತು, ಜತೆಗೆ ನೀರೂ ಬಂತು...
    wow...!!!

    All the best.....

    ReplyDelete
  3. ಶುಭಾಶಯಗಳು ರಾಧಣ್ಣ. ಆದಷ್ಟು ಬೇಗೆ ನೀರು ನೆರಳು ಲವಲವಿಕೆಯಿಂದ ಪ್ರಾರಂಭವಾಗಲಿ.

    ReplyDelete
  4. All the best sir. I am eagerly waiting for your articles.

    ReplyDelete
  5. Niru-Neralu sikkidamele bittane shuruvaagali... :)

    ReplyDelete