About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Tuesday, February 22, 2011

ಪ್ರೀತಿಯ ಸೇಸೆಗೆ ಶಿರವೊಡ್ಡಿ...


ಆ ಸುಂದರ ಸಂಜೆಯ ಮಳೆಯಲ್ಲಿ ನೆನೆದು ತೊಪ್ಪೆಯಾಗಿಬಿಡಬೇಕೆಂಬ ತವಕ. ಹುಚ್ಚೆದ್ದು ಕುಣಿಯುವ ಉತ್ಸಾಹ....


ಅದೇಕೋ ಕಾಣೆ, ಕಳೆದು ಮೂರ‍್ನಾಲ್ಕು ದಿನಗಳಿಂದ ಬೆಂಗಳೂರೆಂಬ ಬೆಂಗಳೂರಿನ ವಾತಾವರಣ ಇನ್ನಿಲ್ಲದಂತೆ ಜನರನ್ನು ಕಾದು ಕಂಗೆಡಿಸಿಬಿಟ್ಟಿತ್ತು. ಮೈಮನಗಳೆಲ್ಲ ಗಾರು ಗಬರೆದ್ದುಹೋಗಿತ್ತು. ನಡುವೆಯೇ ಹಾದು ಹೋದ ಹುಣ್ಣಿಮೆಯ ಬೆಳದಿಂಗಳ ರಾತ್ರಿಯೂ ಸಹ ತಣ್ಣನೆಯ ಅನುಭವನ್ನು ಕಸಿದುಕೊಂಡುಬಿಟ್ಟಿತ್ತು. ಶಿವರಾತ್ರಿಗೆ ಇನ್ನೂ ಹದಿನೈದು ದಿನಗಳಿವೆ ಎಂಬಾಗಲೇ ಚಳಿ ಸುಳಿವಿಲ್ಲದಂತೆ ಓಡಿ ಹೋಗಿತ್ತು. ಅದೆಂಥದ್ದೋ ಅರ್ಥವಿಲ್ಲದ ಅಸಹನೆ, ಆಯಾಸ, ದುಗುಡಗಳು ಸುಳಿದಾಡುತ್ತಿದ್ದವು. ಒಂದಕ್ಕೂ ಉತ್ತರ ಸಿಕ್ಕುತ್ತಿರಲಿಲ್ಲ. ಸುದೀರ್ಘ ತಾಳ್ಮೆಯ ಎಳೆ ಎಲ್ಲೋ ಬಿಚ್ಚಿಕೊಳ್ಳಲಾರಂಭಿಸಿದ ಅನುಭವ. ವ್ಯಾಖ್ಯಾನಕ್ಕೆ ಸಿಗದ ಬೇಸರ. ಇವೆಲ್ಲದರ ಪ್ರತೀಕವೋ ಎಂಬಂತೆ ನಿನ್ನೆ ಸೋಮವಾರದ ಬೆಳಗು ಎಂದಿನಂತಿರಲಿಲ್ಲ. ಸೂರ್ಯ ಮೂಡಿ ತಾಸು ಎರಡಾದರೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ. ಹಾಗಿದ್ದರೂ ಒಳಗೊಳಗೇ ಬೆವರು ಕಿತ್ತು ಬರುತ್ತಿತ್ತು. ಸ್ವಲ್ಪ ಹೊತ್ತಷ್ಟೇ ಮತ್ತೆ ಬಿಸಿಲು ಕಣ್ಬಿಟ್ಟಿತ್ತು. ಬಹುಶಃ ಮನದ ಸ್ಥಿತಿಯೂ ಅದೇ ಆಗಿತ್ತೇನೋ ?


ಇದ್ದ ಬದ್ದ ಉತ್ಸಾಹವನ್ನೆಲ್ಲಾ ಒಟ್ಟುಗೂಡಿಸಿಕೊಂಡು ಹೊರಟರೂ ಲವಲವಿಕೆಯ ಸುಳಿವಿಲ್ಲ. ಬಹುತೇಕ ಅದೇ ಸ್ಥಿತಿಯಲ್ಲೇ ರಾಜವೀಥಿಯ ಮಗ್ಗುಲಲ್ಲೇ ಮೇಲೆದ್ದು ನಿಂತಿರುವ ‘ಕನ್ನಡಪ್ರಭ’ಕಟ್ಟಡದ ನಾಲ್ಕನೇ ಮಹಡಿಯನ್ನೇರಿದ್ದೆ. ಬಿಸಿಲು ಅದೇ ಪರಿ ಬಾರಿಸುತ್ತಲೇ ಇತ್ತು. ನೆಚ್ಚಿನ ಸಂಪಾದಕರ ಕೊಠಡಿಯನ್ನು ಪ್ರವೇಶಿಸಿದಾಗ ೩.೪೦. ಐದೇ ನಿಮಿಷದಲ್ಲಿ ಪತ್ರಿಕೆಯ ಸಹಾಯಕ ಸಂಪಾದಕ ಹುದ್ದೆಯ ಆದೇಶ ಕೈ ಸೇರಿತ್ತು. ಔಪಚಾರಿಕ ಪ್ರಕ್ರಿಯೆ ಮುಗಿದು ಹೊಸ ಸಹೋದ್ಯೋಗಿಗಳತ್ತ ಸ್ನೇಹದ ಹಸ್ತ ಚಾಚಿದರೆ ಅಭೂತಪೂರ್ವ ಪ್ರತಿಕ್ರಿಯೆ. ಯಾರೊಬ್ಬರೂ ಹೊಸಬರಂತೆ ಅನ್ನಿಸಲೇ ಇಲ್ಲ. ಅರ್ಧಕ್ಕಿಂತ ಹೆಚ್ಚುಮಂದಿ ವೃತ್ತಿಯಿಂದ ಪರಿಚಿತರೇ. ಉಳಿದವರದ್ದು ಹೊಸ ಮುಖ. ಒಂದು ಸುತ್ತು ಮುಗಿಸಿ ಕಿಟಕಿಯಿಂದ ಹೊರಗಿಣುಕಿದರೆ ಬೆಳಗ್ಗೆ ಕಂಡದ್ದಕ್ಕಿಂತಲೂ ದಟ್ಟ ಮೋಡ ಕಚೇರಿಯ ಮೇಲಿನ ಬಾನಿನಲ್ಲಿ ಆವರಿಸಿದಂತೆ ಕಂಡುಬರುತ್ತಿತ್ತು. ಒಮ್ಮೆ ಆಗಸದತ್ತ ಮುಖಮಾಡಿ ನಿಟ್ಟುಸಿರು ಬಿಟ್ಟು ಬರುವ ಬಯಕೆಯಾಗಿ ಹೊರ ಬಂದರೆ, ಇದ್ದಕ್ಕಿದ್ದಂತೆ ನಾಲ್ಕಾರು ಹನಿಗಳ ಸಿಂಚನ. ಹನಿಗಳ ಸಂಖ್ಯೆ ಬೆಳೆಯುತ್ತಲೇ ಹೋಯಿತು. ಇದ್ದಕ್ಕಿದ್ದಂತೆ ಧೋ ಗುಟ್ಟುತ್ತಾ ಮಳೆ ಸುರಿಯಲಾರಂಭಿಸಿತು. ಪಕ್ಕದಲ್ಲಿದ್ದ ಗೆಳೆಯರಾರೋ ಪ್ರಶ್ನಿಸಿದರು; ಇದೆಂಥಾ ಮಳೆ ? ಸ್ವಗತವೆಂಬಂತೆ ಆದರೆ, ಸ್ವರ ಬಿಟ್ಟೇ ಉಸುರಿದ್ದೆ ಒನಕೆಮಳೆ’, ಮುಸಲಧಾರೆ !


ಬಿಟ್ಟೂಬಿಡದೇ ಅರ್ಧ ತಾಸು ನನ್ನ ನೆಚ್ಚಿನ ಮಳೆ ಸುರಿಯುತ್ತಲೇ ಇತ್ತು. ಹೊಸ ಮಿತ್ರರಲ್ಲಿ ಕೆಲವರು ರೇಗಿಸಿದರು; ನೆರಳೂ ಸಿಕ್ಕಿತ್ತು, ಜತೆಗೆ ನೀರೂ ಬಂತು. ಅವರದನ್ನು ಹಾಗೇ ಸುಮ್ಮನೇ ಹೇಳಿದ್ದರೂ ನನ್ನ ಪಾಲಿಗೆ ನೀರು-ನೆರಳೆರಡೂ ಹೊಸ ಕಚೇರಿಯ ಬಾಗಿಲಲ್ಲೇ ದಕ್ಕಿತ್ತು.


ಕೊನೆಗೂ ಎರಡೂವರೆ ತಿಂಗಳ ವನವಾಸಕ್ಕೆ ಮಂಗಳ ಹಾಡಿದ್ದೆ. ಡಿಸೆಂಬರ್ ೮, ೨೦೧೦ರ ಮಧ್ಯಾಹ್ನ ವಿಜಯ ಕರ್ನಾಟಕವನ್ನು ತೊರೆದು ಬಂದ ಬಳಿಕ ಪತ್ರಿಕಾ ಕಚೇರಿಗಳ ಕಡೆ ಮುಖ ಹಾಕಿ ನೋಡಿರಲಿಲ್ಲ. ಇಷ್ಟು ಸುದೀರ್ಘ ವಿಶ್ರಾಂತಿಯೆಂದರೆ ನಿಜವಾದ ಪತ್ರಕರ್ತನೊಬ್ಬನಿಗೆ ಅದಕ್ಕಿಂತಲೂ ಕಠಿಣ ಶಿಕ್ಷೆ ಬೇರೊಂದು ಇರಲಾರದು. ಆದರೆ ಇದೊಂದು ರೀತಿಯ ಅದ್ಭುತ ಅನುಭವ. ಜೀವನದಲ್ಲಿ ಮ್ಮೆಯಾದರೂ ಇಂಥ ಸಮಯ ಬರದಿದ್ದರೆ ನಮ್ಮನ್ನು ನಾವು ಅವಲೋಕಿಸಿಕೊಳ್ಳಲೇ ಆಗದೇನೋ. ನಾವೇನು ಎಂಬುದನ್ನು ಕಂಡುಕೊಳ್ಳುವುದರ ಜತೆಗೆ ನಿಜವಾಗಿ ನಮ್ಮವರು ಯಾರು ಎಂಬುದನ್ನು ಅರಿಯಲು ಸಾಧ್ಯವಾದದ್ದು ಈ ಅವಯ ಲಾಭ. ಹಾಗೆ ನೋಡಿದರೆ ನಿಜವಾಗಿ ನನ್ನ ಜತೆಗೆ ನಿಂತವರು ನನ್ನ ಅಭಿಮಾನಿ ಓದುಗರು. ಯಾವುದೇ ಕಾರಣವಿಲ್ಲದೇ ಕೇವಲ ನನ್ನ ಬರಹಗಳಿಗಾಗಿಯೇ ನನ್ನನ್ನು ಪ್ರೀತಿಸಿದವರು ಅವರು. ನಾವು ಪತ್ರಿಕೆಯ ಒಳಗಿದ್ದಾಗಲೂ ಹೊರಗಿದ್ದಾಗಲೂ ಒಂದೇ ರೀತಿಯಲ್ಲಿ ಕಂಡವರು. ಏನಂದರೆ ಏನನ್ನೂ ಅಪೇಕ್ಷಿಸದೇ ನಿಷ್ಕಲ್ಮಷವಾದ ಪ್ರೀತಿಯ ಧಾರೆ ಹರಿಸಿದರು. ಅದೇ ನನ್ನಲ್ಲಿ ಧೈರ್ಯ, ವಿಶ್ವಾಸ ಮೂಡಿಸಿದವು. ಮತ್ತೆ ಹೊಸ ಸಾಹಸಕ್ಕೆ ಹುರಿದುಂಬಿಸಿದವು. ಯಾರ‍್ಯಾರೋ ಏನೇನೋ ಬರೆದರು, ಹೀಗಳೆದರು, ನಿಂದಿಸಿದರು, ಬಿದ್ದಾಗಲೇ ಕಲ್ಲು ಎಸೆಯಲು ಹವಣಿಸಿದರು, ಮತ್ತೆ ಕೆಲವರು ಹೊಗಳಿದರು, ಸಹಾನುಭೂತಿಯನ್ನೂ ವ್ಯಕ್ತಪಡಿಸಿದರು, ವೃಥಾ ಅನುಕಂಪ ತೋರಿದವರಿಗೂ ಕಡಿಮೆ ಇಲ್ಲ. ಇದಾವುದಕ್ಕೂ ನನ್ನ ಓದುಗರು ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಗೊತ್ತಿರುವುದು ನಿಷ್ಕಪಟ ಪ್ರೀತಿ. ಅದನ್ನು ನಿರಂತರ ನೀಡಿ, ನನ್ನಲ್ಲಿ ಬರಹ ಪ್ರೀತಿಯನ್ನು ಹೆಚ್ಚಿಸಿದರು.


ಹೆಚ್ಚಿಗೆ ಹೇಳಲೇನು ? ಮತ್ತೆ ಲೇಖನಿಗೆ ಸಾಣೆ ಹಿಡಿದುಕೊಂಡು ಸಜ್ಜಾಗಿದ್ದೇನೆ ಓದುಗರ ಅಪ್ಪಣೆಯ ಪಾಲಿಸಲು. ಮತ್ತದೇ ತುಂತುರು ಮಳೆ ಮನಕ್ಕೆ ಹಿತ ನೀಡುತ್ತಿದೆ. ಒಬ್ಬೊಬ್ಬ ಓದುಗನ ಪ್ರೀತಿಯೂ ಒಂದೊಂದು ಹನಿಯ ರೂಪದಲ್ಲಿ ಸೇಸೆಯಾಗುತ್ತಿದೆ. ಅದಕ್ಕೆ ತಲೆ ಒಡ್ಡಿದೇನೆ....ಇನ್ನೇನು ಬೇಕು ಜೀವನದಲ್ಲಿ ?

Monday, February 7, 2011

ನಿಜವಾದ ಬ್ರೇಕಿಂಗ್ ನ್ಯೂಸ್

ಬೆಸ್ಟ್ ವಿಷಸ್ ಟು ವಿಷ್ ಭಟ್....

ಅಬ್ಬಾ, ಕೊನೆಗೂ ನಾವು ಕಾಯುತ್ತಿದ್ದ ಕಾಲ ಬಂದೇ ಬಿಟ್ಟಿದೆ. ‘ಒಂದಾಟ ಭಟ್ರುದ್ದು’ ಎಂಬ ವಿನೂತನ ನಾಟಕವನ್ನು ರಂಗದ ಮೇಲೆ ತರಲು ಅತ್ತ ನಾಟಕಕಾರ ಯಶವಂತ ಸರದೇಶಪಾಂಡೆ ರಿಹರ್ಸಲ್ ನಡೆಸುತ್ತಿದ್ದಾಗಲೇ ನಮ್ಮ ಭಟ್ರು ಆಟ ಶುರು ಮಾಡೇಬಿಟ್ಟಿದ್ದಾರೆ ಕಣ್ರಿ.


ನಿಜವಾದ ಬ್ರೇಕಿಂಗ್ ನ್ಯೂಸ್ ಇದು ಸ್ವಾಮಿ, ನಮ್ಮ ನೆಚ್ಚಿನ ಸಂಪಾದಕ ವಿಶ್ವೇಶ್ವರ ಭಟ್ಟರು ‘ಕನ್ನಡ ಪ್ರಭ’ದ ಮುಖ್ಯ ಸಂಪಾದಕರಾಗಿ ಇವತ್ತು (ಸೋಮವಾರ, ೦೭.೦೨.೨೦೧೧) ಮಧ್ಯಾಹ್ನ ಅಭಿಜಿನ್ ಮೂಹೂರ್ತದಲ್ಲಿ ಅಕಾರ ಸ್ವೀಕರಿಸಿದ್ದಾರೆ. ಕನ್ನಡದ ಓದುಗರಿಗೆ ಇದಕ್ಕಿಂತ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಬೇರಾವುದು ಇದ್ದೀತು ? ಅದೇ ಕ್ಷಣಕ್ಕೆ ಕೆಲವರ ಪಾಲಿಗೆ ಇದು ಹಾರ್ಟ್ ಬ್ರೇಕಿಂಗ್ ನ್ಯೂಸ್ ಆಗಿಯೂ ಕಾಡಿರುತ್ತದೆ ಎಂಬ ಅರಿವು ಇದ್ದೇ ಇದೆ. ಏನು ಮಾಡೋದು ? ತಲೆಗೆ ಹೊಯ್ದ ನೀರು ಕಾಲಿಗೆ ಇಳಿಯಲೇ ಬೇಕಲ್ಲಾ ?

ಈ ಎರಡು ತಿಂಗಳಲ್ಲಿ ಯಾರ‍್ಯಾರೋ ತಲೆಗೆ ಏರಿಸಿಕೊಂಡಿದ್ದರು, ಯಾರ‍್ಯಾರದೋ ತಲೆ ತಿರುಗಿತ್ತು, ಇನ್ಯಾರ‍್ಯಾರೋ ತಲೆ ಕೆಡಿಸಿಕೊಂಡಿದ್ದರು...ಆಗೋದೆಲ್ಲಾ ಒಳ್ಳೇದಕ್ಕೇ ಎಂಬ ಪಾಸಿಟೀವ್ ಥಿಂಕಿಂಗ್ ನಮ್ಮದಾಗಿತ್ತು. ಒಂದು ರೀತಿಯಲ್ಲಿ ನಮ್ಮ ಸಾಮರ್ಥ್ಯದ ನೈಜ ಅರಿವು ಆದದ್ದೇ ಈ ಅವಯಲ್ಲಿ. ಎಲ್ಲಕ್ಕಿಂತ ಹೆಚ್ಚಾಗಿ ಈ ಅವಯಲ್ಲಿ ಬಹಳಷ್ಟು ‘ಮಿತ್ರರ’ ಮುಖವಾಡ ಕಳಚಿಬಿದ್ದಿದೆ. ಎಲ್ಲವನ್ನು ಕೊಡವಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಆಟ ಶುರು ಮಾಡಿದ್ದಾರೆ ಭಟ್ಟರು. ನಾವುಗಳೂ ವೀರ ಯೋಧರಂತೆ ಭಟ್ಟರ ಸಮರ್ಥ ಸೇನಾಪತ್ಯದಲ್ಲಿ ಮುನ್ನುಗ್ಗಲು ಸಜ್ಜಾಗಿದ್ದೇವೆ. ಇನ್ನೇನು ಅಕೋ, ಇಕೋ ಎನ್ನುವಷ್ಟರಲ್ಲಿ ಒಂದೇ ಮನಸ್ಸಿನಲ್ಲಿ ಮತ್ತೆ ಓದುಗ ದೊರೆಯ ದಾಹ ತಣಿಸಲು ಹೊರಡುತ್ತೇವೆ.

ಒಬ್ಬೊಬ್ಬ ಓದುಗನೂ ತಾನೇ ಸಂಪಾದಕ ಹುದ್ದೆಗೇರಿದಷ್ಟು ಸಂಭ್ರಮ ಪಡುತ್ತಿದ್ದಾನೆ. ಒಬ್ಬೊಬ್ಬರ ಉತ್ಸಾಹವನ್ನೂ ನೀವು ನೋಡಬೇಕು. ಬೆಳಗ್ಗಿನಿಂದ ಫೋನ್ ಕಾಲ್‌ಗಳದ್ದೇ ಪಾರುಪತ್ಯ. ಖಂಡಿತಾ ಓದುಗರ ನಿರೀಕ್ಷೆ ನಮ್ಮನ್ನು ದಂಗಾಗಿಸಿದೆ. ಇಂಥದ್ದೊಂದು ಭೀಮ ಬಲದೊಂದಿಗೆ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲು ಹೊರಡುತ್ತೇವೆ. ನಿಮ್ಮೆಲ್ಲರ ಕಣ್ಕಾಪು ಎಚ್ಚರ ತಪ್ಪದಂತೆ ಸರಿದಾರಿಯಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನಮಗಿದೆ. ಗುರಿ ಮುಟ್ಟುವರೆಗೆ ಇನ್ನು ವಿರಮಿಸುವ ಪ್ರಶ್ನೆಯೇ ಇಲ್ಲ. ಮನ ಹುಚ್ಚೆದ್ದು ಕುಣಿಯುತ್ತಿದೆ. ಹೆಚ್ಚು ಬರೆಯಲು ಇವತ್ತು ಸಾಧ್ಯವೇ ಇಲ್ಲ. ಪತ್ರಿಕೆಗಳಲ್ಲಿ ಬರೆಯಲು ಇನ್ನೂ ಸಾಕಷ್ಟಿದೆಯಲ್ಲಾ ? ಇನ್ನು ದಿನವಿಲ್ಲ. ಲೇಖನಿಗೆ ಸಾಣೆ ಹಿಡಿದುಕೊಳ್ಳಬೇಕು. ಬರಲೇ...?

ನಿಮ್ಮ
ಗಿಂಡಿ ಮಾಣಿ

Saturday, February 5, 2011

ಈ ಪರಿ ದ್ವೇಷ ಅವನ ತಪ್ಪಲ್ಲ, ಮಾನಸಿಕ ವಿಕೃತಿ


ದು ಮೂಲಭೂತ ಪ್ರಶ್ನೆ. ಕೊಡೆ ಹಿಡಿಯಲು ಕಾರಣವೇನು ?
ಉತ್ತರ ಬಹಳ ಸರಳ. ಒಂದೇ ಮಳೆ ಸುರಿಯುತ್ತಿರಬೇಕು. ಇಲ್ಲವೇ ಬಿಸಿಲು ಭಾರಿಸುತ್ತಿರಬೇಕು. ‘ನೀರು-ನೆರಳು’ಎರಡೇ ಕಾರಣಕ್ಕೆ ಕೊಡೆ ಉಪಯೋಗಿಸುವುದು. ಇದನ್ನು ಹೊರತಾಗಿ ಒಮ್ಮೊಮ್ಮೆ ಅದನ್ನು ಬಳಸುವುದೆಂದರೆ ಕೆಲ ‘ಛತ್ರಿ’ ಮಂದಿ ರಸ್ತೆಯಲ್ಲಿ ಕೆಸರು ಎರಚಿಕೊಂಡು ಹೋಗುತ್ತಿರುತ್ತಾರೆ. ಅದು ನಮ್ಮತ್ತ ರಾಚದಿರಲಿ ಎಂಬ ಕಾರಣಕ್ಕೆ ಕೊಡೆಯನ್ನು ಅಡ್ಡಲಾಗಿ ಹಿಡಿಯುವುದೂ ಉಂಟೆನ್ನಿ.


ಇದ್ದಕ್ಕಿದ್ದಂತೆ ಕೊಡೆಯ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುವುದಕ್ಕೂ ಕಾರಣವಿದೆ. ಒಪ್ಪಿಕೊಳ್ಳುತ್ತೇನೆ. ಈ ಸಮಾಜದಲ್ಲಿ ನಮ್ಮ ಎಲ್ಲ ನಡೆಗಳಿಗೂ ನಾವು ಉತ್ತರಿಸಲೇಬೇಕಿಲ್ಲ. ಹಾಗೆ ಮಾಡಿದರೆ ಹೀಗೆ, ಹೀಗೆ ಮಾಡಿದರೆ ಹಾಗೆ ಪ್ರಶ್ನಿಸುವ ಜನ ಇದ್ದೇ ಇರುತ್ತಾರೆ. ನಮ್ಮ ಆತ್ಮ ಸಾಕ್ಷಿಗನುಗುಣವಾಗಿ ನಾವು ನಡೆದುಕೊಳ್ಳುವುದೇ ಸೂಕ್ತ. ಇನ್ನು ಕೆಲವೊಂದಕ್ಕೆ ಕಾಲವೇ ಉತ್ತರಿಸುತ್ತದೆ. ಹೀಗಿದ್ದೂ ಛತ್ರಿ ಮಂದಿ ವಿನಾಕಾರಣ ಕೆಸರು ಎರಚಲು ಬಂದಾಗ ಕೊಡೆಯನ್ನು ಅಡ್ಡ ಹಿಡಿಯಲೇಬೇಕಾಗುತ್ತದೆ. ಮಾತ್ರವಲ್ಲ ಅಂಥವರನ್ನು ನಿಲ್ಲಿಸಿ ಚೆನ್ನಾಗಿ ಉಗಿದು ಮುಖದ ನೀರಿಳಿಸವುದೂ ಅಗತ್ಯವಾಗುತ್ತದೆ.


ನಾನು ‘ನೀರ್‌ಸಾಧಕ್’ನನ್ನು ಬಿಟ್ಟು ‘ಗಿಂಡಿಮಾಣಿ’ಯ ಬೆನ್ನು ಹತ್ತಿದಾಗ ಬಹಳಷ್ಟು ಮಂದಿ ಇದರ ಔಚಿತ್ಯವನ್ನು ಪ್ರಶ್ನೆ ಮಾಡಿದರು. ಅದು ಸಹಜವೂ ಸಹ. ಹಾಗೆಂದು ಎಲ್ಲದಕ್ಕೂ ಉತ್ತರಿಸಲೇಬೇಕೆಂದೇನೂ ಇಲ್ಲ. ಏಕೆಂದರೆ ಇಂಥ ಬ್ಲಾಗ್‌ಗಳನ್ನು ಓದುವುದೂ, ಬಿಡುವುದು ಓದುಗರ ಸ್ವಾತಂತ್ರ್ಯಕ್ಕೆ ಬಿಟ್ಟ ವಿಚಾರ. ಪತ್ರಿಕೆಗಳಲ್ಲಿ ಅಂಕಣವಾದರೆ ಹಾಗಲ್ಲ. ಅಲ್ಲಿ ಓದುಗ ದೊರೆಯ ಆಜ್ಞೆಯೇ ಅಂತಿಮ. ಹೀಗಿದ್ದರೂ ನನ್ನ ತೀರಾ ಅಭಿಮಾನಿ ಓದುಗರಲ್ಲಿ ಕೆಲವರು; ಶ್ರೀನಿವಾಸ್, ಗುರು(ಮಯೂರ), ಹರಿಹರಭಟ್ ಮತ್ತಿತರರಂಥವರು ನರಿಕೊಳಗೆರೆ ಮತ್ತು ನಮ್ಮ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಪ್ರಶ್ನಿಸಿದರು. ಅಂಥ ಆತ್ಮೀಯ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುವುದು ನನ್ನ ಕರ್ತವ್ಯ ಎಂಬ ಕಾರಣಕ್ಕೆ ಈ ಬರಹ.


ಒಂದು ವಿಚಾರವನ್ನು ಮೊದಲೇ ಸ್ಪಷ್ಟ ಪಡಿಸಿಬಿಡುತ್ತೇನೆ. ಕೊಳಗೆರೆಗೂ ನನಗೂ ಯಾವತ್ತೂ ಸ್ನೇಹವೆಂಬುದು ಇರಲೇ ಇಲ್ಲ. ಆತನ ಪತ್ರಿಕೆಯನ್ನು ನಾನು ಯಾವತ್ತೂ ಗಂಭೀರವಾಗಿ ಪರಿಗಣಿಸಿಯೂ ಇರಲಿಲ್ಲ. ಏಕೆಂದರೆ ಯಾವುದೇ ಅಧ್ಯಯನವಿಲ್ಲದೇ, ಹೆಚ್ಚಿನ ಶ್ರಮವಿಲ್ಲದೇ ಕೇವಲ ಭಾವನಾತ್ಮಕ ಬರಹಗಳಿಂದ, ಪ್ರಚೋದಕ ಸಾಹಿತ್ಯದಿಂದ, ಅತಿರಂಜಿತ ವರದಿಗಳಿಂದ, ರತಿ-ಅಪರಾಯ ವಿಷಯಗಳಿಂದಲೇ ಓದುಗರ ಮನಸ್ಸನ್ನು ಕದಡುವುದು ನನ್ನ ದೃಷಿಯಲ್ಲಿ ಅತ್ಯಾಚಾರವೆಂದೇ ಪರಿಗಣಿತ. ಅದೇನೂ ಮಹಾ ವಿದ್ಯೆಯೂ ಅಲ್ಲ; ಸಾಧನೆಯೂ ಅಲ್ಲ. ಆದರೆ ನೀರಿನಂಥ ಪಕ್ಕಾ ವಿಜ್ಞಾನವನ್ನು ಓದಿಸುವುದು ಎಂಥ ಸಾಹಸವೆಂಬುದು ನಾನು ನನ್ನಂಥವನಿಗೆ ಮಾತ್ರ ಗೊತ್ತು. ನಾಲ್ಕು ಗೋಡೆಗಳ ನಡುವೆ ಕುಳಿತು, ಇಂಟರ್‌ನೆಟ್ ಸಹಾಯದಿಂದಲೋ, ನಾಲ್ಕಾರು ಪುಸ್ತಕಗಳ ಸಾಲನ್ನು ಕದ್ದೋ ಬರೆಯವುದು ಇಂಥ ವಿಚಾರಗಳಲ್ಲಿ ಸಾಧ್ಯವೇ ಇಲ್ಲ. ಇದಕ್ಕೊಂದು ಅಧ್ಯಯನದ ಶಿಸ್ತು ಬೇಕು. ನಾಲ್ಕಾರು ಮಂದಿಯ ಜತೆ ಚರ್ಚಿಸಬೇಕು. ನೂರಕ್ಕೆ ನೂರು ಕ್ಷೇತ್ರ ಕಾರ್ಯವನ್ನು ಬೇಡುವ ಕೆಲಸವದು. ಕಳೆದ ಹತ್ತು ವರ್ಷ ನಾನಿದನ್ನು ಮಾಡಿದ್ದೇನೆ ಎಂಬುದಕ್ಕೆ ನನ್ನ ಓದುಗರೇ ಸಾಕ್ಷಿ.


ಕ್ಷುಲ್ಲಕ ವಿಷಯಗಳನ್ನು ನಾನು ಎಂದೂ ಬರೆದವನಲ್ಲ. ಹೀಗಾಗಿ ನನ್ನ ಅಂಕಣಗಳಲ್ಲಾಗಲೀ, ನಾನು ಕಾರ್ಯ ನಿರ್ವಹಿಸಿದ ಯಾವುದೇ ಪತ್ರಿಕಾ ವಿಭಾಗದಲ್ಲಾಗಲೀ ಈ ಕೊಳಗೆರೆಯ ವಿಚಾರವನ್ನು ಪ್ರಸ್ತಾಪಿಸುವ ಔಚಿತ್ಯ ಕಾಣಲಿಲ್ಲ. ಇಲ್ಲೂ ಬರೆಯುತ್ತಿರಲಿಲ್ಲವೇನೋ. ಆದರೆ ನಾವು ನೀರು ನೆರಳಿನಿಂದ ಹೊರಬಂದು ನಿಶ್ಯಸ್ತ್ರರಾಗಿ ನಿಂತದ್ದನ್ನು ನೋಡಿಯೇ ಈತ ಕಲ್ಲು ಬೀಸಲಾರಂಭಿಸಿದ್ದು. ಅದೂ ತಾನು ಗಾಜಿನ ಮನೆಯಲ್ಲಿ ನಿಂತು. ಹಾಗೆಂದು ನಾವೇನೂ ಆತ ಬೀಸಿದ ಕಲ್ಲಿಗೆಲ್ಲಾ ಗುರಿಯಾಗಬೇಕೆಂದೇನೂ ಇಲ್ಲವಲ್ಲಾ? ಅಥವಾ ನಾವು ಕನಿಷ್ಠ ಪ್ರತಿಭಟನೆಯನ್ನೂ ತೋರದ ದುರ್ಬಲರೂ ಆಗಿರಲಿಲ್ಲ.


ಶ್ರೀ ವಿಶ್ವೇಶ್ವರ ಭಟ್ ಮತ್ತು ಅವರ ನಡುವೆ ಸ್ನೇಹವಿದ್ದುದು ನಿಜ. ಭಟ್ಟರನ್ನು ಬಲ್ಲ ಎಲ್ಲರಿಗೂ ಗೊತ್ತು ಅವರ ಸ್ವಭಾವ ಎಂಥದ್ದು ಎಂಬುದು. ಸ್ನೇಹಶೀಲರಾದ ಅವರು ಯಾವತ್ತಿಗೂ ಯಾರ ಸ್ನೇಹವನ್ನೂ ನಿರಾಕರಿಸಿದ್ದಿಲ್ಲ. ಸುದ್ದಿಮನೆಯ ಒಳಗಿರಲಿ, ಹೊರಗಿರಲಿ ಅದನ್ನು ಸದುಪಯೋಗಪಡಿಸಿಕೊಂಡಿದ್ದಕ್ಕಿಂತ ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಅದೇ ಸಾಲಿಗೆ ಈ ಕೊಳಗೆರೆಯೂ ಸೇರುತ್ತಾನೆ. ಸುದ್ದಿಮನೆಯ ಹೊರಗೆ ಇವನಾದರೆ ಒಳಗೆ ಆತನ ಒಂದಷ್ಟು ಶಿಷ್ಯರೂ ಇದ್ದಾರೆ. ಹಾಗೆಂದು ಯಾವತ್ತಿಗೂ ಇವ ನನ್ನ ಗೆಳೆಯ ಎಂದು ಭಟ್ಟರು ಸಾರಿಕೊಳ್ಳುತ್ತಾ ಹೋಗಲಿಲ್ಲ. ಇಂದಿಗೂ ಅವರದ್ದು ‘ಜನ್ಮೇಪಿ ಗೆಳೆತನ’ವೇ. ಅದನ್ನು ಉಳಿಸಿಕೊಳ್ಳುವುದು ಬಿಡುವುದು ಅವರವರಿಗೆ ಬಿಟ್ಟದ್ದು.


ಇನ್ನು ಪ್ರತಾಪ ಸಿಂಹ ಪಕ್ಕಾ ಸೈದ್ಧಾಂತಿಕ ಮನುಷ್ಯ. ಪ್ರತಾಪನ ವಿಚಾರಗಳು ನಮಗೆ ಸರಿ ಕಾಣುತ್ತಿಲ್ಲ ಎಂಬ ಮಾತ್ರಕ್ಕೆ ಆತನನ್ನು ವೈಯಕ್ತಿಕವಾಗಿ ಟೀಕಿಸುವುದು, ದ್ವೇಷಿಸುವುದು ಸರಿಯೇ ? ಇಲ್ಲಿ ಸಿದ್ಧಾಂತದ ವಿರೋಧ ಎನ್ನುವುದಕ್ಕಿಂತ ಪ್ರತಾಪನ ಜನಪ್ರಿಯತೆ, ಅಂಕಣಕಾರನಾಗಿ ಆತ ಬೆಳೆಯುತ್ತಿರುವ ವೇಗ ಕೊಳಗೆರೆಯಂಥವನಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನ ಭಾವನೆ. ಇದೂ ಸಹ ಅವರಿಬ್ಬರಿಗೆ ಸೇರಿದ್ದು.


ಹಾಗೆಂದು ನಾವುಗಳು ಪೂಜಿಸುವ ನಮ್ಮ ಸುದ್ದಿಮನೆಗೂ ಕೊಳಗೆರೆಯಂಥವನನ್ನು ಎಳೆದು ತಂದು, ಆತನ ಕಲ್ಯಾಣಗುಣಗಳನ್ನು ನಮ್ಮ ನಮ್ಮ ಅಂಕಣಗಳಲ್ಲಿ ಸಾರಬೇಕಿತ್ತೇ ? ಹಾಗೊಮ್ಮೆ ಮಾಡಿದ್ದರೆ ಕೊಳಗೆರೆಗೂ ನಮಗೂ ಉಳಿಯುವ ವ್ಯತ್ಯಾಸವಾದರೂ ಏನು ? ಅವನಂತೆ ಬೇರೆಯವರ ಬಗ್ಗೆ ಬರೆದೇ, ಯಾರದ್ದೋ ಚಾರಿತ್ರ್ಯ ವಧೆ ಮಾಡಿಯೇ ನಾವು ಅನ್ನ ಕಾಣಬೇಕಿಲ್ಲ; ಓದುಗರನ್ನು ಹೆಚ್ಚಿಸಿಕೊಳ್ಳಬೇಕಿಲ್ಲ. ಅದಕ್ಕಾಗಿ ಈವರೆಗೆ ಆತನ ಬಗ್ಗೆ ಎಲ್ಲ ಗೊತ್ತಿದ್ದೂ ಬರೆಯು ಪ್ರಸಂಗ ಬಂದಿರಲಿಲ್ಲ. ಮತ್ತು ನಮ್ಮ ಪತ್ರಿಕೆ ಅಂಥದ್ದಕ್ಕೆ ಸೂಕ್ತ ವೇದಿಕೆಯೂ ಅಲ್ಲ; ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವುದು ನಮ್ಮ ಜಾಯಮಾನವೂ ಅಲ್ಲ. ನನಗಂತೂ ಮೊನ್ನೆ ಮೊನ್ನೆ ನಾನು ‘ವಿಕ’ವನ್ನು ತೊರೆದು, ಆತ ನನ್ನ ಬಗ್ಗೆ ವೃಥಾ ಕೆಸರೆರಚುವವರೆಗೆ ಆತನೊಂದಿಗೆ ಸ್ನೇಹವೂ ಇರಲಿಲ್ಲ, ದ್ವೇಷವೂ ಇರಲಿಲ್ಲ.


ಹಾಗೆ ನೋಡಿದರೆ ಆ ಮನುಷ್ಯನ ಜತೆಗೆ ನಾನು ಮೊನ್ನೆ ಮೊನ್ನೆ ಫೊನ್‌ನಲ್ಲಿ ಮಾತನಾಡಿದ್ದೇ ಎರಡನೇ ಬಾರಿಯೋ, ಮೂರನೇ ಬಾರಿಯೋ. ಹಿಂದೊಮ್ಮೆ ಆತ ಕರ್ಮವೀರದ ಸಂಪಾದಕರಾಗಿದ್ದಾಗ ನಾನು ಆಗಷ್ಟೇ ಸಂಯುಕ್ತ ಕರ್ನಾಟಕಕ್ಕೆ ಸೇರಿದ್ದೆ. ಅದಾದ ಮೂರು ತಿಂಗಳಲ್ಲೇ ಆತನ ‘ಲೋಕ’ ಕೆ. ಶಾಮರಾವ್ ಅವರ ಮುಂದೆ ತೆರೆದುಕೊಂಡಿತ್ತು. ಅಷ್ಟೆ, ಅಕ್ಷರಶಃ ಅಲ್ಲಿಂದ ಓಡಿಸಿದ್ದರು ರಾಯರು. ಆನಂತರ ಕಪ್ಪು ಸುಂದರಿಯನ್ನು ಆರಂಭಿಸಿದ್ದು, ಪದ್ಮನಾಭ ನಗರದ ಸ್ಕೂಟರ್ ಗ್ಯಾರೇಜ್‌ನಲ್ಲಿ ಬೋರೆಂದು ಅತ್ತಿದ್ದು, ಯಾರ‍್ಯಾರೋ ಅವರ ತುತ್ತಿನ ಚೀಲ ತುಂಬಿದ್ದು, ಕೊನೆಗೂ ಪ್ರತಿಭಾ ನಂದಕುಮಾರ್ ಜತೆಗೆ ಬಂದು ಸಂಸ್ಥೆಗೆ ಕೊಡಬೇಕಿದ್ದ ಬಾಕಿ ಹಣವನ್ನು ಕಟ್ಟಿ ತಮ್ಮ ದ್ವಿಚಕ್ರ ವಾಹನವನ್ನು ಬಿಡಿಸಿಕೊಂಡು ಹೋಗಿದ್ದು, ವರ್ಷದಲ್ಲಿ ವಾರದ ಅಚ್ಚರಿಯೆನ್ನುತ್ತಲೇ ಬೊಗಳೆ ಬಿಟ್ಟು, ಸ್ವ ಕುಚ ಮರ್ಧನ ಮಾಡಿಕೊಳ್ಳುತ್ತಲೇ ಮತ್ತೆ ನಿಗರಿಕೊಂಡದ್ದು ಎಲ್ಲವೂ ಇತಿಹಾಸ...


ಆಗ್ಯಾವತ್ತೂ ಆತನನ್ನು ನೇರಾ ನೇರವಾಗಿ ಮಾತನಾಡಿಸಿದ್ದಿರಲಿಲ್ಲ. ಇದಾಗಿ ಸರಿ ಸುಮಾರು ಹತ್ತು ಹದಿನೈದು ವರ್ಷಗಳೇ ಕಳೆದಿದ್ದಿರಬಹುದು. ಒಂದು ದಿನ, ಅಲ್ಲಲ್ಲ...ರಾತ್ರಿ, ಇಂಥದ್ದೇ ‘ಮದ್ಯ’ರಾತ್ರಿ ಶ್ರೀ ವಿಶ್ವೇಶ್ವರ ಭಟ್ಟರ ಮನೆಯ ಮಹಡಿಯ ಮೇಲೆ, ತೀರಾ ಮರೆತು ಹೋದವನಂತೆ, ಹೊಸದಾಗಿ ಪರಿಚಯ ಮಾಡಿಕೊಂಡು ‘ಓ ಅಪ್ಪಿ...ಆರಾಮಿದ್ಯನೋ...ಮತ್ತೇನೋ ಮಾಣಿ...’ ಎಂದು ಪಕ್ಕಾ ಹವ್ಯಕ ಶೈಲಿಯಲ್ಲೇ ನನ್ನನ್ನು ಮಾತನಾಡಿಸಿದ್ದ. ಇನ್ನಿಲ್ಲದ ಅಚ್ಚೆಯಿಂದ ಬಿಗಿದಪ್ಪಿಕೊಂಡು ಬೆನ್ನು ಸವರಿದ್ದ. ಇಂಥವೆಲ್ಲ ಕಲೆಯಲ್ಲಿ ಆತ ನಿಷ್ಣಾತ ಎಂಬುದು ಗೊತ್ತಿದ್ದದ್ದೇ. ಆದರೂ ಸೌಜನ್ಯ ಮೀರಲಾರದೇ ಒಂದೆರಡು ಮಾತನಾಡಿ ಬಂದಿದ್ದೆ.


ಅದಾದ ಮೇಲೆ ಆತ ಮಾತನಾಡಿದ್ದು ನಾನು ‘ಲವಲವಿಕೆ’ಯ ಮುಖ್ಯಸ್ಥನಾದ ಮೇಲೆಯೇ. ಯಾವುದೋ ಲೇಖನ, ಯಾರ ಬಗ್ಗೆಯೋ ಬರೆದು ಕಳುಹಿಸಿದ್ದ. ಬಹುಶಃ ಅದನ್ನು ಪ್ರಕಟಿಸಲೇಬೇಕೆಂದು ಭಟ್ಟರ ಮೇಲೆ ಒತ್ತಡವನ್ನೂ ತಂದಿದ್ದಿರಬೇಕು. ಅದು ನನ್ನ ಟೇಬಲ್‌ಗೆ ಬರುವವರೆಗೂ ಈ ಮಹಾನುಭಾವನ ಲೇಖನವೆಂಬುದು ನನಗೆ ಅರಿವಿರಲಿಲ್ಲ. ಅಷ್ಟರಲ್ಲಾಗಲೇ ಅವರೇ ಪೋನ್ ಮಾಡಿದ್ದರಿಂದ ವಿಷಯ ಗೊತ್ತಾಯಿತು. ಆ ಹೊತ್ತಿಗಾಗಲೇ ವಿಜಯ ಕರ್ನಾಟಕಕ್ಕೆ ತನ್ನ ಎಂದಿನ ಹಳಸಲು, ಯಾವತ್ತೋ ಬರೆದಿಟ್ಟ (ವಾರದ ಅಚ್ಚರಿಯಲ್ಲಿ ಪ್ರಕಟಗೊಂಡು, ಪುಸ್ತಕವಾಗಿಯೂ ಹೊರ ಬಂದ) ಕಂತೆ ಪುರಾಣವನ್ನು ಹೊಚ್ಚ ಹೊಸ ವಿಚಾರವೆಂಬಂತೆ ಕೊಡುತ್ತಿದ್ದ. ಹತ್ತು ವರ್ಷಗಳಿಂದ ಅದು ಪ್ರಕಟಗೊಳ್ಳುತ್ತಾ ಜಾಗ ತಿನ್ನುತ್ತಲೂ ಇತ್ತು. ಇದೀಗ ಲವಲವಿಕೆಗೂ ಲೇಖನ ಕೊಡುತ್ತಿದ್ದಾನೆಂಬುದು ನನಗೆ (ಬಹುಶಃ ನಮ್ಮ ಸಂಪಾದಕರಿಗೆ ಸಹ ಅಂದುಕೊಳ್ಳುತ್ತೇನೆ) ನುಂಗಲಾರದ ತುತ್ತಾಗಿತ್ತು. ಇದ್ಯಾವ ‘ಕರ್ಮ’ ಗಂಟು ಬಿತ್ತು ಎಂಬ ಮನದಿಂಗಿತ ಅರಿವಿಲ್ಲದೇ ಸ್ವಗತ ರೂಪ ಪಡಕೊಂಡಿತ್ತು. ಅದೇ ನಾನು ಮಾಡಿದ ಮೊದಲನೆಯ ತಪ್ಪೇನೋ. ನಾನು ತೀರಾ ಅಕ್ಕರೆಯಿಂದ ರೂಪಿಸುತ್ತಿರುವ ಲವಲವಿಕೆಯಲ್ಲಿ ಇಂಥ ಲೇಖನಗಳನ್ನು (ರಾಜಕಾರಣಿಯೊಬ್ಬರ ಬಗ್ಗೆ ಬರೆದು ಕಳುಹಿಸಿದ್ದ) ನಾನು ನಿರೀಕ್ಷಿರಲಿಲ್ಲ. ಹೀಗಾಗಿ ಅದನ್ನು ‘ಕರ್ಮ’ ಎನ್ನದೇ ವಿ ಇರಲಿಲ್ಲ. ನಮ್ಮ ಪತ್ರಿಕಾ ಕಚೇರಿಯೊಳಗೇ ಇದ್ದು ಆತ ಬಿಸಾಕುವ ಬಿಸ್ಕೆಟ್‌ಗೆ ಜೊಲ್ಲು ಸುರಿಸುತ್ತಾ ಕದ್ದು ಕಚೇರಿಯ ಆಂತರಿಕ ವಿಚಾರಗಳನ್ನೂ ಆತನಿಗೆ ಪೂರೈಸುತ್ತಿದ್ದ ನಾಯಿಗಳು ಈ ‘ಕರ್ಮ’ಕ್ಕೆ ಉಪ್ಪು ಖಾರ ಸೇರಿಸಿ ತಕ್ಷಣ ವರದಿ ಮಾಡಿದರು. ಅಲ್ಲಿಂದಲೇ ಆತ ಸಮಯಕ್ಕಾಗಿ ಕಾಯುತ್ತಿದ್ದಿರಬೇಕು.


ಅದು ಬಿಟ್ಟರೆ ನಾನು ಶ್ರೀ ಭಟ್ಟರನ್ನು ಪತ್ರಿಕೋದ್ಯಮದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಸ್ವೀಕರಿಸಿದ್ದೇನೆ ಎಂಬುದೂ ಅವನ ಇಂಥ ಕೃತ್ಯಕ್ಕೆ ಕಾರಣವಾದರೆ ಅದಕ್ಕೆ ನಾನು ಹೊಣೆಯಲ್ಲ. ಭಟ್ಟರಿಗಿಂತ ಯೋಗ್ಯ ವ್ಯಕ್ತಿ ಸದ್ಯಕ್ಕೆ ನನಗೆ ಪತ್ರಿಕೋದ್ಯಮದಲ್ಲಿ ಬೇರಾರೂ ಕಾಣುತ್ತಿಲ್ಲ. ಒಂದೊಮ್ಮೆ ಅಂಥ ಯೋಗ್ಯತೆಯನ್ನು ಆತ ಪ್ರದರ್ಶಿಸುವ ಕನಸನ್ನೂ ನಾವಿಂದು ಕಾಣಲು ಸಾಧ್ಯವಿಲ್ಲ. ಛೆ, ಎಂಥಾ ಅಸಂಬದ್ಧ ಹೋಲಿಕೆ; ಕ್ಷಮಿಸಿ.


ಆತ ನನ್ನನ್ನು ದ್ವೇಷಿಸಲು ಇರುವ ಇನ್ನೊಂದು ಕಾರಣವೆಂದರೆ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ. ಅನುಮಾನವೇ ಇಲ್ಲ, ನೂರಕ್ಕೆ ನೂರು ಶ್ರೀಗಳನ್ನು ನಾನು ಅಪಾರವಾಗಿ ಗೌರವಿಸುತ್ತೇನೆ. ಅದು ವ್ಯಕ್ತಿಗತವಾಗಿಯಷ್ಟೇ ಇರುವ ಪ್ರೀತಿಯಲ್ಲ. ಗೋ ಸಂರಕ್ಷಣೆಯ ನಿಟ್ಟಿನಲ್ಲಿ ಅವರು ಮಾಡಿದ ಕೆಲಸವೇ ಅಂಥದ್ದು. ತಮ್ಮ ಇಡೀ ಜೀವನವನ್ನು ಇಂಥ ಒಂದು ಅಭಿವೃದ್ಧಿಪರ ಕೆಲಸಕ್ಕೆ ಸಮರ್ಪಿಸಿಕೊಂಡದ್ದು ಸಾಮಾನ್ಯದ ಮಾತಲ್ಲ. ಅಂಥ ಶಕ್ತಿಯನ್ನು ಗೌರವಿಸುವ ಹೆಮ್ಮೆ ನನಗಿದೆ. ಒಂದೊಮ್ಮೆ ಅಂಥವರಿಗೆ ‘ಗಿಂಡಿಮಾಣಿ’ಯಾಗಿ ಸೇವೆ ಸಲ್ಲಿಸುವ ಭಾಗ್ಯ ನನ್ನದಾದರೆ ನನ್ನ ಜೀವನಕ್ಕಷ್ಟೇ ಅಲ್ಲ, ನನ್ನ ನೀರಿನ ಕೆಲಸಕ್ಕೊಂದು ಸಾರ್ಥಕ್ಯ. ಏಕೆಂದರೆ ಸಾಮಾಜಿಕ ಕಳಕಳಿಯ ವಿಚಾರದಲ್ಲಿ ಅಷ್ಟೊಂದು ಕಮಿಟೆಡ್ ಮನಸ್ಸು ಶ್ರೀಗಳದ್ದು.


ಇವು ಮೂರೇ ಕಾರಣಕ್ಕೆ ಕೊಳಗೆರೆಗೆ ನನ್ನ ಬಗ್ಗೆ ಈ ಪರಿಯ ದ್ವೇಷವಾದರೆ ನಾನೇನೂ ಮಾಡಲಿಕ್ಕಾಗುವುದಿಲ್ಲ. ದ್ವೇಷಕ್ಕೆ ಪ್ರತಿಯಾಗಿ ನನ್ನದು ಸಣ್ಣದೊಂದು ವಿಷಾದ ಪೂರಿತ, ಅಯ್ಯೋ ಎನ್ನುವ ಅನುಕಂಪಯುಕ್ತ ನಗೆಯೊಂದೇ ಉತ್ತರವಾಗುತ್ತದೆ.


ಆದರೆ, ಅಸಲಿ ಸಂಗತಿ ಅದಲ್ಲ. ಆತನಿಗೆ ದ್ವೇಷ, ವ್ಯಂಗ್ಯ, ಟೀಕೆ, ಕುಹಕ, ಕಾಮ ವಿಕೃತಿಗಳೇ ಬದುಕು. ಒಂದೊಮ್ಮೆ ಆತನಿಗೆ ದ್ವೇಷಿಸಲು ಯಾರೂ ಸಿಗಲಿಲ್ಲ ಎಂತಾದರೆ ತನ್ನನ್ನೇ ತಾನು ದ್ವೇಷಿಸಿಕೊಳ್ಳುತ್ತಾನೆ. ಆತ ತನ್ನ ಹೆಂಡತಿಯರನ್ನೂ, ಮಕ್ಕಳುಗಳನ್ನೂ ದ್ವೇಷಿಸದೇ ಬಿಟ್ಟವನಲ್ಲ. ಅದೊಂದು ಮಾನಸಿಕ ವಿಕೃತಿ; ಮನೋರೋಗ. ಬೇಕಿದ್ದರೆ ಮನೋರೋಗ ತಜ್ಞರನ್ನು ಕೇಳಿ ನೋಡಿ. ಒಬ್ಬೊಂಟಿಯಾಗಿ ಬೆಳೆದವರಲ್ಲಿ, ಅನಾಥ ಪ್ರಜ್ಞೆ ಕಾಡುತ್ತಿರುವವರಲ್ಲಿ, ಈ ಸಮಾಜದ ನಿಕೃಷ್ಟೆಗೆ, ಅವಹೇಳನಕ್ಕೆ ಗುರಿಯಾದವರಲ್ಲಿ ಇಂಥ ವಿಕೃತಿಗಳು ಕಂಡುಬರುತ್ತವೆ.


ಅದು ಅವನ ತಪ್ಪಲ್ಲ. ಹುಟ್ಟುವ ಮೊದಲೇ ಅಪ್ಪನಿಗೆ ಈತ ಬೇಡವಾಗಿದ್ದ. ಕೈ ಮೀರಿ ಹುಟ್ಟಿದ ಈತನನ್ನು ಮಗ ಎಂದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ತಂದೆಯೇ ಇಲ್ಲದವನಾದ ಮೇಲೆ ಇನ್ನು ತುಂಬು ಕುಟುಂಬದ ಮಾತಂತೂ ದೂರವಾಯಿತು. ತಾಯಿಯೊಬ್ಬಳೇ ಪ್ರೀತಿಗೆ ದಿಕ್ಕೂ. ಅದನ್ನಾದರೂ ಪೂರ್ಣ ಕಾಣಲು ಈತನೊಳಗಣ ಅಸಹನೆ ಬಿಡಲಿಲ್ಲ. ಸಮಾಜದ ಕುಹಕ, ಟೀಕೆಗಳಿಗೆ ಪ್ರತಿಯಾಗಿ ಬಾಲ್ಯದಿಂದಲೇ ದ್ವೇಷ, ಅಸಹನೆಗಳು ಈತನ ಮೈಗೂಡಿದ್ದರೆ ಅದಕ್ಕೆ ಯಾರು ಹೊಣೆ ? ಹುಟ್ಟಿಸಿದವನ ಬುದ್ಧಿವಂತಿಕೆ ರಕ್ತಗತವಾಗಿ ಬಂದ ಮಾತ್ರಕ್ಕೆ ಬೆಳೆದ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕೆಂಬುದೇನೂ ಇಲ್ಲವಲ್ಲಾ? ಸಂಸ್ಕಾರ ಇಲ್ಲದ ಮಕ್ಕಳು ಏನಾಗುತ್ತಾರೆ ಎಂಬುದಕ್ಕೆ ಈತ ಸ್ಪಷ್ಟ ಉದಾಹರಣೆ.


ಬದುಕಿನಲ್ಲಿ ನಿರಂತರ ಕಾಡಿದ ಅಭದ್ರತೆ, ಈ ಸಮಾಜದ ಬಗ್ಗೆ ಇದ್ದ ತಿರಸ್ಕಾರ, ಹುಟ್ಟಿನಿಂದಲೇ ಬಂದ ಚಾಂಚಲ್ಯ, ಬೆಳೆಯುತ್ತಾ ದೊರೆತ ಸಹವಾಸ, ಒಳಗೊಳಗೇ ಬುಸುಗುಡುವ ಕಾಮ ವಿಕೃತಿ, ಇವಕ್ಕೆಲ್ಲಾ ನೀರೆರದ ಅನಿರೀಕ್ಷಿತ ಕೀರ್ತಿ ಮತ್ತು ಸಿರಿವಂತಿಕೆ ಕೊಳಗೆರೆಯಂಥವನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ.
ವ್ಯಕ್ತಿಯೊಬ್ಬನ ಮಾನಸಿಕ ಅಸಮತೋಲನ ಆತನಿಗಷ್ಟೇ ಮಾರಕವಲ್ಲ. ಕುಟುಂಬ ಮತ್ತು ಸಮಾಜಕ್ಕೂ ಕಂಟಕ ಎಂಬುದಕ್ಕೆ ಇದು ಜ್ವಲಂತ ನಿದರ್ಶನ. ಅಯ್ಯೋ ಎನ್ನುವ ಒಂದೇ ಒಂದು ಅನುಕಂಪವನ್ನಲ್ಲದೇ ನಾನು, ನನ್ನ ತಲೆಮಾರಿನವರು ಬೇರಿನ್ನೇನು ಕೊಡಲು ಸಾಧ್ಯ? ಏಕೆಂದರೆ ಆಗಲೇ, ಬಾಲ್ಯದಲ್ಲೇ ಈತನನ್ನು ಆದರಿಸಿ, ಪ್ರೀತಿಯಿಂದ ಒಲಿಸಿ ಸರಿದಾರಿಗೆ ತಂದಿದ್ದರೆ ಇವತ್ತಿನ ಸಮಾಜದ ಎಷ್ಟೋ ಹೆಣ್ಣುಮಕ್ಕಳು ಜೀವನವಿಡೀ ಕಣ್ಣಿರಿನಲ್ಲಿ ಕೈತೊಳೆಯುವುದು ತಪ್ಪುತ್ತಿತ್ತು. ಎಷ್ಟೋ ತಂದೆ-ತಾಯಂದಿರ ಬಸಿರು ಸುಡುವುದು ನಿಲ್ಲುತ್ತಿತ್ತು. ಎಷ್ಟೋ ಮುಗ್ಧರು ಹಿಡಿಶಾಪ ಹಾಕುವುದು ನಿಲ್ಲುತ್ತಿತ್ತು. ಆದರೇನು ಮಾಡೋಣ ? ಇವತ್ತೂ ಕೈ ಮೀರಿ ಹೋಗಿದೆ.

Thursday, February 3, 2011

ಈತನ ಕೊಳೆತನ ಸಹಿಸುವುದು ನಮಗ್ಯಾವ ಕರ್ಮ?

ಪ್ರಪಂಚದಲ್ಲಿನ ತಪ್ಪುಗಳನ್ನೆಲ್ಲಾ ಮಾಡಲು ಅಕಾರ ಇರುವುದು ನನಗೊಬ್ಬನಿಗೇ. ನಾನು ಏನು ಬೇಕಾದರೂ ಮಾಡಬಹುದು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ಹಾಗೆಂದು ಬೇರೆ ಯಾರೇ ಏನೇ ತಪ್ಪು ಮಾಡಿದರೂ, ಮಾಡದಿದ್ದರೂ ಅವರನ್ನೆಲ್ಲಾ ಟೀಕಿಸುವ ಹಕ್ಕಿರುವುದು ನನಗೇ, ನಾನು ಹೇಳಿದ್ದನ್ನೇ ಸತ್ಯವೆಂದು ತಿಳಿದು ಎಲ್ಲರೂ ಅದನ್ನೇ ಒಪ್ಪಿಕೊಳ್ಳಬೇಕು. ನಾನೋಬ್ಬನೇ ಈ ಸಮಾಜದಲ್ಲಿ ಸುಭಗ, ಸಂಭಾವಿತ. ಉಳಿದವರೆಲ್ಲರೂ ಫಟಿಂಗರು...

ನಗಬೇಕೋ, ಅಳಬೇಕೋ ಅರ್ಥವಾಗುವುದಿಲ್ಲ. ಇಂಥ ಮನೋಭಾವಕ್ಕೆ ಏನೆಂದು ಕರೆಯಬೇಕು ? ಇದು ಅಹಂಕಾರವೇ ? ಅಸಂಬದ್ಧವೇ ? ಅಸಹಜ ಮನಸ್ಥಿತಿಯೇ ?

ಪಕ್ಕಾ ಇದೇ ದಾಟಿಯಲ್ಲಿತ್ತು ವಾರದ ಅಚ್ಚರಿಯೆಂಬ ನೀಲಿ ಪತ್ರಿಕೆಯ ಸಂಪಾದಕರ ಮಾತುಗಳು. ಕೊನೆಗೊಮ್ಮೆ ಕೇಳೇ ಬಿಡೋಣ; ಅಷ್ಟಕ್ಕೂ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಬರೆದದ್ದಾದರೂ ಏಕೆ ? ಅದಕ್ಕೆ ಆಧಾರಗಳಾದರೂ ಏನು ? ನನ್ನ ಕುರಿತು ಅವರಿಗೆ ಗೊತ್ತಿದ್ದದ್ದಾದರೂ ಏನು ? ನಾನ್ಯಾಕೆ ಎಲ್ಲವನ್ನೂ ಪ್ರಶ್ನಿಸದೇ ಸಹಿಸಿಕೊಳ್ಳಬೇಕು? ಗುಳಿಗೆ ಸಿದ್ಧ, ಒಳಗೊಳಗೇ ಮೆದ್ದ ಎನ್ನುವಂತೆ ಆತ ವರ್ತಿಸುತ್ತಾನೆ ಎಂದುಕೊಂಡು ನಾನ್ಯಾಕೆ ಹೇಡಿಯಂತೆ ಕುಳಿತುಕೊಳ್ಳಬೇಕು? ಯಾವ ತಪ್ಪೂ ಮಾಡದೆ, ಆತನ ಸುದ್ದಿಗೂ ಹೋಗದೆ, ನನ್ನ ಪಾಡಿಗೆ ನಾನು ‘ನೀರು-ನೆರಳು’ ಅಂತ ಇದ್ದದ್ದನ್ನೂ ಸುಖಾ ಸುಮ್ಮನೆ ಟೀಕಿಸಿ ಮೇಲೆರಗಿ ಬರುತ್ತಾನಾದರೆ ಸುಮ್ಮನಿದ್ದರೆ ಅದನ್ನೇ ಒಪ್ಪಿಕೊಂಡಂತಾಗುವುದಿಲ್ಲವೇ ?ಯಾವುದಕ್ಕೂ ನೇರವಾಗಿ ಆತನನ್ನೇ ಕೇಳೋಣವೆಂದು ಹಿಂದೆ ಮುಂದೆ ಇಲ್ಲದೇ ಮೊನ್ನೆ ಸರಿಯಾಗಿ ರಾತ್ರಿ ಹನ್ನೆರಡು ಗಂಟೆಗೆ ಫೋನಾಯಿಸಿದೆ. ನನಗೆ ಗೊತ್ತಿತ್ತು ಆತ ಸತ್ಯವನ್ನೇನಾದರೂ ಹೇಳುವುದಿದ್ದರೆ ಅದೇ ಸಮಯದಲ್ಲಿ. ಏಕೆಂದರೆ ಆ ‘ಮದ್ಯ’ರಾತ್ರಿಯಲ್ಲಿ ಮಾತ್ರ ಆತನ ಮೇಲೆ ಸತ್ಯಸಂಧ ಆವಾಹಿತನಾಗಿರುತ್ತಾನೆ. ಉಳಿದೆಲ್ಲ ಸಂದರ್ಭದಲ್ಲಿ ಕೊಳಗೇರಿಯ ಕೊಳೆ ಮೆತ್ತಿಕೊಂಡಿರುತ್ತದೆ ಎಂದು. ಹಾಗಾಗಿಯೇ ಆ ಮುಹೂರ್ತದಲ್ಲಿ ಆತನನ್ನು ಸಂಪರ್ಕಿಸಿದೆ.

ಸದ್ಯ, ಸತ್ಯಸಂಧ ಪತ್ರಕರ್ತರು ಫೋನ್ ಎತ್ತಿಕೊಂಡರು. ನಾನು ‘ಗಿಂಡಿಮಾಣಿ’ಎಂದೇ ಪರಿಚಯಿಸಿಕೊಂಡೆ. ಆಗ ರಾತ್ರಿ ಹನ್ನೆರಡು ಗಂಟೆ ಹದಿಮೂರು ನಿಮಿಷ. ಅತ್ತಲಿದ್ದ ವ್ಯಕ್ತಿಗೆ ಧ್ವನಿ ಉಡುಗಿ ಹೋಗಿದ್ದಿರಬೇಕು ಮೂರ‍್ನಾಲ್ಕು ಸೆಂಕೆಂಡ್ ಯಾವುದೇ ಪ್ರತಿಕ್ರಿಯೆ ಇಲ್ಲ. ಮತ್ತೆ ನನ್ನ ಹೆಸರು ಹೇಳಿಕೊಂಡ್ಡದ್ದರ ಜತೆಗೆ ‘ನಿಮ್ಮ ಗಿಂಡಿ ಮಾಣಿ ಸರ್, ನೀವೇ ಇಟ್ಟ ನಾಮಧೇಯ, ಗೊತ್ತಾಗಲಿಲ್ವೇ ?’ ಅಂದೆ. ತುಸು ಸಾವರಿಸಿಕೊಂಡು ಗೊಗ್ಗರು ಧ್ವನಿಯಲ್ಲಿ ‘ಹೇಳಿ’ ಅಂದಿತು ಆ ವ್ಯಕ್ತಿ.

‘ಏನಿಲ್ಲ...ನನಗೊಂದು ಅತ್ಯದ್ಭುತವಾದ ಕಾವ್ಯನಾಮವನ್ನು ಹುಡುಕಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಹೇಳೋಣವೆಂದು ಫೋನಾಯಿಸಿದೆ. ಅಷ್ಟೂ ಮಾಡದಿದ್ದರೆ ನಿಮ್ಮಂತೆ ಕೃತಘ್ನನೆನಿಸಿಕೊಂಡು ಬಿಡುತ್ತೇನೆ. ನೀವು ಯಾವ ಉದ್ದೇಶಕ್ಕೆ ನನ್ನನ್ನು ಹಾಗೆಂದು ಕರೆದಿದ್ದಿರೋ ಏನೋ? ಆದರೆ ಅದು ನನಗೆ ಇನ್ನಿಲ್ಲದ ಜನಪ್ರಿಯತೆಯನ್ನು ತಂದು ಕೊಟ್ಟಿದೆ. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಸಹ ಬರೆಯುತ್ತಿದ್ದೇನೆ. ನೀವೂ ನೋಡಿದ್ದಿರಬಹುದು (ನೋಡಿಯೇ ಇರುತ್ತಾರೆ ಎಂಬುದು ಖಚಿತವಾಗಿ ಗೊತ್ತಿತ್ತು). ಒಂದೇ ವಾರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಓದುಗರು ಬಂದಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ನಿರಂತರ ಬ್ಲಾಗ್ ಅನ್ನು ಫಾಲೋ ಮಾಡುತ್ತಿದ್ದಾರೆ. ಐ ಆಮ್ ರಿಯಲಿ ಥ್ಯಾಂಕ್‌ಫುಲ್ ಟು ಯು ಸರ್...’ಎಂದೆ.

ಒಂದು ಕ್ಷಣದ ಗಲಿಬಿಲಿಯ ನಂತರ...‘ಹೌದೌದು, ನನಗೆ ಎರಡು ಮದುವೆಯಾಗಿದೆ...ಹಾಗೆ...ಹೀಗೆ..ಅಂತೆಲ್ಲಾ ನೀವು ಬ್ಲಾಗ್‌ನಲ್ಲಿ ಬರೆದಿದ್ದೀರಿ ಅಂತ ಯಾರೋ ಹೇಳಿದರು. ಅಷ್ಟಕ್ಕೂ ಅದು ನನ್ನ ವೈಯಕ್ತಿಕ ವಿಚಾರ. ಅದನ್ನು ಕಟ್ಟಿಕೊಂಡು ನಿಮಗೇನಾಗಬೇಕು ? ನನಗೆ ಎರಡು ಹೆಂಡತಿಯರಿದ್ದರೆ ಸಮಾಜಕ್ಕೇನು ನಷ್ಟ ? ಅದು ನಮ್ಮ ನಮ್ಮ ತಾಕತ್ತು. ಅದನ್ನೆಲ್ಲ ಬರೆದು ಏನು ಸಾಸುತ್ತೀರಿ ?...’ ಎಂಬ ವಾಗ್ದಾಳಿ ಆರಂಭವಾಯಿತು...(ಮಾತು ಮಾತ್ರ ಇಷ್ಟು ನಿಯತ್ತಿನದ್ದಾಗಿರಲಿಲ್ಲ. ಆದರೆ ಅವರ ಶೈಲಿಯಲ್ಲೇ, ಅವರು ಬಳಸಿದ ಪದಗಳನ್ನೇ ಬಳಸಿದರೆ ನನ್ನ ಬ್ಲಾಗ್ ಸಹ ಚರಂಡಿಯಾಗಿ ಹೋಗುತ್ತದೆ, ಎಂಬ ಕಾರಣಕ್ಕೆ ಸಾಧ್ಯವಾದಷ್ಟು ಚೌಕಟ್ಟು ಹಾಕಿಕೊಂಡೇ ಮುಂದುವರಿಯುತ್ತೇನೆ)

ಮಾತು ಮುಂದುವರಿಯುತ್ತಲೇ ಇತ್ತು...ಅಷ್ಟಕ್ಕೇ ತುಂಡರಿಸಿ ‘ಸರಿ ಸ್ವಾಮಿ, ನೀವೊಬ್ಬ ಜವಾಬ್ದಾರಿಯುತ ಪತ್ರಕರ್ತ, ನೂರಾರು ಓದುಗರಿರುವ ಪತ್ರಿಕೆ ಸಂಪಾದಕ. ಸಮಾಜದಲ್ಲಿ ಗಣ್ಯ ವ್ಯಕ್ತಿ ಎಂದು ನಿಮ್ಮನ್ನು ನೀವೇ ಕರೆದುಕೊಳ್ಳುತ್ತೀರಿ. ನಿಮ್ಮ ಪತ್ರಿಕೆಯಲ್ಲಿ ನೈತಿಕತೆಯ ಬಗ್ಗೆ ಪುಂಖಾನುಪುಂಖವಾಗಿ ಪ್ರತಿವಾರ ಪುಂಗುತ್ತೀರಿ. ಹಾಗಿದ್ದ ಮೇಲೆ, ನಿಮ್ಮ ವೈಯಕ್ತಿಕ ನಡೆ ನುಡಿಗಳೂ ಸರಿಯಾದ ನಿಟ್ಟಿನಲ್ಲೇ ಇರಬೇಕಲ್ಲವೇ ? ಸಮಾಜ ಅದನ್ನು ನೋಡುತ್ತಲೇ ಇರುತ್ತದೆ. ಒಂದೊಮ್ಮೆ ಅದೆಲ್ಲ ಸಂಬಂಧ ಇಲ್ಲ. ನಾನು ಏನು ಬೇಕಾದರೂ ಮಾಡಿಕೊಳ್ಳಬಹುದು ಎಂಬ ಧೋರಣೆ ನಿಮ್ಮದಾದರೆ, ನನಗೂ ಅದೇ ಅನ್ವಯವಾಗಬೇಕಲ್ಲವೇ ? ನಾನು ಯಾರದ್ದೋ ಹೆಗಲು ಸವರಿದರೆ ನಿಮಗೇನು ಅಭ್ಯಂತರ ? ಅಥವಾ ‘ನಿಮ್ಮ ಸಮಾಜಕ್ಕೆ’ ಏನು ಅಡ್ಡಿ? ಅದನ್ನು ಬರೆಯುವ ಗೋಜಿಗೆ ನೀವು ಹೋಗಿದ್ದೇಕೆ ? ಹೋಗಲಿ ಎಂದರೆ ನಾನು ಹೆಗಲು ಮುಟ್ಟಿದ್ದನ್ನು ನೀವು ಕಂಡಿದ್ದೀರಾ? ಅಥವಾ ಹಾಗೆ ಮುಟ್ಟಿಸಿಕೊಂಡವರಲ್ಲಿ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ದರೆ? ಅಂಥ ಒಬ್ಬರಿದ್ದರೆ, ಅಂಥ ಒಂದೇ ಒಂದು ಅಸಭ್ಯ ವರ್ತನೆ ನಾನು ತೋರಿದ್ದಕ್ಕೆ ಸಾಕ್ಷಿಯಿದ್ದರೆ ಹೇಳಿ...’ ಎಂದು ತುಸು ಜೋರಿನ ಧ್ವನಿಯಲ್ಲೇ ಪ್ರಶ್ನಿಸಿದೆ.

‘ನನಗೆ ಮಾತನಾಡಲು ಬಿಡಿ’ ಎಂಬ ವರಸೆ ತೆಗೆದರು ಆಸಾಮಿ.

‘ಸ್ವಾಮಿ, ಫೋನ್ ಮಾಡಿದ್ದು ನಾನು. ಕೊನೆ ಪಕ್ಷ ನನ್ನ ಬಗ್ಗೆ ಬರೆಯಬೇಕಾದ ಸಂದರ್ಭದಲ್ಲಿ ಸಹ ವಿಷಯಗಳನ್ನು ಖಚಿತಪಡಿಸಿಕೊಳ್ಳುವ ಕನಿಷ್ಠ ಜವಾಬ್ದಾರಿಯನ್ನೂ ತೋರದ ನೀವು ಮೊದಲು ನನ್ನ ಪ್ರಶ್ನೆಗಳಿಗೆ ಉತ್ತರಿಸಿ. ನನ್ನ ಬಗ್ಗೆ ಹೆಚ್ಚು ಗೊತ್ತಿರುವುದು ನನಗೇ ಹೊರತೂ ಬೇರಾರಿಗಲ್ಲ. ಬೇಕಿದ್ದರೆ ನನ್ನ ಬಗ್ಗೆ ನಾನೇ ಸತ್ಯವಾದ ಮಾಹಿತಿ ಕೊಡುತ್ತಿದ್ದೆ. ನನ್ನನ್ನು ಕೇಳುವ ಗಂಡಸುತನವನ್ನು ನೀವು ತೋರಿಲ್ಲ. ಯಾವುದೋ ಎಂಕ, ನಾಣಿ, ಸೀನ (ಬೇಕಿದ್ದರೆ ಅದನ್ನು ಸಾಧು-ಸಂತ, ದೇವಶ್ರೇಷ್ಠ, ಕಲಾಕಾರ, ಶೋಕರಾಮ, ಪ್ರಕಾಶಮಾನ ಎಂದು ಹೇಗೆ ಬೇಕಾದರೂ ಬದಲಿಸಿಕೊಳ್ಳಿ) ಹೇಳಿದ್ದು ಕೇಳಿಕೊಂಡು ಬರೆಯುವ ನಿಮ್ಮ ಬಗ್ಗೆಯೇ ಓದುಗರಿಗೆ ಇಷ್ಟು ವಿಶ್ವಾಸವಿದೆ ಎಂದಾದರೆ, ಜಗಜ್ಜಾಹೀರಾಗಿರುವ ನಿಮ್ಮ ಕಲ್ಯಾಣ ಗುಣಗಳನ್ನು ನಾನು ಬರೆದರೆ ಅದೇ ಓದುಗರು ನಂಬದಿದ್ದಾರೆಯೇ? ನಿಮ್ಮ ಬಗ್ಗೆ ಒಂದು ಹಂತದ ಗೌರವವನ್ನು ಇಟ್ಟುಕೊಂಡಿದ್ದವನಾದ ನನ್ನ ಬಗ್ಗೆ ಏನೇನೋ ಬರೆಯುವ ಜರೂರತ್ತಾದರೂ ಏನಿತ್ತು ....?-ಮರು ಸವಾಲೆಸೆದಾಗ ಬಡಬಡಿಸಲಾರಂಭಿಸಿದರು.

‘ನಾನೇಕೆ ನಿಮ್ಮ ಬಗ್ಗೆ ಬರೆದೆ ಎನ್ನುವುದನ್ನು ಭಟ್ಟರಿಗೆ ಹೇಳಿದ್ದೇನೆ ಕೇಳಿ’ ಅಂದರು.

‘ನನ್ನ ಗುರಿ ಏನಿದ್ದರೂ ಭಟ್ಟರು. ಅವರನ್ನು ನೀವು ದಂಡನಾಯಕನೆಂದು ಕರೆದುಕೊಂಡಿದ್ದೀರಿ. ಅವರ ಇಟ್ಟ ಗುರಿ ಒಮ್ಮೊಮ್ಮೆ ಅಕ್ಕ ಪಕ್ಕದಲ್ಲಿರುವ ನಿಮ್ಮಂಥ ಪೇದೆಗಳಿಗೂ ಬೀಳಬಹುದು. ಅದಕ್ಕೆ ನಾನೇನೂ ಮಾಡಲಾಗುವುದಿಲ್ಲ...’ಎನ್ನುವ ಮೂಲಕ ಸತ್ಯವನ್ನು ಮೊದಲಬಾರಿಗೆ ಕಕ್ಕಿದ್ದರು.

ಉರಿದು ಹೋಯಿತು ನನಗೆ. ‘ಸ್ವಾಮಿ, ಗಂಡಸಾಗಿ ವ್ಯವಹರಿಸುವುದನ್ನು ಕಲಿಯಿರಿ. ತಾಕತ್ತಿದ್ದರೆ ನೇರವಾಗಿ ಗುರಿಯಿಟ್ಟು ಹೊಡೆಯಿರಿ. ನೀವು ಅಡ್ಡ ಕಸುಬಿ ಎಂಬುದನ್ನು ನಿಮ್ಮ ವರ್ತನೆಗಳಿಂದಲೇ ಸಾಬೀತು ಮಾಡಬೇಡಿ. ಸಂಪಾದಕ ಎನಿಸಿಕೊಂಡ ಮೇಲೆ ಆ ಸ್ಥಾನ ಗೌರವಕ್ಕೆ ತಕ್ಕಂತೆ ವರ್ತಿಸಬೇಕು. ಅದು ಬಿಟ್ಟು ನಾನು ಅವರಿಗೆ ಗಿಂಡಿ ಹಿಡಿದೆ, ಇವರನ್ನು ನಾಯಕನೆಂದು ಹೇಳಿಕೊಂಡೆ, ಅದಕ್ಕಾಗಿ ಹಾಗೆ ಬರೆದೆ ಎಂದೆಲ್ಲ ಹೇಳುವುದು ನಿಮ್ಮಂಥವರ ವ್ಯಕ್ತಿತ್ವಕ್ಕೆ ಶೋಭೆ ತರದು. ನೀವು ಇಂಥ ಹೇಡಿ ಎಂಬುದನ್ನು ಕೇಳಿ ಗೊತ್ತಿತ್ತು. ಇವತ್ತು ಅದನ್ನು ನನ್ನೆದುರು ನೀವೇ ಸಾಬೀತುಪಡಿಸಿದಿರಿ...ನಿಜವಾಗಿ ನಿಮ್ಮಲ್ಲಿ ನೈತಿಕತೆ ಇದ್ದುದೇ ಹೌದಾದರೆ, ನಿಮ್ಮ ಹೆಂಡತಿಯ ಹೆಗಲನ್ನು ಸವರಿದೆನೋ, ಮಗಳದ್ದೋ ಅಥವಾ ಇನ್ನಾರದ್ದೋ ಎಂಬುದನ್ನು ಸಾಬೀತು ಪಡಿಸಿ. ಅಥವಾ ಆದ ಪ್ರಮಾದವನ್ನು ಒಪ್ಪಿಕೊಳ್ಳಿ....’

-ಹೀಗೆ ನೇರವಾಗಿ ದಾಳಿಗಿಳಿದು ಎಲ್ಲಿ ಮುಂದುವರಿದೆನೋ ಅಷ್ಟರಲ್ಲಿ ಫೋನ್ ಬೀಪ್ ಶಬ್ದ ಹೊರಡಿಸಲಾರಂಭಿಸಿತ್ತು. ಅತ್ತಲಿಂದ ನಿರುತ್ತರನಾದದ್ದರ ಪ್ರತೀಕವಾಗಿ ಪೋನ್ ಕಟ್ ಆಗಿತ್ತು.

ಆ ನಂತರ ರಾತ್ರಿ೧೨-೨೦ರವರೆಗೆ ನಿರಂತರವಾಗಿ ಕನಿಷ್ಠ ಹತ್ತುಬಾರಿ ಪ್ರಯತ್ನಿಸಿದರೂ ಅವರು ನನ್ನ ಕರೆಯನ್ನು ಸ್ವೀಕರಿಸಿಲ್ಲ. ಬಹುಶಃ ಇನ್ಯಾವತ್ತು ನನ್ನೊಂದಿಗೆ ಮುಖಾಮುಖಿಯಾಗುವ ಧೈರ್ಯವನ್ನೂ ಮಾಡಲಾರರು. ಆದರೆ ಅನಿವಾರ್ಯತೆ ಎಂಬುದಿದೆಯಲ್ಲಾ ? ಏಕೆಂದರೆ ಈಗಾಗಲೇ ನಾನು ಕಾನೂನು ಸಮರಕ್ಕೆ ಇಳಿದಿದ್ದೇನೆ. ನನ್ನ ಕರೆಯನ್ನು ತಿರಸ್ಕರಿಸಿದಷ್ಟು ಸುಲಭದಲ್ಲಿ ನ್ಯಾಯಾಲಯದ ಕರೆಯನ್ನು ತಿರಸ್ಕರಿಸಲಾಗುವುದಿಲ್ಲ. ಒಂದೆರಡು ಬಾರಿ ತಪ್ಪಿಸಿಕೊಳ್ಳಬಹುದು. ಆದರೆ ಕೊನೆಗೊಮ್ಮೆಯಾದರೂ ಬರಲೇಬೇಕು. ನನ್ನೊಳಗೆ ಇನ್ನೂ ಕೇಳದೇ ಉಳಿದು ಹೋದ ಪ್ರಶ್ನೆಗಳನ್ನು ನ್ಯಾಯ ಪೀಠದೆದುರು ನಾನಲ್ಲದಿದ್ದರೂ ನನ್ನ ವಕೀಲರು ಕೇಳುತ್ತಾರೆ. ಆಗಲೂ ‘ನಾನು ಎಷ್ಟು ಹೆಂಡತಿಯರನ್ನು ಮಾಡಿಕೊಂಡರೂ, ಯಾರೊಂದಿಗೆ ಮಲಗಿದರೂ, ಯಾರ ಬಗ್ಗೆ ಬರೆದರೂ ಈ ಸಮಾಜಕ್ಕೇನು’ ಎಂಬ ಮುಖೇಡಿ ಉತ್ತರವನ್ನೇ ನೀಡಲಾಗುವುದಿಲ್ಲವಲ್ಲಾ ? ಆ ದಿನಕ್ಕಾಗಿ ಕಾಯುತ್ತಿದ್ದೇನೆ. ನನ್ನ ನೈತಿಕತೆಯಲ್ಲಿ, ಹಾಗೂ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದ್ದೇ ಇದೆ.

ಅಷ್ಟಕ್ಕೂ ಈತನ ಕೊಳೆತನವನ್ನೆಲ್ಲಾ ಸಹಿಸಿಕೊಳ್ಳುವುದು ಈ ಸಮಾಜದ ಕರ್ಮವೇ ?

ಇದೇ ಪ್ರಶ್ನೆಯನ್ನು ಆರು ತಿಂಗಳ ಹಿಂದೆಯೇ ವಿಜಯ ಕರ್ನಾಟಕ ಕಚೇರಿಯಲ್ಲಿ ಕುಳಿತು ಕೇಳಿದ್ದೆ. ಅದೇ ಕಾರಣಕ್ಕೇ ಆತ ನನ್ನ ವಿರುದ್ಧ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುತ್ತಿದ್ದಾರೆ. ಅದರ ವಿವರಕ್ಕಾಗಿ ಇನ್ನೊಂದು ದಿನ ಕಾಯಿರಿ. ಬರೆಯುತ್ತೇನೆ.

Tuesday, February 1, 2011

ಅರಿವಿನ ಹೆಜ್ಜೆಯಲ್ಲಿ...


ಪ್ರೀತಿಯ ಓದುಗರೇ,
ನನ್ನ ‘ಜಲರಾಶಿಯಲ್ಲೊಂದು ಬಿಂದು’ ಲೇಖನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಂಡಿತಾ ಅದನ್ನು ಬರೆಯಲು ಕೂರುವ ಮುನ್ನ, ಯಾರದ್ದೋ ಮಾತಿಗೆ ಉತ್ತರ ಕೊಡಬೇಕೆಂಬ ಉದ್ದೇಶ ಇತು. ಆದರೆ ಬರೆಯುತ್ತಾ ಹೋದಂತೆಲ್ಲ ಸಂಬಂಧಗಳ ಕುರಿತಾದ ವೈಯಕ್ತಿಕ ಚಿಂತನೆಗಳು ಅಲ್ಲಿ ಹರವಲಾರಂಬಿಸಿದವು. ಬರವಣಿಗೆಗೊಂದು ಗಾಂಭಿರ‍್ಯ ಸಿಕ್ಕಿತು. ನಿಜಕ್ಕೂ ನಿಮ್ಮ ಅಭಿಮಾನಕ್ಕೆ ನಾನು ಆಭಾರಿ.

ಒಂದೆರಡು ಮಂದಿ ದೂರವಾಣಿಯಲ್ಲಿ ಜಗಳಕ್ಕೇ(ಪ್ರೀತಿಯಿಂದ) ಬಿದ್ದಂತೆಯೇ ನನ್ನ ವಾದಕ್ಕೆ ಪ್ರತಿವಾದವನ್ನು ಮಂಡಿಸಿದರು. ಖುಷಿಯಾಯಿತು. ಬಹಳಷ್ಟು ಮಂದಿ ನನ್ನ ವಾದವನ್ನು ಪುಷ್ಟೀಕರಿಸಿದರು. ಇನ್ನು ಕೆಲವರು ಇಂಥ ಗಂಭೀರ ಶೈಲಿಯ ಬರವಣಿಗೆಗಳು ವ್ಯರ್ಥ. ಅದರಿಂದ ಏನೂ ಸಾಧನೆಯಾಗುವುದಿಲ್ಲ ಎಂದೂ ಹೇಳಿದ್ದಾರೆ. ಎಲ್ಲರ ಮಾತಿನ ಹಿಂದೆಯೂ ಇದ್ದದ್ದು ಒಂದು ಅಸೀಮ ಪ್ರೀತಿ. ಬರೀ ಒಂದು ಥ್ಯಾಂಕ್ಸ್‌ನಿಂದ ಈ ಋಣ ತೀರಿಸಲಾಗದು.

ಶ್ರೀ ಪ್ರಮೋದ್ , ಶ್ರೀ ಜಗದೀಶ್, ಶ್ರೀ ಮನೋಮೂರ್ತಿ ಸೇರಿದಂತೆ ಕೆಲವರು ಇಲ್ಲಿ ಒಂದು ದೃಷ್ಟಿಯಲ್ಲಿ ನಕಾರಾತ್ಮಕ ಭಾವನೆ ವ್ಯಕ್ತವಾಗಿದೆ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಯಾತ್ರಿಕ ಪ್ರಗತಿಯನ್ನು ಅಥವಾ ಯಾವುದೇ ಅಬೀವೃದ್ಧಿಯನ್ನು ನಿರಾಕರಿಸುವ ಉದ್ದೇಶ ಖಂಡಿತಾ ನನ್ನದಲ್ಲ. ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.

ಜಾಗತೀಕರಣದ ಈ ಸನ್ನಿವೇಶದಲ್ಲಿ ಸಂಬಂಧಗಳು ವೃಥಾಲಾಪಗಳಾಗಿವೆ. ವಸಾಹತುಶಾಹಿ ಚಿಂತನಾ ಕ್ರಮಗಳಲ್ಲಿನ ಜಡತೆ ಇಂದಿಗೂ ಭಾರತೀಯನನ್ನು ಆವರಿಸಿಕೊಂಡಿದೆ. ವಸಾಹತೋತ್ತರ ಭಾರತದ ಮೇಲೆ ಅಚ್ಚಳಿಯದೇ ಉಳಿದುಹೋದ ಪಾಶ್ಚಾತ್ಯ ಪರಂಪರೆಯ ಕಲೆಗಳು ನಮ್ಮ ಮನಸ್ಸುಗಳನ್ನು ದಿನದಿಂದ ದಿನಕ್ಕೆ ಕಂಗೆಡಿಸುತ್ತಿವೆ. ಈ ನೆಲದ ಭಾವನಾತ್ಮಕ ಆಕೃತಿಗಳು ಮನ್ನಣೆ ಕಳೆದುಕೊಂಡಿವೆ ಎನ್ನುವುದನ್ನು ಹೇಳಲು ಪ್ರಯತ್ನಿಸಿದ್ದೇನೆ.

ನಮ್ಮ ಜೀವನವೆಂಬುದು ಇಂದು ಅರಿವಿನಿಂದ ರೂಪಿತವಾಗುತ್ತಿಲ್ಲ. ಆನುಷಂಗಿಕವಾದ ಅಮುಖ್ಯ ಸಂಗತಿಗಳಿಗೆ ಒತ್ತು ನೀಡುತ್ತಿರುವ ಪರಿಣಾಮ ವೈಯಕ್ತಿಕ ಆಸಕ್ತಿಗಳು ಕರಗಿಹೋಗಿವೆ. ಆಸಕ್ತಿ ಹಾಗೂ ಅನಿವಾರ್ಯ ಇವೆರಡರ ನಡುವಿನ ಸಂಘರ್ಷದಿಂದಾಗಿ ಗೊಂದಲಮಯ ಜೀವನ ನಮ್ಮ ಪಾಲಿನದಾಗಿದೆ. ಪ್ರೀತಿಯಿಂದ ಪ್ರೇರಿತವಾದ ಸಂಬಂಧಗಳ ಮಾತು ಬೇರೆ. ಅದು ಮಹತ್ವಾಕಾಂಕ್ಷಿ ಬದುಕಿನ ಮಾದರಿ. ಜೀವನದ ಸಮಗ್ರ ತಿಳಿವಳಿಕೆಗೆ ಕಾರಣವಾಗುವ ಪ್ರೀತಿಯ ಅನುಪಸ್ಥಿತಿಯಲ್ಲಿ ಮನಸ್ಸು ನಿರ್ದಯವಾಗಿದೆ. ಇದು ಹಿಂಸೆಗೆ ಪ್ರೇರಣೆಯೊದಗಿಸಿದೆ.

ಕೈಗಾರಿಕೀಕರಣ ಹಾಗೂ ಯುದ್ಧಗಳಲ್ಲಿ ಯಶಸ್ಸು ಪಡೆಯುವುದೇ ರಾಷ್ಟ್ರ ವ್ಯವಸ್ಥೆಯ ಪರಮೋದ್ದೇಶವಾಗಿದೆ. ನಿರ್ದಯ ಸ್ಪರ್ಧೆ ಹಾಗೂ ಪರಸ್ಪರ ನಾಶಗಳ ವಿಷ ಚಕ್ರದಲ್ಲಿ ಮಾನವ ಬದುಕು ಅರಳುವ ಅವಕಾಶವನ್ನೇ ಕಳೆದುಕೊಂಡಿರುವುದು ದುರದೃಷ್ಟಕರ.


ಸ್ವತಂತ್ರ ನೆಲೆಯ ಆಲೋಚನೆಯನ್ನು ನಾವಿಂದು ಕಳೆದುಕೊಂಡು ಬಿಟ್ಟಿದ್ದೇವೆ. ನಿರ್ದಿಷ್ಟ ವಿನ್ಯಾಸಗಳಿಗಷ್ಟೇ ಸೀಮಿತವಾಗಿರುವ ನಮ್ಮ ಮನಸ್ಸುಗಳಿಂದ ಸಂಬಂಧದ ಸೃಜನಶೀಲತೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ವೈಯಕ್ತಿಕ ಬದುಕಿನಂತೆ ಸಾಮಾಜಿಕ ವ್ಯವಸ್ಥೆಯಲ್ಲೂ ಮೌಲ್ಯಗಳು ಕಳೆದುಹೋಗಿವೆ. ವ್ಯಕ್ತಿಯ ಆಂತರ್ಯದಲ್ಲಿ ಮನೆ ಮಾಡಿರಬಹುದಾದ ಅಸ್ಥಿರತೆ ಒಟ್ಟಾರೆ ಜನಜೀವನದ ವಿಶಾಲ ತಳಹದಿಯನ್ನೇ ಕಿರುದಾಗಿಸಿದೆ.

ವ್ಯವಸ್ಥೆಯೆಂಬುದೇ ಛಿದ್ರಗೊಂಡಿರುವಾಗ ಕುಟುಂಬ ಜೀವನದ ಸವಿ ಉಣ್ಣುವ ಹಂಬಲ ಯಾರಲ್ಲೂ ಉಳಿದಿಲ್ಲ. ಸ್ವಸ್ಥ ಕುಟುಂಬದ ಸನ್ನಿವೇಶವೇ ಇಂದು ಕಳೆದುಹೋಗಿರುವುದೂ ಇದೇ ಕಾರಣಕ್ಕೆ. ಅಸಂಬದ್ಧ ಕುಟುಂಬ ವ್ಯವಸ್ಥೆಯೇ ಸುತ್ತಲಿನ ಸಮಸ್ಯೆಗಳಿಗೆ ಕಾರಣವೆಂಬ ಅರಿವು ಜಡಮನಸ್ಸಿಗೆ ಆಗುತ್ತಿಲ್ಲ. ಮೇಲು ನೋಟಕ್ಕೆ ಸ್ವತಂತ್ರ ಹಕ್ಕಿಯಂತೆ ಕಾಣುವ ವ್ಯಕ್ತಿ ಇಂದು ತನ್ನ ಬದುಕಿನ ಬಿಕ್ಕಟ್ಟುಗಳನ್ನು ಅಪರಿಹಾರ್ಯವಾಗಿಸಿಕೊಳ್ಳುತ್ತಿರುವುದು ದುರಂತ.

ಮೂಲಭೂತ ಸಂಘಟಿತ ಜೀವನ ಕ್ರಮದಲ್ಲಿನ ಶಕ್ತಿ ಈ ಸನ್ನಿವೇಶದಲ್ಲಿ ಕುಂದಿರುವುದು ಜಾಗತೀಕರಣದ ನಿಶ್ಶಬ್ದ ಪರಿಣಾಮಗಳಲ್ಲಿ ಪ್ರಮುಖ. ಏಕರೂಪಿ ಜೀವನ ಕ್ರಮಗಳಿಂದಾಗಿ ಆರ್ಥಿಕತೆಯೇ ಸಮಗ್ರ ಅಭಿವೃದ್ಧಿಯ ಮಾನದಂಡವೆಂಬ ಭ್ರಮೆಗೆ ನಾವಿಂದು ತಲುಪಿದ್ದೇವೆ. ಹೀಗಾಗಿ ಆಧುನಿಕ ಸಮಾಜದಲ್ಲಿ ಸಂಬಂಧಗಳ ಗ್ರಹಿಕೆಯೆಂಬುದು ಲಾಭದೃಷ್ಟಿಯಿಂದಲೇ ಅಳೆಯಲ್ಪಡುವಂಥದ್ದು. ತಾತ್ವಿಕ ವ್ಯವಸ್ಥೆಗಳ ಕುರಿತು ಇಲ್ಲಿ ಚರ್ಚೆ ನಡೆಯುವುದೇ ಇಲ್ಲ. ಪರಿಣಾಮ ವ್ಯಾವಹಾರಿಕ ಪರಿಕಲ್ಪನೆಯಡಿಯಲ್ಲೇ ಸಂಬಂಧಗಳು ವ್ಯಾಖ್ಯಾನಕ್ಕೊಳಗಾಗುತ್ತಿವೆ. ವಸಾಹತುಶಾಹಿ ಕಾಲಘಟ್ಟದಲ್ಲಿ ಜನಿಸಿದ ಚಳವಳಿಗಳಾಗಲೀ, ಅಂಥ ಮನೋಭಾವಗಳಾಗಲೀ ಇಲ್ಲಿ ಮುಖ್ಯವಾಗುವುದಿಲ್ಲ. ಕೊನೆಪಕ್ಷ ಹೊಸದೊಂದು ಸಾಹಿತ್ತಿಕ ಚಳವಳಿಯೊಂದನ್ನು ಹುಟ್ಟುಹಾಕುವ ಸಾಮರ್ಥ್ಯವನ್ನೂ ನಾವು ಕಳೆದುಕೊಂಡು ಬಿಟ್ಟಿದ್ದೇವೆಯೇ ಎಂಬ ಸಂಶಯ ಕಾಡುತ್ತಿದೆ. ಪರಕೀಯ ಆಳ್ವಿಕೆಯ ಸ್ವರೂಪವನ್ನು ಸಮಗ್ರವಾಗಿ ಗ್ರಹಿಸಿದ ಮಂದಿಯ ಅನುಭವ ಮುಂದಿನ ತಲೆಮಾರಿಗೆ ಸಮರ್ಥವಾಗಿ ದಾಟದೇ (ಇದ್ದದ್ದನ್ನೂ ಓದುವ ವ್ಯವಧಾನ ನಮಗಿಲ್ಲ ಬಿಡಿ) ಇರುವುದೇ ಇಂದಿನ ಇಂಥ ಸಾಂಸ್ಕೃತಿಕ ಅಪಸವ್ಯಕ್ಕೆ ಕಾರಣವಾಗುತ್ತಿರಬಹುದೇನೋ?

ಬಹುಮುಖಿ ಸಂಸ್ಕೃತಿಯ ಹೆಸರಿನಡಿ ಭಾರತೀಯ ಜೀವನ ಕ್ರಮ ಪಾಲನೆಗೆ ನಾವಿಂದು ಹಿಂಜರಿಯುತ್ತಿದ್ದೇವೆ. ಅಮೂರ್ತ ಹಿಂಸೆಯ ನಡುವೆ ನಮ್ಮ ಸಾಂಸ್ಕೃತಿಕ ಒಳತೋಟಿಯೇ ನಾಶವಾಗುತ್ತಿದೆ. ಭಾರತೀಯರ ಸಾಂಸ್ಕೃತಿಕ ಧಾರ್ಮಿಕ. ಸಾಮಾಜಿಕ ನೆಲೆಗಳು ಸಂಪೂರ್ಣ ಛಿದ್ರಗೊಂಡಿವೆ. ಜೀವನ ಕ್ರಮವೆನ್ನುವುದು ಸೀಮಿತ ವಲಯದಲ್ಲಿ ಸುತ್ತಲಾರಂಭಿಸಿ ವ್ಯಕ್ತಿ, ತನ್ನ ಹೊರಗಿನ ಸೃಜನಶೀಲತೆಗೆ ಪ್ರತಿಸ್ಪಂದಿಸುವುದನ್ನೇ ಮರೆತುಬಿಡುತ್ತಿದ್ದಾನೆ.

ಸಾಮಾಜಿಕ ಅನುಭವದಿಂದ ದೂರ ಸರಿದಿರುವ ಪರಿಣಾಮ ಅಂಥದೊಂದು ಪ್ರೇರಣೆಯ ಬಗ್ಗೆ ಸಣ್ಣ ಚರ್ಚೆಗೂ ಅವಕಾಶವಾಗುತ್ತಿಲ್ಲ. ಅವಕಾಶಹೀನ ಮಾರ್ಗದಲ್ಲಿ ಎಲ್ಲೋ ಕೆಲವೆಡೆ ಹುಟ್ಟುವ ಸಣ್ಣ ದನಿಗಳೂ ಜಾಗತೀಕರಣದ ಆರ್ಭಟದಲ್ಲಿ ಕೇಳದಾಗಿದೆ. ಪ್ರತೀ ವ್ಯಕ್ತಿಗಳಲ್ಲಿಯೂ ಆಂತರಿಕವಾಗಿ ಜನಿಸುವ ಸ್ವಪ್ರeಯೊಂದೇ ಇದಕ್ಕಿರುವ ಪರಿಹಾರ.

ನೆಲೆಗೊಂಡ ಮನೋಭಾವದ ವಿರುದ್ಧ ಮೂಡಿಸಬಹುದಾದ ಆಂತರಿಕ ಜಾಗೃತಿ ಸುಲಭದ ಮಾತಲ್ಲ. ಒಂದೋ ಸಂಪೂರ್ಣ ನಾಶದ ತುದಿಯಲ್ಲಿ ಎಚ್ಚರ ಬರಬೇಕು. ಇಲ್ಲವೇ ಮುಂದಾಗಬಹುದಾದ ಅನಾಹುತದ ಕುರಿತು ಬಲವಾದ ಚಳವಳಿಯೇ ರೂಪುಗೊಳ್ಳಬೇಕು. ಅತ್ಯಂತ ಸಂಕೀರ್ಣ ಇಂದಿನ ಸ್ಥಿತಿಯಲ್ಲಿ ಇವೆರಡೂ ಕಷ್ಟ ಸಾಧ್ಯ. ಸಂಸ್ಕೃತಿಯ ಅಂತಃಶ್ಚೇತನವನ್ನು ಪುನಃ ಜಾಗೃತಿಗೊಳಿಸುವುದು ಯಾವುದೇ ರಕ್ತಪಾತದಂಥ ಕ್ರಿಯೆಗಳಿಂದ ಆಗುವ ಮಾತಲ್ಲ. ಮೂಲತಃ ಭಾರತೀಯ ಸಂಸ್ಕೃತಿ ಅತ್ಯಂತ ಸಬಲವಾದದ್ದು. ಸಣ್ಣ ಪುಟ್ಟ ಹೊಡೆತಗಳಿಂದ ಅದು ಬಗ್ಗುವಂತಹುದಲ್ಲ. ಆದರೂ ನಿರಂತರ ದಾಳಿ ಕೆಲಮಟ್ಟಿಗೆ ಅದನ್ನು ಘಾಸಿಗೊಳಿಸಿಬಿಡಬಹುದಾದ್ದರಿಂದ ಈ ನಿಟ್ಟಿನಲ್ಲಿ ಹೋರಾಟವೊಂದರ ಅಗತ್ಯ ಎದ್ದು ಕಾಣುತ್ತಿದೆ. ಮೂರನೇ ಜಗತ್ತಿನ ಮೇಲೆ ಪಾಶ್ಚಾತ್ಯರ ನಿರಂತರ ಆಕ್ರಮಣದ ಜತೆಗೆ ದೇಸೀತನದ ಬಗೆಗಿನ ಕೀಳರಿಮೆ ಈ ಆತಂಕಕ್ಕೆ ಕಾರಣ.

ಇಂಥ ಅಡೆತಡೆಗಳ ವಿರುದ್ಧ ಸಾಮಾಜಿಕ ಚಳವಳಿಯ ಜತೆಗೆ ರಾಜಕೀಯ ಶಕ್ತಿಯೂ ಕೈ ಜೋಡಿಸಬೇಕು. ದುರಂತವೆಂದರೆ ಇಂದಿನ ರಾಜಕೀಯ ಸನ್ನಿವೇಶ ಬಹುತೇಕ ಸಂಬಂಧ ವಿಘಟನೆಯ ಹಾದಿಯಲ್ಲೇ ಸಾಗಿರುವುದು. ರಾಷ್ಟ್ರೀಯ ಸಂಸ್ಕೃತಿ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿರುವಾಗಲೂ ರಾಜಕೀಯ ಜಾಗೃತಿ ನಮ್ಮಲ್ಲಿ ಮೂಡುತ್ತಿಲ್ಲ. ಆಶಾವಾದದ ಸಂವೇದನೆಯನ್ನೇ ನಮ್ಮ ಬಹುತೇಕ ನಾಯಕರು ಕಳೆದುಕೊಂಡುಬಿಟ್ಟಿದ್ದಾರೆ. ಗಾಢ ಸತ್ವವುಳ್ಳ ಭಾರತೀಯ ಬದುಕು ನಮ್ಮ ನಾಯಕರಿಗೆ ಸಹ್ಯವಾಗುತ್ತಿಲ್ಲ. ಅಮೆರಿಕನ್ ಆಡಳಿತ ಕ್ರಮವೇ ಇಂದು ಸಾಂಸ್ಕೃತಿಕ, ರಾಜಕೀಯ ಪ್ರೇರಣೆಯಾಗಿದೆ. ಮೊದಮೊದಲು ಅಸ್ಪಷ್ಟವಾಗಿದ್ದ ಇದು ಜಾಗತೀಕರಣದ ದಟ್ಟ ಪ್ರಭಾವಕ್ಕೊಳಗಾಗಿ ಬಲವಾಗಿ ಬೇರೂರಿ ಬಿಟ್ಟಿದೆ. ಪ್ರeವಂತ ವರ್ಗವೂ ಇದರಿಂದ ಹೊರತಾಗಿಲ್ಲ. ಪರದೇಶೀ ಸಂಸ್ಕೃತಿಯ ಸಂಪರ್ಕಕ್ಕೆ ಹಾತೊರೆಯುತ್ತಿರುವ ಮೇಲ್ವರ್ಗದ ಮಂದಿ ದಮನಕಾರಿ ನೀತಿಯೇ ಆಡಳಿತದ, ಪ್ರತಿಷ್ಠೆಯ ಸಂಕೇತವನ್ನಾಗಿಸಿಕೊಂಡಿದ್ದಾರೆ.

ಇಂಥ ಸಂಸ್ಕೃತಿಯನ್ನು ಅರಗಿಸಿಕೊಳ್ಳಲು ಭಾರತೀಯರಿಂದ ಸಾಧ್ಯವಿಲ್ಲವೆಂಬುದು ಗೊತ್ತಿದ್ದೂ, ಬ್ರಿಟಿಷ್ ಅಪತ್ಯದ ಸನ್ನಿವೇಶದಲ್ಲಿನ ಅವಾಂತರಗಳ ಅರಿವಿದ್ದೂ, ಸಾಮಾಜಿಕ ಸ್ಥಿತ್ಯಂತರದ ವಿಷಯದಲ್ಲಿ ನಾವು ಎಡವುತ್ತಿರುವುದು ಶೋಚನೀಯ. ಸಂಬಂಧಗಳ ಸ್ಥಿರತೆಯೊಂದೇ ಇದಕ್ಕೆ ಪರಿಹಾರ. ಅತ್ಯಂತ ಬಲಶಾಲಿ ಭಾರತೀಯ ಮನಸ್ಸು ಬೆಳೆದು ಬಂದದ್ದೇ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ. ಈ ಕಾರಣಕ್ಕೇ ನಮ್ಮ ಸ್ವಾಭಿಮಾನವೂ ಅನ್ಯದೇಶೀಯರಿಗೆ ಆದರ್ಶವಾಗಿ ಕಂಡಿತ್ತು. ಹಾಗೆಂದು ಹೊರಗಿನ ಎಲ್ಲ ಬೆಳವಣಿಗೆಗಳನ್ನು ನಾವು ತಿರಸ್ಕರಿಸಬೇಕೆಂದೂ ಅಲ್ಲ. ಆ ಹಠವೂ ನಮಗೆ ಬೇಡ. ಆದರೆ ಸಾಮರಸ್ಯದ ಜತೆಜತೆಗೇ ಈ ನೆಲದ ಸ್ವಂತಿಕೆಯನ್ನು. ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕಾದ್ದು ಇಂದಿನ ತುರ್ತು.

ಭಾರತೀಯತೆಯ ಹಿಂದಿನ ಮುಖ್ಯ ಬೇರುಗಳಿರುವುದು ಸಂಬಂಧಗಳ ನೆಲೆಯಲ್ಲಿಯೇ. ವಸಾಹತುಗಳ ಆಗಮನ ಇದರ ಮೂಲವನ್ನೇ ಕತ್ತರಿಸಲು ಪ್ರಯತ್ನಿಸಿತು. ಆ ಸಂದರ್ಭದಲ್ಲಿಯೂ ತನ್ನ ಸಿಕ್ಕು ಬಿಟ್ಟುಕೊಳ್ಳುವ ನಮ್ಮತನ ಇದೀಗ ಜಾಗತೀಕರಣದ ದಾಳಿಗೆ ಸಿಲುಕಿ ಜಾಳುಜಾಳಾಗುತ್ತಿದೆ. ಸಂಬಂಧಗಳ ಗಾಢತೆಯ ನಡುವೆ ಶೀತಲಗಾಳಿ ಸುಳಿದಾಡತೊಡಗಿದೆ. ಗ್ರಾಮೀಣ ಸಂಸ್ಕೃತಿಯ ಮೇಲೆ ನಗರೀಕರಣ ಪ್ರಕ್ರಿಯೆ ಪ್ರಬಲವಾದ ಪ್ರಹಾರ ಮಾಡುತ್ತಿದೆ. ಮನುಷ್ಯ ಮತ್ತು ಸಮಾಜ ಬೇರೆ ಬೇರೆಯಾಗಿ ಕಾಣತೊಡಗಿದೆ. ಪ್ರಗತಿಯತ್ತ ಮುಖ ಮಾಡುವ ಭರದಲ್ಲಿ ನಾಗರೀಕತೆಯ ಸಾಮರಸ್ಯ ನಶಿಸಿಹೋಗುತ್ತಿದೆ. ಅನ್ಯ ದೇಶೀಯ ಸಂಸ್ಕೃತಿಯ ಆಗಮನಕ್ಕೆ ಸಹಜವಾಗಿಯೇ ನಾವು ಉತ್ಕಟವಾಗಿ ಪ್ರತಿಸ್ಪಂದಿಸುತ್ತಿದ್ದೇವೆ. ಇದು ಆಧುನಿಕ ಶಿಕ್ಷಣ ಕ್ರಮದಲ್ಲೂ ಧ್ವನಿಸಿದ ಪರಿಣಾಮ ಸಮಾಜ ತನ್ನ ಚಾರಿತ್ರಿಕ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.

ಅಂತರಂಗ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದರೆ ಪ್ರತಿಫಲವಾಗಿ ಆರೋಗ್ಯಕರ ಪ್ರೇಮವೆನ್ನುವುದು ಕಥೆಯಾಗಿ ತೋರುತ್ತಿದೆ. ಸುತ್ತಣ ಸಮಾಜದಲ್ಲಿ ಸಮುದಾಯದಲ್ಲಿ ಮನುಷ್ಯ ಸಂಬಂಧಗಳು ನಾಶವಾಗಿ, ಬದುಕಿನಲ್ಲಿ ಅಸ್ಥಿರತೆ ಇಣುಕುತ್ತಿದೆ. ಇದು ಸಮಾಜ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವ್ಯಕ್ತಿಯ ವೈಯಕ್ತಿಕ ಬದುಕಿನ ಆರ್ಥಿಕತೆಯ ಮೇಲೂ ಪ್ರಭಾವ ಬೀರಿದುದರಿಂದ ಗುಲಾಮಗಿರಿಯನ್ನು ಆತ ಅರಿವಿಲ್ಲದೇ ಒಪ್ಪಿಕೊಂಡು ಬಿಡುತ್ತಿದ್ದಾನೆ. ದುರದೃಷ್ಟವಶಾತ್ ಇಂದಿನ ಎಲ್ಲ ವ್ಯವಸ್ಥೆಯೂ ನಮ್ಮನ್ನು ಅತಿ ವಿಧೇಯರಾಗಿ, ಯಂತ್ರಜಡರಾಗಿ, ಮತಿಶೂನ್ಯರಾಗಿ ಪರಿವರ್ತಿಸುತ್ತಿದೆ. ಆಂತರಂಗಿಕವಾಗಿ ನಾವು ವಿಕಲಾಂಗರಾಗುತ್ತಿದ್ದೇವೆ. ಇದರಿಂದ ವೈಯಕ್ತಿಕ ಹಾಗೂ ಸಾಮುದಾಯಿಕ ಸಮಸ್ಯೆಗಳು ಹೆಚ್ಚುತ್ತಿವೆ. ಸಹಜವಾಗಿ ಅಸ್ಥಿರತೆಯೂ ಕಾಡಲಾರಂಭಿಸಿ ಭಯಮುಕ್ತ ವಾತಾವರಣವೆಂಬುದು ಶಾಶ್ವತವಾಗಿ ಮರೆಯಾಗುತ್ತಿದೆ.

ಮಾನವ ಸಂಬಂಧಗಳನ್ನು ಅರ್ಥ ಮಾಡಿಕೊಂಡಾಗ ಭಯಕ್ಕೆ ಸ್ಥಾನವೇ ಇರುವುದಿಲ್ಲ. ಮನುಷ್ಯ ಸಹಜ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಹ್ಯವಾಗಿಸಿಕೊಳ್ಳಲು ಅದರ ಸೂಕ್ಷ್ಮತೆಗಳು, ನೋವು ನಲಿವುಗಳನ್ನು ಕರಗಿಸಿಕೊಳ್ಳಲು ಆತನಿಗೆ ಅಪಾರ ಕ್ರಿಯಾಶೀಲತೆ ಅಗತ್ಯ. ಜಡ ಸಮಾಜದ ಕಟ್ಟುಪಾಡುಗಳಿಗೆ ವಿಧೇಯವಾದ, ನಿಷ್ಕ್ರಿಯ ಸಾಮರಸ್ಯವನ್ನು ಹೊಂದಿರುವ ವ್ಯಕ್ತಿಯಿಂದ ಇದು ಅಸಾಧ್ಯ. ಪೂರ್ವಗ್ರಹ ಪೀಡಿತವಲ್ಲದ ಅನ್ವೇಷಣೆ ಹಾಗೂ ಸ್ವಪ್ರಯತ್ನದಿಂದ ಸ್ಥಾಪಿತವಾಗುವ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಇಂಥ ಕ್ರಿಯಾಶೀಲತೆಯನ್ನು ಧಕ್ಕಿಸಿಕೊಳ್ಳಲು ಸಾಧ್ಯ.

ಇಂದಿನ ಬಹುತೇಕ ಸಂಘರ್ಷಗಳು, ಭಯೋತ್ಪಾದನೆಯಂಥ ವಿದ್ರೋಹಗಳು, ಸಮಾಜ ಘಾತಕ ಚಟುವಟಿಕೆಗಳು ನಾವು ವ್ಯಕ್ತಿಗಳು, ವಿಚಾರಗಳು, ವಸ್ತುಗಳೊಂದಿಗೆ ಹೊಂದಿರುವ ತಪ್ಪು ಸಂಬಂಧಗಳ ಅಥವಾ ಸಂಬಂಧರಾಹಿತ್ಯದ ಫಲ. ತಾಂತ್ರಿಕತೆಯ ಅತಿಯಾದ ಅವಧಾರಣೆಯಿಂದಾಗಿ ನಾವು ವ್ಯವಸ್ಥೆಯಲ್ಲಿ ವಿಫಲರಾಗುತ್ತಿದ್ದೇವೆ. ಜೀವನವೆಂದರೆ ಕೇವಲ ತಂತ್ರeನದಲ್ಲಿನ ಆವಿಷ್ಕಾರಗಳಲ್ಲ. ಅದು ನೋವು, ನಲಿವು, ಸೌಂದರ್ಯ, ಕುರೂಪ, ಪ್ರೀತಿ-ಪ್ರೇಮಗಳ ಸಂಗಮ. ಇದನ್ನು ಸಮಗ್ರವಾಗಿ ಅರ್ಥೈಸಿಕೊಂಡಾಗ ಅಂಥ ತಿಳಿವಳಿಕೆಗಳು ಹೊಸದಾದ ತಾಂತ್ರಿಕತೆಯೊಂದನ್ನು ರೂಪಿಸಬಲ್ಲುದು. ಇದು ಮನಸ್ಸು ಮತ್ತು ಅಪೇಕ್ಷೆಗಳಿಗೆ ಪೂರಕವಾಗಿರುತ್ತದೆ. ಭಾವನಾ ಜನ್ಯ ತಾಂತ್ರಿಕತೆಯ ಉದ್ದೇಶ ವಿನಾಶವಾಗಿರಲು ಸಾಧ್ಯವೇ ಇಲ್ಲ. ಅದು ಜೀವನದ ಸಮಗ್ರ ಪ್ರಕ್ರಿಯೆಗಳ ಅರಿವಿನ ಮಾರ್ಗ.

ತೀರಾ ಅಗತ್ಯ, ಅನಿವಾರ್ಯವೆಂದೆನಿಸಿರುವ ತಂತ್ರeನ ಇಂದಿನ ನಮ್ಮ ಅಂತರಂಗದ ಒತ್ತಡ-ಸಂಘರ್ಷಗಳನ್ನು ಪರಿಹರಿಸುತ್ತಿಲ್ಲ. ಗಲ್ಲಿಗಲ್ಲಿಗಳಿಗೊಂದು ಯೋಗ ಕಲಿಕಾ ಕೇಂದ್ರಗಳು, ಬೀದಿ ಬೀದಿಗಳಿಗೊಂದು ನಗೆಕ್ಲಬ್‌ಗಳು ಹುಟ್ಟಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಮಾನಸಿಕ ತುಮುಲಗಳನ್ನು ತಹಬಂದಿಗೆ ತರಲು ಮಠ-ಮಂದಿರಗಳ ಮೊರೆಹೋಗುತ್ತಿರುವವರಿಗೂ ಕೊರತೆಯಿಲ್ಲ. ಮನಶ್ಶಾಂತಿಗಾಗಿ ಬೋಧನೆ, ಪ್ರವಚನಗಳಲ್ಲಿ ಇನ್ನಿಲ್ಲದ ಕೋರಂ ಕಾಣುತ್ತಿರುವುದೂ ಇದೇ ಕಾರಣಕ್ಕೆ. ಜೀವನ ಸ್ವರೂಪವನ್ನು ಗ್ರಹಿಸಿಕೊಳ್ಳದೇ ಆತ್ಮಪ್ರೀತಿಯನ್ನು ತೂರಿ, ಒಲವಿನ ಒರತೆಯಿಲ್ಲದ ಹೃದಯ ಹೊತ್ತು ವೈeನಿಕ ಸಾಧನೆಯೊಂದೇ ಪ್ರತಿಷ್ಠೆಯ ಸಂಕೇತವೆಂದೂ, ಶಸ್ತ್ರ ಸಂಗ್ರಹವೇ ಸಾಮರ್ಥ್ಯದ ಮಾನದಂಡವೆಂದೂ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ.

ವೃತ್ತಿ ಕೌಶಲವೇ ಶಿಕ್ಷಣದ ಅಂತಿಮ ಗುರಿಯೆಂಬುದು ಇಂದಿನ ವಾದ. ಆದರೆ ಉದ್ಯೋಗ ನಿರತನ ಹತಾಶೆಯ ಸ್ಥಿತಿಗೆ ಪರಿಹಾರವನ್ನು ನಮ್ಮ ಶಿಕ್ಷಣ ರೂಪಿಸಿಕೊಡುತ್ತಿಲ್ಲ. ನಮ್ಮತನದ ಅರಿವಿಲ್ಲದ ತಾಂತ್ರಿಕತೆ ಏಕತಾನತೆಗೆ ಕಾರಣವಾಗಿದೆ. ಅಂಥ ಏಕತಾನತೆಯೇ ಬದುಕಿನ ಅಭದ್ರತೆಗೆ ದಾರಿ ಮಾಡಿಕೊಟ್ಟಿದೆ. ಬದುಕೆಂಬುದು ಬರಿದು ಬರಿದಾದ ಪರಿಣಾಮ ಹೊಸತನದ ಕ್ಷಣಗಳಿಂದ ಅದನ್ನು ತುಂಬಿಕೊಡಲು ನಮ್ಮಲ್ಲಿ ಸಂಬಂಧಗಳ ಸೆಲೆಯೇ ಒತ್ತಿಹೋಗಿದೆ. ಭೀಕರ ಬರಗಾಲ ಒಟ್ಟಾರೆ ಮಾನವ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಈ ಬಾಳಿನ ಸುವಿಶಾಲ ಹರಹು ನಮಗೆ ನಿಲುಕುತ್ತಿಲ್ಲ. ಅನುಭವ, ಅನುಭವಗಳು ಧಕ್ಕದೇ ಹೋಗಿವೆ. ಸಮಗ್ರ ಜೀವನ ಹಾಗೂ ಕ್ರಿಯಾಶೀಲತೆಗಳಿಂದ ನಾವಿಂದು ಬಹುದೂರ ಬಂದುಬಿಟ್ಟಿದ್ದೇವೆ. ಈಗೇನಿದ್ದರೂ ನಮ್ಮ ಜೀವಂತಿಕೆಗಿರುವ ಏಕೈಕ ಸಾಕ್ಷಿಯೆಂದರೆ ಆಕ್ರಮಣಶೀಲತೆ. ಅದನ್ನೇ ನಾವು ಜೀವನದ ಎಲ್ಲ ಸ್ತರಗಳಲ್ಲೂ ಪ್ರಯೋಗಿಸುತ್ತಿದ್ದೇವೆ. ಮನಸ್ಸಿನೊಳಗೂ ಅeತ ಅಂಜಿಕೆಯ ಫಲವಿದು. ಅದನ್ನು ಇನ್ನಷ್ಟು ಕಾಲ ಅeತವಾಗಿಡುವ ಹುನ್ನಾರವಾಗಿ ನಾವು ನಮ್ಮ ಸುತ್ತಲೂ ಇಂಥ ಹುಸಿ ಆಕ್ರಮಣಗಳಿಂದ ಭದ್ರತಾ ವಲಯಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೂ ಹೋಗದೆ ಅವರಿಗಿಂತ ನಾವು ಬಲಿಷ್ಠರೆಂದು ತೋರಿಸಿಕೊಳ್ಳಲು ಹವಣಿಸುತ್ತೇವೆ. ಇಂಥ ಹವಣಿಕೆಗಳಲ್ಲಿ ಪ್ರೀತಿಗೆಲ್ಲಿ ಜಾಗ?

ಪ್ರೀತಿ ಎಂದರೆ ಅದು ಸಂವಹನ ಸ್ವರೂಪಿ. ಅದು ನಿಂತಲ್ಲಿ ನಿಲ್ಲಲಾರದು. ನಿರಂತರ ಹರಿಯುವಿಕೆ ಅದರ ಜನ್ಮಗುಣ. ಇಂಥ ಚಲನಶೀಲತೆಯೇ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ರಹದಾರಿಯಾಗುತ್ತದೆ. ಪರಸ್ಪರ ಸ್ಪಂದನದ ಫಲವಾಗಿ ಸಂಬಂಧಗಳು ದೃಢಗೊಳ್ಳುತ್ತದೆ. ಆದರಿಂದು ನಾವು ಪ್ರೀತಿಯೆಂಬುದನ್ನು ಕಳೆದುಕೊಂಡು ಬರಿದಾಗಿ ಬಿಟ್ಟಿದ್ದೇವೆ.

ಸಾಂಸ್ಥಿಕ ವ್ಯವಸ್ಥೆಯೊಂದನ್ನೇ ಮೂಗಿನ ನೇರಕ್ಕಿಟ್ಟುಕೊಂಡು ಉಳಿದೆಲ್ಲ ಭಾವನೆಗಳಿಗೆ ಕಣ್ಕಾಪುಕಟ್ಟಿಕೊಂಡು ನಾಗಾಲೋಟದಿಂದ ಮುನ್ನುಗ್ಗುತ್ತಿದ್ದೇವೆ. ನಮ್ಮ ಮೂಗುದಾಣ ಜಗ್ಗಿ ನಿಯಂತ್ರಿಸುತ್ತಿರುವ ವ್ಯವಸ್ಥೆಯ ಕೂಸಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿದ್ದೇವೆ. ಇದು ತೀರಾ ಅಪಾಯಕರ. ನಿರ್ದಿಷ್ಟ ಉದ್ದೇಶ ಸಾಧನೆಯಾದ ಕೂಡಲೇ ನಮ್ಮ ಪಾಡಿಗೆ ನಮ್ಮ ಬಿಟ್ಟು ವ್ಯವಸ್ಥೆಯೇ ಫಲಾಯನ ಮಾಡಿಬಿಡಬಹುದು. ಅಂಥ ಸನ್ನಿವೇಶದಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಮನೋಧರ್ಮವೂ ನಮ್ಮಳಿದಿರುವುದಿಲ್ಲ. ನಮ್ಮ ಪರಿಸರಕ್ಕೆ ಮರಳುವ ಹಾದಿಯೂ ತಿಳಿದಿರುವುದಿಲ್ಲ. ಮೂಗುದಾಣ ಹಿಡಿದು ಮುನ್ನಡೆಸುವವರೂ ಇರುವುದಿಲ್ಲ. ಅಂಥ ಹೀನಾಯ ಸ್ಥಿತಿಯಲ್ಲಿ ಕೊರಗುವುದೊಂದೇ ದುರ್ಗತಿ ನಮ್ಮ ಪಾಲಿಗುಳಿದುಬಿಡಬಹುದು. ಹಿಡಿಯಷ್ಟು ಪ್ರೀತಿ ಆಂತರ್ಯದಲ್ಲಿ ಉಳಿದದ್ದೇ ಆದಲ್ಲಿ ಅದೆಂಥದೇ ಮರಳುಗಾಡಿಲಿ. ಸಂಬಂಧಗಳ ಓಯಸಿಸ್‌ಗಳನ್ನು ಹುಡುಕಿಕೊಂಡು ಸಾಗಬಹುದು.

ಪ್ರೀತಿ ಅರಳುವುದು ವೈಯಕ್ತಿಕ ಸ್ವಾತಂತ್ರ್ಯದ ಹೊಂಗಿರಣಗಳ ನಡುವೆ ಮಾತ್ರ. ಬಲವಂತದ ಯಾವುದೇ ಶಿಸ್ತಿನಿಂದಲೂ ಅದರ ವಿಕಸನ ಅಸಾಧ್ಯ. ಬಹಿರಂಗದಲ್ಲಿ ಅತ್ಯಂತ ಶಿಸ್ತಿನ ಮನುಷ್ಯನಾಗಿ ತೋರುವ ಯಾವುದೇ ವ್ಯಕ್ತಿಯಲ್ಲಿ ಆಂತರಂಗಿಕ ತೊಳಲಾಟಗಳಿರಬಹುದು. ಮಾನಸಿಕ ಅಸ್ತವ್ಯಸ್ಥತೆ ಕಾಡುತ್ತಿರಬಹುದು. ಅದು ಬೇರೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಬಿಡಬಹುದಾದ ಅಪಾಯಗಳಿವೆ. ಸಮಕಾಲೀನ ಸಮಾಜದ ಬದುಕಿಗೆ ಬೇಕಾಗಿ ರೂಢಿಸಿಕೊಂಡಿರುವ ಶಿಸ್ತು ಮಾನಸಿಕ ವಿಪ್ಲವಗಳಿಗೆ ಪರಿಹಾರ ದೊರಕಿಸಿಕೊಡದು. ಅಂಥ ವಿಪ್ಲವಗಳು ಅಂತರಂಗದಲ್ಲಿ ಹುಡುಕಿಕೊಂಡು ಹಠಮಾರಿಯಾಗುತ್ತ ಸಾಗುತ್ತದೆ. ವ್ಯಕ್ತಿಗತ ಭಯ, ದ್ವೇಷಗಳಿಗೆ ಇದೇ ಕಾರಣವಾಗುತ್ತದೆ. ಪ್ರತ್ಯೇಕವಾದಗಳಂಥವು ಇಲ್ಲಿಂದಲೇ ಹುಟ್ಟು ಪಡೆಯುತ್ತವೆ. ಇದನ್ನೇ ಮಹತ್ವಾಕಾಂಕ್ಷೆಯೆಂದು ನಾವು ಪರಿಭಾವಿಸುತ್ತೇವೆ. ಇದರ ಹಿಂದಿನ ಸಮಸ್ಯೆಯನ್ನು ಗ್ರಹಿಸುವ ಪ್ರಯತ್ನಕ್ಕೂ ನಾವು ಮುಂದಾಗುವುದಿಲ್ಲ. ಸಮಗ್ರ ವ್ಯಕ್ತಿತ್ವದ ಎಲ್ಲ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ, ಅದರ ಆಯಾಮಗಳ ಅಭಿವ್ಯಕ್ತಿಗೆ ನೆಲೆಯೊದಗಿಸುವುದರಿಂದ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅದು ಅಂತಿಮವಾಗಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

ಪರಿವರ್ತನೆಯೆಂಬುದು ವ್ಯವಸ್ಥೆಯಲ್ಲಿ ಬರಬೇಕಾದುದಲ್ಲ. ಇಡೀ ವ್ಯವಸ್ಥೆಯನ್ನೇ ಬದಲಿಸಿಬಿಡುತ್ತೇನೆಂಬುದು ಮೂರ್ಖತನವಾದೀತು. ಬದಲಾವಣೆ ಅಂತರಂಗದಲ್ಲಿ ಕಾಣಿಸಿಕೊಳ್ಳಬೇಕಾದ್ದು. ಪ್ರತೀ ವ್ಯಕ್ತಿಯೂ ಪ್ರೀತಿಪೂರಿತ ಪರಿವರ್ತನೆಯೆಡೆಗೆ ಮುಖ ಮಾಡಿದಾಗ ತಂತಾನೆ ವ್ಯವಸ್ಥೆಯೂ ಬದಲಾಗುತ್ತದೆ.

ಸಮಸ್ತ ಸಂಬಂಧಗಳಲ್ಲಿ ನಾವು ಪ್ರತಿಫಲನಗೊಳ್ಳಬೇಕು. ಆಗ ಸಹಜವಾಗಿ ನಮ್ಮ ಇತಿಮಿತಿಗಳ ದರ್ಶನವಾಗುತ್ತದೆ. ಅಂತಶ್ಚೇತನವನ್ನು ಅದರ ಆಂತರಿಕ ರಚನೆಗಳನ್ನು ಪುನರ್‌ನಿರ್ಮಿಸಿಕೊಳ್ಳಲು ಇದು ಸಹಕಾರಿ. ಭಾವತರಂಗಗಳಲ್ಲಿ ಅಭಿವ್ಯಕ್ತಿಗೊಳ್ಳುವ ಆಕಾರರಹಿತ ಸಂವೇದನೆಗಳು ವ್ಯಕ್ತಿಯನ್ನು ಪರಿಶುದ್ಧಗೊಳಿಸುತ್ತವೆ. ವ್ಯಕ್ತಿತ್ವದ ಸಮಗ್ರ ಪರಿಯೊಳಗೆ ಭಾವನೆಗಳಿಗೆ ಸೂಕ್ತ ಸ್ಥಾನಮಾನಗಳು ಸಿಗದಿದ್ದಾಗ ಹೊಯ್ದಾಟ ಸಹಜ. ಜೀವನದ ಮೂಲಭೂತ ಆಯ್ಕೆ ಇಂಥ ಭಾವನೆಗಳಿಂದಲೇ ನಡೆಯುವಂಥದ್ದು. ಆತ್ಮಬಲದೊಂದಿಗೆ ಮುನ್ನಡಿ ಇಡುವ ಯಾವುದೇ ವ್ಯಕ್ತಿ ಭಾವನೆಗಳನ್ನು, ಅದರೊಂದಿಗೆ ಗಟ್ಟಿಗೊಳ್ಳುವ ಸಂಬಂಧಗಳನ್ನು ನಿರಾಕರಿಸಲಾರ. ಸೃಜನಶೀಲ ವಿರೋ ಆಕ್ರಮಣಶೀಲತೆಗೆ ಎಡೆಮಾಡಿಕೊಡಲಾರ. ಅಂತಃಕರಣದ ವಿಕಾಸ ಕೂಡಾ ಸಾಧ್ಯವಾಗುವುದು ಇಂಥ ಆತ್ಮಾನುಭವಗಳಿಂದಲೇ.

ನಮ್ಮನ್ನು ನಾವು ನಿರ್ದಿಷ್ಟ ಮಿತಿಯೊಳಗೆ ಕಟ್ಟಿಕೊಳ್ಳುವ ಬದಲು ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳೋಣ. ಪ್ರತಿದಿನದ ಅರುಣೋದಯಕ್ಕೆ ಮೈಯೊಡ್ಡಿ ಹೊಂಗಿರಣಗಳನ್ನು ತೂರಿಸಿಕೊಳ್ಳೋಣ. ಸಂಬಂಧಗಳ ಮೂಸೆಯೊಳಗೆ ಬೇಯುವ ಹೃದಯ ಇನ್ನಷ್ಟು ಪಕ್ವವಾದೀತು. ಸಂಕೀರ್ಣ ಸಮಾಜದೊಳಗೆ ಭಾವನೆಗಳ ಜಿಪುಣತನ ತೋರದೆ ಉದಾರವಾದಿಯಾದರೆ ಮಾತ್ರ ಬದುಕಿನ ಮಹಲು ತಲೆ ಎತ್ತಲು ಸಾಧ್ಯ.

ಪ್ರೀತಿಯೆಂಬುದು ಬರಿದಾಗುವ ಸಂಪನ್ಮೂಲ. ಬಗೆಬಗೆದು ಹಂಚಿದಷ್ಟೂ ಜಲಕಂಡಿ ದೊಡ್ಡದಾಗುತ್ತ ಹೋಗುತ್ತದೆ. ಹೊಸ ನೀರು ಬುಗ್ಗೆಯಾಗಿ ಚಿಮ್ಮುತ್ತದೆ. ಸುತ್ತಲ ಪರಿಸರವೇ ಹಸಿರಾಗುತ್ತ ಸಾಗುತ್ತದೆ. ಬೊಗಸೆಯಲ್ಲಿ ತುಂಬಿಕೊಡುವ ಗುಟುಕುಪ್ರೀತಿ ಹತ್ತಾರು ಬರಡು ಜೀವಗಳಿಗೆ ಪುನರ್ಜನ್ಮ ನೀಡೀತು.

ಸಣ್ಣತನಗಳ ಕದರು ಮೂಡಿ ಆಂತರ‍್ಯದ ಬೆಳಕು ಮಂಕಾಗಲು ಬಿಡದಿರುವ ಜಾಗೃತಿ ನಮ್ಮ ಈಗಿನ ಅಗತ್ಯ. ನಿರಂತರ ಹರಿವೇ ಜೀವನದ ಯಶಸ್ಸಿನ ಗುಟ್ಟು. ಅದೆಂಥದೇ ಆಕ್ರಮಣಗಳಾಗಲೀ ಅವುಗಳನ್ನೆದುರಿಸಿ ನಾವು ನಾವಾಗಿಯೇ ಮುನ್ನಡಿ ಇಡೋಣ. ಪ್ರತಿ ಬೆಳಗು ಹೊಸತಾಗಿರಲಿ. ಹೊಸ ಹೊಸ ಬದುಕ ತರಲಿ. ಹೊಸ ಸಂಬಂಧಗಳ ಕಟ್ಟಿಕೊಡಲಿ ಎಂಬ ಸಕಾರಾತ್ಮಕ ಆಶಯದೊಂದಿಗೇ ಈ ಬರಹಕ್ಕೆ ಫುಲ್‌ಸ್ಟಾಪ್ ಇಡುತ್ತೇನೆ.