About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Friday, April 29, 2011

ತಪ್ಪಾಯ್ತು ತಿದ್ಕೋತೀನಿ!

ಹೌದು, ಹಾಗೊಂದು ತಪ್ಪೊಪ್ಪಿಗೆಯನ್ನು ನಿಮ್ಮಗಳ ಮುಂದೆ ಇಡಲೇಬೇಕಾಗಿ ಬಂದಿದೆ. ಎರಡು ಕಾರಣಕ್ಕಾಗಿ. ಮೊದಲನೆಯದಾಗಿ, ಮತ್ತೆ ಎಲ್ಲೊ ಒಂದು ಕಡೆ ಕೊಳೆಗೇರಿ ನಿರ್ಮಲನೆಯ ಕಾರ್ಯವನ್ನು ಮರೆತು ನನ್ನಷ್ಟಕ್ಕೆ ನಾನು ನನ್ನ ಕೆಲಸ, `ಸಖಿ' ನಿರ್ವಹಣೆಯಲ್ಲಿ ಮುಳುಗಿ ಹೋಗಿದ್ದೆ. ಕೆಲಸದ ಭರ, ಒತ್ತಡದಲ್ಲಿ ನಾನೇ ಕೈಗೆತ್ತಿಕೊಂಡಿದ್ದ ಮತ್ತು ಮೇಲಿಂದ ಮೇಲೆ ನೀವು ಹಕ್ಕೊತ್ತಾಯದಲ್ಲಿ ಮಂಡಿಸಿದ್ದ ಕೊಳೆಗೇರಿ ನಿರ್ಮೂಲನೆಯ ಈ ಆಂದೋಲನ ಅರ್ಧಕ್ಕೆ ನಿಂತು ಹೋಗಿತ್ತು. ಹಾಗಂತ ಅದನ್ನು ಮರೆತಿದ್ದೆ ಎಂದಲ್ಲ.

ಇಲ್ಲಿ ಕಾರಣಗಳು ಹಲವು. ಮೊದಲ ಆದ್ಯತೆ ನಿಮ್ಮೆಲ್ಲರ ನಿರೀಕ್ಷೆಯಂತೆ ಬರವಣಿಗೆಯನ್ನು ಮತ್ತೆ ಪ್ರಾರಂಭಿಸುವುದಾಗಿತ್ತು. ಮುಖ್ಯವಾಹಿನಿಯಲ್ಲಿನ ಬರಹ, ನೀರಿನ ಕುರಿತಾದ ಕೆಲಸಗಳನ್ನು ಪುನರಾರಂಭಿಸಲೇಬೇಕೆಂಬ ಒತ್ತಾಸೆಯೊಂದಿಗೆ ಉಳಿದೆಲ್ಲವನ್ನೂ ಬದಿಗೊತ್ತಿ ಲೇಖನಿಯನ್ನು ಹಿಡಿದಿದ್ದೆ. ಮೊದಲು ಈ ಕರ್ತವ್ಯ. ಜತೆಗೆ ಅನಿರೀಕ್ಷಿತವಾಗಿ ಜತೆಗೂಡಿದ ಸಖಿ. ಕನ್ನಡಕ್ಕೆ ಉತ್ತಮ ನಿಯತಕಾಲಿಕೆಯೊಂದನ್ನು ಕೊಡಲೇಬೇಕೆಂಬ ವ್ರತವನ್ನು ಸ್ವೀಕರಿಸಿ ಅದರಲ್ಲಿ ಮುಳುಗಿ ಹೋಗಿದ್ದೆ.

ನನಗೆ ಗೊತ್ತು, ಕೆಲಸವಿಲ್ಲದೇ ಮೂರು ತಿಂಗಳು ಮನೆಯಲ್ಲಿ ಕುಳಿತಿದ್ದಾಗ ನನ್ನನ್ನು ಸ್ಥಿತಪ್ರಜ್ಞ ರೀತಿಯಲ್ಲಿ ಇಟ್ಟದ್ದು ನಿಮ್ಮ ಬೆಂಬಲವೇ. ಜತೆಗೆ ಕೊಳೆಗೇರೆಯಂಥವನ ವಿರುದ್ಧ ಹೋರಾಟಕ್ಕೆ ನೈತಿಕ ಸ್ಥೈರ್ಯ ನೀಡಿದ್ದೂ ನೀವೇ. ಹೀಗಾಗಿ ನಿಮ್ಮ ಅಣತಿಯನ್ನು ಮೀರುವಂತೆಯೇ ಇಲ್ಲ. ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಮೇಯವೂ ಇಲ್ಲ.

ಕೆಲವು ಸತ್ಯ ಜಗತ್ತಿಗೆ ಗೊತ್ತಾಗಲೇಬೇಕು. ಅದನ್ನು ಎಲ್ಲಿಯವರೆಗೆ ಮುಚ್ಚಿಟ್ಟುಕೊಳ್ಳಲು ಸಾಧ್ಯ ? ಅಂಥ ಸತ್ಯವನ್ನು ಸಾರುವ ಕೆಲಸವನ್ನು ಮಾಡುವವರು ಯಾರು? ಎಲ್ಲರೂ `ಹಾಳಾಗಿ ಹೋಗಲಿ, ಅವನ ಕರ್ಮ, ಅವನು ಅನುಭವಿಸುತ್ತಾನೆ' ಎಂಬರ್ಥದಲ್ಲಿ ಸುಮ್ಮನಿದ್ದುಬಿಟ್ಟರೆ ಬೆಕ್ಕಿಗೆ ಗಂಟೆ ಕಟ್ಟುವವರು...ಅಲ್ಲಲ್ಲ ನರಿಗೆ ಬುದ್ಧಿ ಕಲಿಸುವವರಾದರೂ ಯಾರು ? ಜನರ ಮುಂದೆ ವಾಸ್ತವವನ್ನು ಬಿಚ್ಚಿಡಬೇಕು. ನಮ್ಮ ನಡುವಿನ ಸೋಗುಗಾರರ ಅಸಲೀ ವಿಕೃತಿಯನ್ನು ಸಾರಬೇಕು. ತನ್ಮೂಲಕ ಈ ಸಮಾಜ ಎಚ್ಚೆತ್ತುಕೊಳ್ಳುಬೇಕು. ತಾನು ಹೇಳಿದ್ದೇ ಸತ್ಯವೆಂದು ನಂಬಿಸಿ, ಮನಸ್ಸಿಗೆ ಬಂದ್ದದ್ದನ್ನು ಬರೆದು ಅಕ್ಷರ ಹಾದರ ಮಾಡುತ್ತಾ, ಅದನ್ನೇ ಸಾಧನೆಯೆಂದು ಬಿಂಬಿಸಿಕೊಳ್ಳುತ್ತಾ ವ್ಯಾಪಾರಕ್ಕಿಳಿದಿರುವ `ದೈತ್ಯ ಬರಹಗಾರ'ರನ್ನು ತಿರಸ್ಕರಿಸುವಂತಾಗಬೇಕು. ಕನ್ನಡ ಓದುಗರು ಸದಭಿರುಚಿಯುಳ್ಳವರು, ಕ್ರಿಯಾಶೀಲ, ರಚನಾತ್ಮಕವಾದುದಷ್ಟೇ ಓದುತ್ತಾರೆ ಎಂಬ ಸಂದೇಶ ಇಂಥ ಟ್ಯಾಬ್ಲಾಯ್ಡ್ ಪತ್ರಕರ್ತರಿಗೆ ತಲುಪಲೇಬೇಕು. ಅದಕ್ಕಾಗಿ ನನ್ನ ಆಂದೋಲನ.

ಅವನು ಅಸಹಾಯಕತೆಯ ಪರೋಚ್ಚ ಸ್ಥಿತಿಯನ್ನು ತಲುಪಿದ್ದಾನೆ. ಕೈಲಾಗದವನು ಮೈ ಪರಚಿಕೊಂಡ ಎಂಬಂತೆ ನನ್ನ ಹೆಂಡತಿ, ಹತ್ತು ವರ್ಷದ ಮಗಳ ಬಗ್ಗೆಯೆಲ್ಲಾ ಅಶ್ಲೀಲ ಸಂದೇಶಗಳನ್ನು ರವಾನಿಸುತ್ತಿದ್ದಾನೆ. ನಿಮ್ಮ ಬೆಂಬಲ ಇರುವವರೆಗೆ ಇಂಥದಕ್ಕೆಲ್ಲಾ ಬಗ್ಗುವವನು ನಾನಲ್ಲ. ಅವನ ವಿಕೃತಿಯ ಪರಾಕಾಷ್ಠೆಯ ಬಗ್ಗೆ ಪೋಲಿಸರಿಗೆ ದೂರಿದ್ದೇನೆ. ಸಮರ ಮುಂದುವರಿಯಲಿದೆ.

ಅದೆಲ್ಲಾ ಇರಲಿ, ಅವನ ವಿಚಾರ ಬದಿಗಿಟ್ಟು ಸದ್ಯಕ್ಕೆ ನಿಮಗೆ ನಾನು ಮಾಡುವ ಮನವಿ ಇಷ್ಟೇ, ನೀವು ಸಖಿಯನ್ನು ಓದಲೇಬೇಕು; ಹಾಗೂ ಓದುತ್ತಲೇ ಇರಬೇಕು.


4 comments:

 1. ಸರ್,
  ನೀವು ಹೊಲಸುಗೆರೆಯ ಕುತಂತ್ರಗಳಿಗೆ ಖಂಡಿತ ಕಾನೂನು ಕ್ರಮ ತೆಗೆದುಕೊಳ್ಳಿ. ಹಾಗೆ ಸತ್ಯ ಖಂಡಿತ ಹೊರಬರಲಿ.

  ReplyDelete
 2. ಕೊಳೆತೊಳೆವ ಕೆಲಸ ಯಾರಾದರೂ ಮಾಡಬೇಕಲ್ಲವೇ?

  ReplyDelete
 3. Kolegeriyalli holasu iddidde......., adannu nirmoolana maduvudu mukhya......
  satyakke sadaa bembalavide.....

  ReplyDelete
 4. ಕೊಳೆ ತೊಳೆಯುವ ಕೆಲಸಕ್ಕೆ ನನ್ನ ಮತ್ತು ಓದುಗರ ಬೆಂಬಲವಿದೆ ಸಾರ್, ಸಖಿಯನ್ನು ತಪ್ಪದೇ ಮರೆತೂ ಕೂಡ ಮರೆಯದೇ ಮಗ್ಗುಲಲ್ಲೇ ಇಟ್ಟುಕೊಂಡು ಸಾದಾ ಕಣ್ಣಾಡಿಸುತ್ತೇನೆ ಸಾರ್

  ReplyDelete