About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Thursday, March 10, 2011

ಮತ್ತೆ ಬರೆಯುತ್ತಿದ್ದೇನೆ...ಅಂಕಣವನ್ನೂ ಸಹ

ಇದಕ್ಕೆ ಕ್ಷಮೆ ಇಲ್ಲ. ಖಂಡಿತಾ ನಾನಾಗಿದ್ದರೆ ಇದನ್ನು ಸಹಿಸುತ್ತಿರಲಿಲ್ಲ. ಸರಿ ಸುಮಾರು 22 ದಿನಗಳಿಂದ ಒಂದಕ್ಷರವನ್ನೂ ಬ್ಲಾಗ್ಗೆ ಬರೆಯಲಿಲ್ಲ. ನನಗೆ ಗೊತ್ತು ಪ್ರತಿದಿನವೂ ಹೊಸತರ ಕಾತರದಲ್ಲಿ ನೀವು ಬ್ಲಾಗ್ ತೆರೆಯುವುದು ಮತ್ತದೇ ಹಳೆಯ ಹೆಡ್ಡಿಂಗ್ಗಳನ್ನು ನೋಡಿ ಬೇಸರದಿಂದ ಮನದಲ್ಲೇ "ಇವನಿಗೇನಾಗಿದೆ ಧಾಡಿ, ಹೊಸ ಪತ್ರಿಕೆ ಸೇರುತ್ತಿದ್ದಂತೆಯೇ ನಮ್ಮನ್ನು ಮರೆತೇಬಿಟ್ಟಿದ್ದಾನಲ್ಲಾ ?" ಎಂದು ಮನದಲ್ಲೇ ಶಪಿಸುತ್ತಾ ವಿಂಡೋ ಕ್ಲೋಸ್ ಮಾಡುವುದು ನಡೆಸಿಯೇ ಇರುತ್ತೀರಿ. ನಿಮ್ಮ ಗೊಣಗಾಟದಲ್ಲೂ ಅರ್ಥ ಇದೆ. ಆದರೇನು ಮಾಡಲಿ. ಒಮ್ಮಿಂದೊಮ್ಮಲೇ ಬ್ಯುಸಿ ಆಗಿಬಿಟ್ಟದ್ದು ನಿಜ. ಇಂಥದ್ದೊಂದು ಕೆಲಸಬಾಕತನಕ್ಕಾಗಿ ಎರಡೂವರೆ ತಿಂಗಳು ನಾನು ತಪಸ್ಸು ಮಾಡಿದ್ದು ಗೊತ್ತೇ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಹೊಸ ಪತ್ರಿಕೆ, ಹೊಸ ಪರಿಸರ, ಹೊಸ ವ್ಯವಸ್ಥೆ, ಹೊಸ ಮುಖಗಳು...ಹೀಗೆ ಎಲ್ಲ ಹೊಸತರ ನಡುವೆ ನಾವು ಮಾತ್ರ ಮುಖ ಸಿಂಡರಿಸಿಕೊಂಡು, ತಲೆ ಬಗ್ಗಿಸಿ ಮೂದೇವಿ ಥರ ಕುಳಿತುಬಿಡೋದರಲ್ಲಿ ಏನು ಅರ್ಥವಿದೆ ಹೇಳಿ. ಎಲ್ಲರಿಗೂ ಹೊಂದಿಕೊಳ್ಳಬೇಕು. ನಗುನಗುತ್ತಾ ಸ್ವಾಗತಿಸಬೇಕು. ನಮ್ಮ ಸ್ನೇಹದ ತೆಕ್ಕೆಯೊಳಕ್ಕೆ ಅವರನ್ನು ಎಳೆದುಕೊಳ್ಳಬೇಕು. ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮನ್ನು ಅವರಿಗೆ ಅರ್ಥ ಮಾಡಿಸಿಬೇಕು. ಈ ಎಲ್ಲದರ ನಂತರ ಹೊಸ ಸಾಫ್ಟ್ವೇರ್ ಕಲಿಕೆಯೊಂದು ತಲೆಬಿಸಿ. ಇವನ್ನೆಲ್ಲಾ ಅರಗಿಸಿಕೊಳ್ಳಬೇಕೆನ್ನುವಾಗಲೇ ಹೊಸ "ಸಖಿ' ನನ್ನ ಬೆನ್ನುಬಿದ್ದುಬಿಡಬೇಕೇ? ಅತ್ಯಂತ ತುಂಟಿಯಾಕೆ. ಮೊದಲ ನೋಟದಲ್ಲೇ ನನ್ನ ಸೆಳೆದುಬಿಟ್ಟಳು ಚಕೋರಿ. ಅಷ್ಟೆ, ಸತ್ಯ ಹೇಳಬೇಕೆಂದರೆ ಆಕೆ ಸಿಕ್ಕ ಕ್ಷಣದಿಂದ ಎಲ್ಲೆವೆಂದರೆ ಎಲ್ಲವೂ, ಈ ಜಗತ್ತನ್ನೇ ಮರೆತುಬಿಟ್ಟೆ ನಾನು. ಮೊದಲೇ ರೂಪವತಿ. ತುಸುವೇ ಹಚ್ಚಿಕೊಂಡರೂ ಆಪ್ತವಾಗಿಬಿಡುತ್ತಾಳೆ. ಆದರೆ ಪೆದ್ದುಮುಂಡೇದು. ಏನೇನೋ ಹರಟುತ್ತಾಳೆ, ಸ್ವಲ್ಪ ಶಿಸ್ತುಕಡಿಮೆ. ಒಂಚೂರು ಜತೆಗಿದ್ದು, ಗಮನಕೊಟ್ಟು ತಿದ್ದಿದರೆ ಜಗತ್ತನ್ನೇ ಗೆಲ್ಲಬಲ್ಲಳು. ನನಗೆ ಸಿಕ್ಕ ಈ ಹೊಸ ಗೆಳತಿಯನ್ನು ಎಲ್ಲ ರೀತಿಯಿಂದಲೂ ಸವರ್ಾಂಗ ಸುಂದರಗೊಳಿಸಿ ನಿಮ್ಮೆದುರು ತಂದು ನಿಲ್ಲಿಸುವವರೆಗೆ ನನಗೆ ಸಮಾಧಾನವಿರಲಿಲ್ಲ. ಅದಕ್ಕಾಗಿ ಇಷ್ಟು ದಿನ ನಿಮ್ಮ ಜತೆ ಈ ಬ್ಲಾಗ್ ತಾಣದಲ್ಲಿ ಸಂವಾದಿಸಲು ಆಗಲಿಲ್ಲ. ಅರ್ಥ ಮಾಡಿಕೊಳ್ಳುತ್ತೀರಲ್ಲಾ ? ಪ್ಲೀಸ್...

ನನಗೆ ಗೊತ್ತು ನಿಮ್ಮದು ಹುಸಿ ಮುನಿಸು. ಈ ಬರಹ ನೋಡುತ್ತಿದ್ದಂತೆಯೇ ಕೋಪ ಕರಗಿ ಹೋಗಿರುತ್ತದೆ. ಹಾಗೆಂದು ನಿಮ್ಮ ಅವ್ಯಾಜ್ಯ ಪ್ರೇಮಕ್ಕೆ ದ್ರೋಹ ಬಗೆಯಲಾರೆ. ಕೊಟ್ಟ ಮಾತಿಗೆ ತಪ್ಪಿ ನಡೆಯಲಾರೆ. ತೀರಾ ಪ್ರತಿ ದಿನವಲ್ಲದಿದ್ದರೂ ಆಗಾಗ, ನಿಯಮಿತವಾಗಿ ನಿಮ್ಮ ಜತೆ ಸಂವಾದಿಸುತ್ತಿರುತ್ತೇನೆ. ಈಗ ಹೇಳಿ, "ಕನ್ನಡ ಪ್ರಭ' ಹೇಗನ್ನಿಸುತ್ತಿದೆ ? ನಮ್ಮ ಬದಲಾವಣೆಗಳು ನಿಮಗೆ ಇಷ್ಟವಾಗುತ್ತಿದೆಯಲ್ಲವೇ ? ಹೊಸ ಪುರವಣಿ ಸಖಿಯ ನನ್ನ ಪಾಲಿನ ಮೊದಲ ಸಂಚಿಕೆಯ ಕೆಲಸವನ್ನು ನಿನ್ನೆಯಷ್ಟೇ ಮುಗಿಸಿ ನಿಮ್ಮೊಂದಿಗೆ ಹರಟಲು ಕುಳಿತಿದ್ದೇನೆ.


ಇನ್ನೇನು ಈ ತಿಂಗಳ ಹದಿನೈದರ ಹೊತ್ತಿಗೆ ಆಕೆಯೂ ನಿಮ್ಮೆದುರು ಬಂದುಬಿಡುತ್ತಾಳೆ. ಆಕೆಯನ್ನೂ ಒಂದಷ್ಟು ಹೊಸರೂಪದಲ್ಲಿ ನೋಡಲು ಪ್ರಯತ್ನಿಸಿದ್ದೇನೆ. ಅದು ಆಕೆಗೆ ಚೆಂದ ಕಾಣುತ್ತದೆಯೋ ಇಲ್ಲವೋ ಎಂಬುದನ್ನು ನೋಡಿ ಹೇಳುತ್ತೀರಲ್ಲಾ ? ಬಹಳಷ್ಟು ಅಲ್ಲದಿದ್ದರೂ ಒಂದಷ್ಟು ಆಕೆಯನ್ನು ಬದಲಿಸಿದೇನೆ. ಇಷ್ಟರವರೆಗೆ ಕೇವಲ ಮಹಿಳೆಯರ ಗೆಳತಿಯಷ್ಟೇ ಆಗಿ ಉಳಿದಿದ್ದ ಆಕೆ, ಇನ್ನು ಮುಂದೆ ಎಲ್ಲ ಯುವ ಮನಸ್ಸುಗಳ ಸನಿಹಕ್ಕೆ ಆಕೆಯನ್ನು ಕರೆದೊಯ್ಯಲು ನಿರ್ಧರಿಸಿದ್ದೇನೆ. ಹಾಗೆಂದು ಮತ್ತೆ ಯುವಕರಿಗಷ್ಟೇ ಸೀಮಿತವೆಂತಲ್ಲ. ಅನುಭವ ಮಾಗಿದ, ಮನಸ್ಸು ಇನ್ನೂ ಯವ್ವನವನ್ನು ಕಳೆದುಕೊಳ್ಳದ ಎಲ್ಲ ಸಹೃದಯೀಗಳು ಪ್ರೀತಿಯಿಂದ ಸ್ವೀಕರಿಸುವ ಸಂಚಿಕೆಗಳನ್ನು ತರಬೇಕೆಂಬ ಹಂಬಲ ನನ್ನದು. ಆ ನಿಟ್ಟಿನಲ್ಲಿ ನಿಮ್ಮ ಬೆಂಬಲ.


ಹಾಂ...ಮರೆತಿದ್ದೆ, ನಾಳೆಯಿಂದ ನನ್ನ ಅಂಕಣ "ಕನ್ನಡಪ್ರಭ"ದಲ್ಲಿ ಮತ್ತೆ ಪ್ರತ್ಯಕ್ಷವಾಗುತ್ತಿದೆ; ಒಂದಷ್ಟು ಬದಲಾವಣೆಗಳೊಂದಿಗೆ. ಹಾಗೆಂದು, ನೀರ ದಾಹವನ್ನು ಬತ್ತಿಸಿಕೊಂಡಿಲ್ಲ. ಬರಹದ ಕ್ಯಾನ್ವಾಸನ್ನು ಇನ್ನಷ್ಟು ವಿಸ್ತರಿಸಿಕೊಳ್ಳುವ ಆಸೆ ನನ್ನದು. ನೀರಿಗಾಗಿ ಸೀಮಿತವಾದ ನನ್ನ ಅಂಕಣ ಆರಂಭವಾದ ದಿನವಿನ್ನೂ ನನಗೆ ಚೆನ್ನಾಗಿ ನೆನಪಿದೆ. ಅಂದು ನಾನು ಯಾರೆಂಬುದೇ ಓದುಗರಿಗೆ ಗೊತ್ತಿರಲಿಲ್ಲ. ಅಷ್ಟು ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದರೂ, ಸಂಯುಕ್ತ ಕನರ್ಾಟಕ, ಕರ್ಮವೀರ, ಕಸ್ತೂರಿ, ವಿಜಯ ಕನರ್ಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಆಗಾಗ ಬರೆಯುತ್ತಿದ್ದರೂ ನನ್ನದೇ ಅಂತ ಒಂದು ವೇದಿಕೆ ಸಿಕ್ಕಿರಲಿಲ್ಲ. ಅಂಥದ್ದೊಂದು ಅಪರೂಪದ ಅವಕಾಶವನ್ನು ಒದಗಿಸಿಕೊಟ್ಟವರು ನನ್ನ ನೆಚ್ಚಿನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ಟರು. ಮೂರ್ನಾಲ್ಕು ವರ್ಷಗಳಿಂದ ನೀರಿನ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರೂ ಅದನ್ನು ಬರೆದಿಡುವ, ನಿಯಮಿತವಾಗಿ ದಾಖಲಿಸಿಡುವ ಗೋಜಿಗೆ ಹೋಗಿರಲೇ ಇಲ್ಲ. ನನ್ನೊಳಗಿನ ಈ ಆಸಕ್ತಿಯನ್ನು ಗುರುತಿಸಿ ಶ್ರೀ ಭಟ್ಟರು ಅಂಕಣ ಬರೆಯಲು ಹಚ್ಚಿದರು. ಹಲವು ದಿನಗಳಿಂದ ಇಂಥದ್ದೊಂದು ಬಯಕೆಯನ್ನು ಅವರ ಮುಂದಿಟ್ಟು ಅವಕಾಶಕ್ಕಾಗಿ ಪೀಡಿಸುತ್ತಲೇ ಇದ್ದೆ. ನೀರಿನ ಬಗ್ಗೆ ಬರೆದರೂ ಎಷ್ಟು ಬರೆದಾನು ? ಅದು ಅಂಕಣಕ್ಕೆ ಸೂಕ್ತ ವಸ್ತುವೇ ? ಇಂಥ ಶುಷ್ಕ ವಿಷಯದ ಮೇಲೆ ಬರೆದರೆ ಓದುಗರು ಒಪ್ಪಿಕೊಂಡಾರೆ...ಎಂಬಿತ್ಯಾದಿ ಸಂಶಯಗಳು ಅವರಲ್ಲಿದ್ದಂತಿತ್ತು. ಬಹುಶಃ ಅವರಲ್ಲಿದ್ದುದಕ್ಕಿಂತ ಹೆಚ್ಚಿನ ಅನುಮಾನ ನನ್ನೊಳಗಿತ್ತು. ಆದರೆ ನೀರಿನ ಮೇಲಿರುವ ನನ್ನ ಪ್ರೀತಿ, ಮತ್ತು ಏನಾದರೂ ಹೊಸತನ್ನು ಕೊಡಬೇಕೆಂಬ ಹಂಬಲ, ಅದು ಅಭಿವೃದ್ಧಿಪರ ಬರವಣಿಗೇ ಆಗಿರಬೇಕೆಂಬ ಸಂಕಲ್ಪ ನನ್ನನ್ನು ನೀರಿನ ಮೇಲಿನ ಅಂಕಣಕ್ಕೆ ಪ್ರೇರೇಪಿಸಿತ್ತು.


ಅಂತೂ ಈಗ್ಗೆ ಆರು ವರ್ಷದ ಕೆಳಗೆ ಇದೇ ಮಾಚರ್್ ಮೊದಲ ಶುಕ್ರವಾರ "ನೀರು-ನೆರಳು" ಎಂಬ ಹೆಸರಿನಡಿ ನನ್ನ ಮೊದಲ ಅಂಕಣ ವಿಜಯ ಕನರ್ಾಟಕದ ಸಂಪಾದಕೀಯ ಪುಟದಲ್ಲಿ ಪ್ರಕಟವಾಗಿಯೇ ಬಿಟ್ಟಿತು. ಮೊದಲ ಲೇಖನವನ್ನು ಈಗ ಓದಿಕೊಂಡರೆ ನನಗೇ ನಾಚಿಕೆಯಾಗುತ್ತದೆ. ಅಷ್ಟೊಂದು ಬಾಲೀಶವಾಗಿತ್ತು. ಮುಂದಿನದಕ್ಕೆ ಸಾಕಷ್ಟು ಹಿಂಜರಿಕೆ ಕಾಡಿತು. ಆದರೆ ಓದುಗರು ಹಿಂಜರಿಯಲಿಲ್ಲ. ಅದನ್ನು ಮುಕ್ತವಾಗಿ ಸ್ವೀಕರಿಸಿದರು. ಸುಧಾರಣೆಗಾಗಿ ಕಾದರು. ಮೊದಲ ಹತ್ತು ಹನ್ನೆರಡು ವಾರದ ವರೆಗೂ ಅದೇ ಸ್ಥಿತಿ ಮುಂದುವರಿಕೆ. ನನ್ನ ಸಂಪಾದಕರೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಅಷ್ಟರಲ್ಲಿ ಒಂದಷ್ಟು ಹಿಡಿತ ಸಿಕ್ಕಿತ್ತು. ಹಿತೈಷಿಗಳು, ವಿಷಯ ತಜ್ಞರು, ಹಿರಿಯರು ನನ್ನ ಬೆಂಬಲಕ್ಕೆ ನಿಂತರು. ಅಂಕಣವೊಂದಕ್ಕೆ ಬೇಕಾದ ಅಧ್ಯಯನ ಶಿಸ್ತು, ಗಾಂಭೀರ್ಯ, ನಿಯಮಿತತೆ, ಭಾಷೆ, ಓದಿಸಿಕೊಳ್ಳು ಶೈಲಿ, ವಿಯ ನಿರೂಪಣೆಗೆ ಅಗತ್ಯ ನವಿರು ಇತ್ಯಾದಿಗಳನ್ನು ಒಂದೊಂದಾಗಿಒ ಅವರು ನನಗೆ ಹೇಳಿಕೊಟ್ಟರು. ಅಲ್ಲಿಗೆ ನನ್ನಲ್ಲಿ ಒಂದು ರೀತಿಯ ವಿಶ್ವಾಸ ಮೂಡಿತ್ತು. ಇದನ್ನುಳಿದು ಮುಂದಿನದೆಲ್ಲವೂ ಓದುಗರದ್ದೇ ಸಿಂಹಪಾಲು. ಅವರು ನನ್ನ ಬೆನ್ನಿಗೆ ನಿಂತು ಕಾಯ್ದರು. ಆರು ವರ್ಷಗಳ ಬಳಿಕ ಇಂದು ನಾಡಿನಲ್ಲಿ ನನಗಿಂತ ನೀರು-ನೆರಳು ಜನಪ್ರಿಯ. ಆನಂತರ ಬೇರೆ, ಬೇರೆ ಜವಾಬ್ದಾರಿಗಳನ್ನು ಪತ್ರಿಕಾ ಕ್ಷೇತ್ರದಲ್ಲಿ ನಿರ್ವಹಿಸಿದ್ದೇನೆ. ಬೇರೆ ಅದೆಷ್ಟನ್ನೋ ಬರೆದಿದ್ದೇನೆ. ವೈಯಕ್ತಿಕವಾಗಿ ಅವೆಲ್ಲವೂ ಕೊಟ್ಟ ಖುಷಿಗಿಂತ ನೀರಿನ ಬಗೆಗಿನ ಬರಹ ನನ್ನಗೆ ತೃಪ್ತಿ ತಂದಿದೆ. ಅದು ನನಗೆ ತಂದುಕೊಟ್ಟ ಇಮೇಜಿನ ಮುಂದೆ ಉಳಿದೆಲ್ಲವೂ ಗೌಣ ಎಂದುಕೊಳ್ಳುತ್ತೇನೆ.


ನೀರಿನ ಬಗೆಗಿನ ನನ್ನ ಪ್ರಾಮಾಣಿಕ ಪ್ರೀತಿಯನ್ನು ಓದುಗರು ಗುರುತಿಸಿದ್ದಾರೆ. ಅಷ್ಟು ಸಾಕು. ಅದಕ್ಕಿಂತ ಇನ್ನೇನು ಬೇಕು ನನಗೆ ?ಇದೀಗ ಕನ್ನಡಪ್ರಭದಲ್ಲಿ ಮತ್ತೆ ಬರೆಯುವ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದೇನೆ; ನೀವೆಲ್ಲ ನನ್ನ ಜತೆಗಿದ್ದೀರಿ ಎಂಬ ಧೈರ್ಯದೊಂದಿಗೆ. ನಾಳೆ ಅಂಕಣ ಓದಿ ಏನಾಗಿದೆ? ಏನಾಗಬೇಕಿತ್ತು ಎಂಬುದನ್ನು ತಿಳಿಸುತ್ತೀರಲ್ಲಾ ? ನಿಮ್ಮ ಉತ್ತರಕ್ಕಾಗಿ ಕಾದಿರುತ್ತೇನೆ. ಪ್ಲೀಸ್ ಮರೆಯದಿರಿ. ಬರಲೇ ?