About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Tuesday, June 14, 2011

ಪಾಪಿಯ ಲೋಕದಿಂದ ಪಾರಾದಳು ಸುಪ್ರಿಯಾ

ಅಪ್ಪನಂತೆನ್ನುತ್ತಲೇ ಅಪ್ಪಿಕೊಳ್ಳಹೋದ (ನಿವೇದಿತಾ)

ಮೂಲೆಯೊಂದರಲ್ಲಿ ಕುಳಿತು ಬಿಕ್ಕಳಿಸಿ ಅಳುತ್ತಿದ್ದಾಳೆ ಅವಳು. ಮನೆಗೆ ಬಂದ ಆತ ಬಾಚಿ ತಬ್ಬಿಕೊಂಡು ರಮಿಸಲು ಪ್ರಯತ್ನಿಸುತ್ತಾನೆ. ಆದರೆ ಅವಳು "ಮೊದಲು ಇಲ್ಲಿಂದ ಹೊರಡೋಣ. ಒಂದು ಕ್ಷಣವೂ ಇಲ್ಲಿ ಇರೋದು ಬೇಡ' ಎಂದು ಖಡಾ ಖಂಡಿತವಾಗಿ ಹೇಳುತ್ತಾಳೆ.



"ಬುದ್ಧಿ ಕೆಟ್ಟಿದೆಯಾ ನಿನಗೆ? ನಾವು ಇಲ್ಲಿಂದ ಹೋದರೆ ರಕ್ಷಣೆ ಸಿಗುತ್ತಾ?'
ಅವನ ಪ್ರಶ್ನೆ. "ಏನಾದರು ಆಗಲಿ. ಆದರೆ ಇಲ್ಲಿ ನಾನು ಒಂದು ಕ್ಷಣವೂ ಇರುವುದಿಲ್ಲ, ಮೊದಲು ನನ್ನ ಫೋನ್ ನಂಬರ್ ಬದಲಾಯಿಸಿ ಬೇರೆ ಎಲ್ಲಿಗಾದರೂ ಹೋಗೋಣ...' ಆಕೆಯದ್ದು ಒಂದೇ ವರಾತ.
"ಹಾಗಾದರೆ ನೀನು ನನ್ನನ್ನು ಪ್ರೀತಿಸಿದ್ದು ಸುಳ್ಳಾ?' ಹಾಗಂತ ಅವನು ಕೇಳಿದ್ದೇ ತಡ, ಕೆಂಡಾಮಂಡಲವಾದ ಆಕೆ ಕೆನ್ನೆಗೆ ಬಾರಿಸಿಯೇಬಿಟ್ಟಳು! ತಾನು ಮಾಡಿದ ತಪ್ಪೇನು ಎಂಬುದು ಅರಿವಾಗದೆ ಉರಿಯುತ್ತಿರುವ ಕೆನ್ನೆಯನ್ನು ಸವರಿಕೊಳ್ಳುತ್ತಾ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದಾನೆ ಆತ. ಮುಖ ಎತ್ತಿ ನೋಡಿದ ಅವಳಿಗೆ ಪಶ್ಚಾತ್ತಾಪ ಕಾಡಿ ಓಡಿ ಬಂದು ಅವನನ್ನು ತಬ್ಬಿಕೊಂಡು ಒಂದೇ ಸಮನೆ ಅಳತೊಡುಗುತ್ತಾಳೆ. ಅವಳ ಕಣ್ಣೀರು ಧಾರೆಯಾಗಿ ಅವನ ಅಂಗಿಯ ತೋಳನ್ನು ತೋಯಿಸುತ್ತಿದ್ದರೆ ಆತ ಏನೂ ಅರ್ಥವಾಗದೆ ಸುಮ್ಮನೆ ನೋಡುತ್ತಿದ್ದಾನೆ...
ಇದು ಯಾವುದೋ ಸಿನಿಮಾ ಸನ್ನಿವೇಶವಲ್ಲ. ನಿಜವಾಗಲೂ ನಡೆದ ಒಂದು ಘಟನೆ; ಅದೂ ಉದ್ಯಾನ ನಗರಿಯ ನಡುವೆಯೇ! ಸತ್ಯ ಕಥೆಯ ಪೂರ್ಣ ವಿವರ
ಅರಿವಾಗಬೇಕಾದರೆ ನೀವು ಎರಡು ತಿಂಗಳ ಹಿಂದೆ ಹೋಗಬೇಕು...




***
ಅದು ಕರಾವಳಿ ತೀರದ ಮಂಗಳೂರಿಗೆ ಸಮೀಪದ ಪುತ್ತೂರು. ಅವಳ ಹೆಸರು ಸುಪ್ರಿಯಾ (ಹೆಸರು ಬದಲಿಸಿದೆ) ಮಣಿಪಾಲ್್ನಲ್ಲಿ ಎಂಬಿಎ ಓದುತ್ತಿದ್ದಾಳೆ. ಮನೆಯವರು ಆರ್ಥಿಕವಾಗಿ ಅಷ್ಟೇನೂ ಉತ್ತಮವಾಗಿಲ್ಲದಿದ್ದರೂ ಯಾವುದೇ ತೊಂದರೆಗಳಿಲ್ಲದ ಕುಟುಂಬ. ಒಬ್ಬಳೆ ಮಗಳಾದ ಕಾರಣ ಪ್ರೀತಿಯಿಂದ ಬೆಳೆಸಿದ್ದಾರೆ. ಅಲ್ಲಿಂದ ಕೂಗಳತೆಯ ದೂರದಲ್ಲಿದೆ ಸೋಮನತಡಕ ಎಂಬ ಕುಗ್ರಾಮ. ಅಲ್ಲಿಂದ ಮಣಿಪಾಲ್ ಗೆ ಓದಲು ಬರುತ್ತಿದ್ದವನ ಹೆಸರು ವಿನಯಚಂದ್ರ.
ಅವನೂ ಮಧ್ಯಮವರ್ಗದ ಕುಟುಂಬದವನೆ. ಆದರೆ ಪ್ರೀತಿಗೆ ಆರ್ಥಿಕ ಮಟ್ಟದ ಅಗತ್ಯವೇನಿದೆ ಹೇಳಿ ? ವಿನಯಚಂದ್ರ ಮತ್ತು ಸುಪ್ರಿಯಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದ ಕಾರಣವೋ, ಒಂದೇ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರಣವೋ ಒಟ್ಟಿನಲ್ಲಿ ಇವರಿಬ್ಬರ ನಡುವೆ ಪ್ರೀತಿ ಅಂಕುರಿಸಿತು.
ಓದುವ ದಿನಗಳಲ್ಲಿ ಪ್ರೀತಿ ಎಂಬ ವಿಷಯ ಇವರಿಬ್ಬರಿಗೆ ಮಾತ್ರ ಸೀಮಿತವಾಗಿತ್ತು. ಓದು ಮುಗಿದು ಸುಪ್ರಿಯಾ ಮನೆಯಲ್ಲಿ ಹುಡುಗನ ಹುಡುಕಾಟ ಆರಂಭವಾದ ಕೂಡಲೇ ಪ್ರೇಮಿಗಳ ವಿರಹ ವೇದನೆ ಮುಗಿಲು ಮುಟ್ಟಿತು. ಇನ್ನು ಅಗಲಿರಲು ತಮ್ಮಿಂದ ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಇವರ ಪ್ರೀತಿ ಮುಟ್ಟಿತ್ತು. ಮನೆಯಲ್ಲಿ ತಿಳಿಯದ ಹಾಗೆ ಇವರು ಭೇಟಿಯಾಗುತ್ತಿದ್ದರು. ಆದರೆ ಅದೊಂದು ದಿನ ವಿಷಯ ಸುಪ್ರಿಯಾ ಮನೆಗೆ ತಿಳಿಯಿತು.
ವಿದ್ಯಾವಂತ ಹುಡುಗ ವಿನಯಚಂದ್ರನಿಗೆ ಮದುವೆ ಮಾಡಲು ಜಾತಿಯು ಅಡ್ಡಿಯಾಗಿತ್ತು. ಹಾಗಾಗಿ ಎರಡೂ ಕುಟುಂಬಗಳಿಂದ ಇವರ ಪ್ರೀತಿಗೆ ವಿರೋಧ ವ್ಯಕ್ತವಾಯಿತು. ಇದೇ ಕಾರಣಕ್ಕೆ ಅವರು ಮನೆಯವರಿಂದ ದೂರವಾಗಿ ಮದುವೆಯಾಗಲು ನಿರ್ಧರಿಸಿ ಹೇಳದೆ ಕೇಳದೆ ಮನೆಯಿಂದ ಬೆಂಗಳೂರಿಗೆ ಓಡಿ ಬಂದರು.
ಅದು ಗೋಮುಖ ವ್ಯಾಘ್ರ
ಅದುವರೆಗೆ ಬೆಂಗಳೂರು ಮುಖ ನೋಡದ ಅವರು ಹೋಗುವುದಾದರು ಎಲ್ಲಿಗೆ ? ಏನು ಮಾಡುವುದು ಎಂಬ ಆತಂಕ ಇಬ್ಬರನ್ನೂ ಕಾಡತೊಡಗಿತು. ಅದೇ ಸಮಯಕ್ಕೆ ಅವರಿಗೆ ನೆನಪಾಗಿದ್ದು ಪತ್ರಕರ್ತ ಸೂರ್ಯ ಬಿಳಿಗಿರಿ!
ಪರಮಹಂಸರ ಖಾಸಾ ಸಹೋದರ, ಮದರ್ ಥೆರೇಸಾರ ಮೊಮ್ಮಗ ಎಂಬಿತ್ಯಾದಿ ಬಿರುದುಗಳೊಂದಿಗೆ ಬಿಂಬಿಸಿಕೊಂಡ, ಪೀತ ಪತ್ರಿಕೋದ್ಯಮದ ಅಷ್ಟೂ ಪಟ್ಟುಗಳನ್ನು ಕರಗತ ಮಾಡಿಕೊಂಡ ಬಿಳಿಗಿರಿ ಬರೆಯುವುದೆಲ್ಲಾ ಪರರಿಗಾಗಿ, ತಾನು ಮಾಡುವುದೆಲ್ಲಾ ಬರೆಯಬಾರದು ಎಂಬ ಕಠಿಣ ಸಿದ್ಧಾಂತವನ್ನು ತಪ್ಪದೆ ಪಾಲಿಸುವವ ಎಂಬ ಸತ್ಯ, ಈ ಜೋಡಿ ಸೇರಿದಂತೆ ಅವನ ಬರಹ ಓದುವ ಹಲವಾರು ಜನರಿಗೆ ಗೊತ್ತಿರಲಿಲ್ಲ. ಹಾಗಾಗಿಯೆ
ಅವರು ನೇರವಾಗಿ ಹೋಗಿ ಬಿಳಿಗಿರಿಯನ್ನು ಭೇಟಿಯಾಗಲು ತೀರ್ಮಾನಿಸಿದರು.
ಪ್ರೀತಿಸಿ ಹಿರಿಯರ ವಿರೋಧ ಎದುರಿಸಲಾರದೆ ಓಡಿ ಬಂದ ಅವರಿಬ್ಬರ ಮಾತುಗಳನ್ನು ತುಂಬಾ ಕುತೂಹಲ ದಿಂದ ಕೇಳಿದ ಬಿಳಿಗಿರಿ, ತನ್ನ ಕಚೇರಿಗೆ ಸಮೀಪದ ಒಂದು ಪುಟ್ಟ ಮನೆಯಲ್ಲಿ
ಅವರಿಬ್ಬರನ್ನು ಉಳಿಯಲು ಏರ್ಪಾಟು ಮಾಡಿದ. "ಆರ್ಥಿಕವಾಗಿ ನೀವು ಸಬಲರಾಗಬೇಕು, ನಿಮ್ಮ ದುಡಿಮೆಯಲ್ಲಿ ನೀವು ಬದುಕುವ ಆರ್ಥಿಕ ಸ್ಥಿರತೆ ಬಂದು, ನಿಮ್ಮ ಕಾಲ ಮೇಲೆ ನೀವು ನಿಲ್ಲುವ ನಂಬಿಕೆ ಬಂದ ಕೂಡಲೇ ನಾನೇ ಮುಂದೆ ನಿಂತು ನಿಮ್ಮಿಬ್ಬರ ಮದುವೆ ಮಾಡಿಸುತ್ತೇನೆ ಮಗಳೆ' ಎಂದು ತಲೆ ಸವರುತ್ತಾ ಅವನು ಹೇಳುತ್ತಿದ್ದರೆ ಸುಪ್ರಿಯಾ ಕಣ್ಣಲ್ಲಿ ನೀರು ಜಾರುತ್ತಿತ್ತು. ಹೆತ್ತ ತಂದೆಗಿಂತ ಹೆಚ್ಚಿನ ಮುತುವರ್ಜಿವಹಿಸಿ ತಮ್ಮ ಮದುವೆ ಮಾಡಲು ಇಷ್ಟೆಲ್ಲಾ ತೊಂದರೆ ತೆಗೆದುಕೊಳ್ಳುತ್ತಿರುವ "ಬಿಳಿಗಿರಿ ಸರ್' ಬಗ್ಗೆ ಅವರಿಬ್ಬರಿಗೆ ಎಲ್ಲಿಲ್ಲದ ಗೌರವ ಉಕ್ಕಿ ಬಂತು.
ಅವರು ಓಡಿ ಬಂದು ಎರಡು ದಿನ, ಬಿಳಿಗಿರಿ ಬಳಿ ಬಂದು ಒಂದು ದಿನ ಕಳೆದಿತ್ತು. ಮಾರನೆ ದಿನ ಸಂಜೆ ಅವರಿಬ್ಬರೂ ಇದ್ದ ಶೀಟ್ ಮನೆ ಬಾಗಿಲಲ್ಲಿ ಬಿಳಿಗಿರಿ ಸರ್ ಪ್ರತ್ಯಕ್ಷ! ತಾವಿರುವ ಮನೆಗೆ
ಅವರೇ ಸ್ವತಃಬಂದಿರುವುದು ಕಂಡು ಆ ಯುವ ಜೋಡಿಗೆ ಅಚ್ಚರಿಯಾಯಿತು. ತಾವು, ತಮ್ಮಂತಹ ಅದೆಷ್ಟೋ ಯುವ ಜೋಡಿಗಳಿಗೆ ಮಾರ್ಗದರ್ಶಕರಾಗಿ, ಒಬ್ಬ ಅನಾಮಿಕರನ್ನೂ ತಮ್ಮ ಮಕ್ಕಳಂತೆ ಮುತುವರ್ಜಿಯಿಂದ ನೋಡಿಕೊಳ್ಳುವ ಬಿಳಿಗಿರಿ ಸರ್ ಬಗ್ಗೆ ಆ ಎರಡೂ ಯುವ ಹೃದಯಗಳಲ್ಲಿ ಎಲ್ಲಿಲ್ಲದ ಗೌರವ ಮೂಡಿಬಂತು.
ಮನೆಯಿಂದ ಅವರಿಬ್ಬರನ್ನೂ ಕಚೇರಿಗೆ ಕರೆತಂದ ಬಿಳಿಗಿರಿ, ಎದುರಿಗೆ ಕೂರಿಸಿಕೊಂಡು ತನ್ನ ಪತ್ರಿಕೋದ್ಯಮದ ಸಾಧನೆಯ ಬಗ್ಗೆ ದೀರ್ಘ ಉಪನ್ಯಾಸ ನೀಡಿದ. ನಂತರ "ಇನ್ನು ನೀವು ಹೊರಡಿ, ಎರಡು ಮೂರು ದಿನದಲ್ಲಿ ಒಂದು ಕೆಲಸ ಹುಡುಕುತ್ತೇನೆ. ಇಬ್ಬರೂ ದುಡಿಯಲಿಲ್ಲ ಅಂದರೆ ಬೆಂಗಳೂರಿನಲ್ಲಿ ಬದುಕುವುದು ತುಂಬಾ ಕಷ್ಟ' ಎಂದ ಬಿಳಿಗಿರಿ "ಈಗಲೇ ಬೆಂಗಳೂರಿನಲ್ಲಿ ಓಡಾಡಿ, ಪರಿಚಯಿಸಿಕೊಳ್ಳಿ' ಎಂದು ತನ್ನ ಜೇಬಿನಿಂದ ಐನೂರರ ನೋಟನ್ನು ತೆಗೆದು ಕೊಟ್ಟ. ಅವರು ಹೊರಡುತ್ತಿದ್ದ ಸಮಯದಲ್ಲಿ "ಎಲ್ಲಿ ನಿನ್ನ ಫೋನ್ ನಂಬರ್ ಕೊಡಮ್ಮ ಸುಪ್ರಿಯಾ, ಯಾವಾಗಾದರೂ ಅವನ ಫೋನ್ ಸಿಗಲಿಲ್ಲ ಎಂದರೆ ನಿನ್ನ ಕಾಂಟ್ಯಾಕ್ಟ್ ಮಾಡಬಹುದು' ಎಂದು ಅವಳ ಫೋನ್ ನಂಬರ್ ಪಡೆದು ಒಂದು ಮಿಸ್ಡ್ ಕಾಲ್ ಕೊಟ್ಟ. ಅವರಿಬ್ಬರಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಗಿತ್ತು. ಆದರೆ ಆಗಲೇ ಅವರಿಬ್ಬರ ಗೃಹಗತಿಯಲ್ಲಿ ಸಾಡೇ ಸಾತಿ ಪ್ರವೇಶವಾಗಿದೆ ಎಂದು ಅರಿವಾಗಲು ಅವರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ.
ಹುಡುಗಿ ಸುಪ್ರಿಯಾಳ ಫೋನ್ ನಂಬರ್ ಪಡೆದ ಬಿಳಿಗಿರಿ ಅಂದಿನ ತಡ ರಾತ್ರಿಯೇ ಎಸ್ ಎಂಎಸ್ ಶುರು ಮಾಡಿದ. ಏನೋ ತಂದೆಯಂಥವರು ಎಂದು ಅವಳು ಸುಮ್ಮನಿದ್ದಳು. ಎರಡು ದಿನ ಕಳೆಯುವುದರಲ್ಲಿ ವಿನಯಚಂದ್ರನಿಗೆ ಯಾವುದೋ ಒಂದು ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ದೊರೆಯಿತು. ಕೆಲಸ ದೊರೆತ ದಿನದಿಂದ ಆತನಿಗೆ ರಾತ್ರಿ ಪಾಳಿಯಲ್ಲಿ ಕೆಲಸ. ಇಡೀ ರಾತ್ರಿ ದುಡಿಯುವ ಆತ ಹಗಲಿಡೀ ನಿದ್ದೆಗೆ ಜಾರುತ್ತಿದ್ದ. ರಾತ್ರಿ ಸಮಯದಲ್ಲಿ ಮನೆಯಲ್ಲಿ ಒಬ್ಬಳೇ ಇರುತ್ತಿದ್ದ ಸುಪ್ರಿಯಾ ಫೋನ್್ಗೆ ಇತ್ತ ಬಿಳಿಗಿರಿ ಅಸಹ್ಯ ಸಂದೇಶಗಳ ರವಾನೆ ಆರಂಭವಾಯಿತು. ಮನುಷ್ಯರಾದವರು ಓದಲು ಅಸಹ್ಯ ಪಡುವ ರೀತಿಯ ಸಂದೇಶಗಳನ್ನು ನೋಡಿದ ಸುಪ್ರಿಯಾ ಒಂದು ದಿನ ವಿನಯಚಂದ್ರನಿಗೆ ತೋರಿಸಿದಳು "ಅವೆಲ್ಲಾ ಈಗಿನ ಕಾಲದಲ್ಲಿ ಮಾಮೂಲಿ. ಅದೇನು ಮಹಾ ಅಪರಾಧ ಎಂದು ಹೇಳುತ್ತೀಯ ಸುಮ್ನಿರು. ಅವರು ನಮಗಾಗಿ ಎಷ್ಟೆಲ್ಲಾ ಕಷ್ಟ ಪಟ್ಟಿದ್ದಾರೆ. ಹೀಗೆಲ್ಲಾ ಅಪಾರ್ಥ ಮಾಡಿಕೋಬೇಡ' ಎಂದು ಅವಳನ್ನೇ ಗದರಿಸಿದ. ಇದರಿಂದ ಅವಳು ಇನ್ನಷ್ಟು ಖಿನ್ನಳಾಗತೊಡಗಿದಳು.
ಒಂದು ದಿನ ಅವಳೇ ನೇರವಾಗಿ ಕೇಳಿದಳು "ನನಗೆ ಬೇಗ ಒಂದು ಕೆಲಸ ನೋಡಿ ಸಾರ್, ಇಬ್ಬರೂ ದುಡಿದು ಬೇಗ ಮದುವೆ ಆಗ್ತೀವಿ' ಎನ್ನುತ್ತಲೇ ಬಾಲ ತುಳಿದ ನಾಗರ ಹಾವಿನಂತಾದ ಬಿಳಿಗಿರಿ! "ಏನಮ್ಮ ವಿರಹ ಭರಿಸಲಾಗುತ್ತಿಲ್ಲವೆ? ಅಷ್ಟು ಆತುರ ಪಡ್ತಿದ್ದೀಯ. ಅಷ್ಟು ಬೇಕು ಅನ್ನೋದಾದರೆ ನಾನಿದ್ದೀನಿ ಹೇಳು. ಯಾವ ಸಮಯದಲ್ಲಿ ಬೇಕಾದರೂ ನನ್ನ ಫೋನ್ ಆನ್್ನಲ್ಲೇ ಇರುತ್ತೆ. ಒಂದು ಮಿಸ್ಡ್್ಕಾಲ್ ಕೊಡು ನೇರವಾಗಿ ನಿನ್ನ ತೋಳಿನಲ್ಲಿ ಬಂದು ಇಳೀತೀನಿ. ಹೇಗೂ ಅವನಿಗೆ ನೈಟ್ ಶಿಫ್ಟ್ ಅಲ್ಲವಾ, ಒಬ್ಬಳೇ ಬೇಜಾರು ಅನ್ನೋದಾದರೆ ನಾನು ಕಂಪನಿ ಕೊಡ್ತೀನಿ ಹೆದರಬೇಡ. ಇನ್ನೂ ನೀವು ಒಬ್ಬರನ್ನೊಬ್ಬರು ಪೂರ್ತಿ ಅರ್ಥ ಮಾಡಿಕೋಬೇಕು' ಎಂದು ತನ್ನ ಪುಂಗಿ ಊದುತ್ತಿರುವಾಗಲೇ ಅವಳ ಕಣ್ಣು ತುಂಬಿ ಬಂದಿತ್ತು. ಪೂರ್ತಿ ಕೇಳಿಸಿಕೊಳ್ಳುವ ಗೋಜಿಗೆ ಹೋಗದೆ ಎದ್ದು ನೇರವಾಗಿ ಮನೆಗೆ ಬಂದು ಗೊಳೋ ಎಂದು ಅತ್ತಿದ್ದಳು. ಹಾಗೆ ಅವಳು ಅಳುತ್ತಿರುವಾಗಲೇ ಮತ್ತೆ ಬಿಳಿಗಿರಿಯಿಂದ ಫೋನ್ ಬಂದಿತ್ತು. ಆದರೆ ಅವಳು ತೆಗೆಯುವ ಸಾಹಸ ಮಾಡಲಿಲ್ಲ. ಫೋನ್ ಒಂದೇ ಸಮನೆ ಹೊಡೆದುಕೊಳ್ಳುವುದು ನೋಡಿ ಕೊನೆಗೆ ತೆಗೆದಳು. "ಬೇಜಾರಾಯಿತಾ ಮಗಳೆ, ನಿಮ್ಮಿಬ್ಬರ ಪ್ರೀತಿ ಎಷ್ಟು ಗಾಢವಾಗಿದೆ ಎಂದು ಪರೀಕ್ಷೆ ಮಾಡಲು ಹಾಗೆ ಮಾತಾಡಿದೆ ಬೇಜಾರಾಗ್ಬೇಡ' ಎಂದ.
ಇವನ ನಡತೆ ಮತ್ತು ಅಂದು ನಡೆದ ವಿಚಾರದ ಬಗ್ಗೆ ವಿನಯಚಂದ್ರನಿಗೆ ಹೇಳುವುದಾ ? ಬೇಡವಾ? ಸಂದಿಗ್ಧತೆಯಲ್ಲಿ ತೊಳಲಾಡಿದಳು ಸುಪ್ರಿಯಾ. ಒಂದು ವೇಳೆ ತನ್ನನ್ನು ಪರೀಕ್ಷೆ ಮಾಡಲೇ ಹಾಗೆ ವರ್ತಿಸಿರಬಹುದು. ಬಿಳಿಗಿರಿ ಸರ್್ರನ್ನು ತಾನೇ ಅನವಶ್ಯಕ ಅಪಾರ್ಥ ಮಾಡಿಕೊಂಡೆ ಎಂದು ತನಗೆ ತಾನೆ ಸಮಾಧಾನ ಪಡಿಸಿಕೊಂಡು ಸುಮ್ಮನಾದಳು.
ಈ ಘಟನೆ ನಡೆದ ನಂತರ ಬಿಳಿಗಿರಿಯ ಮೇಲೆ ಒಂದು ರೀತಿಯ ನಿರುತ್ಸಾಹ ಭಾವನೆಯನ್ನು ಅವಳು ತಾಳಿದ್ದಳು. ಆದರೂ ಅದನ್ನು ಅವನೆದುರಿಗೆ ತೋರ್ಪಡಿಸುತ್ತಿರಲಿಲ್ಲ. ವಿನಯಚಂದ್ರ ಇಲ್ಲದ ಸಮಯದಲ್ಲಿ ಬಿಳಿಗಿರಿಯ ಫೋನ್ ತೆಗೆಯುವುದು ಕಡಿಮೆ ಮಾಡಿದಳು. ರಾತ್ರಿ ಸಮಯದಲ್ಲಿ ಫೋನ್ ಆಫ್ ಮಾಡತೊಡಗಿದಳು. ಇವಳ ಈ ನಡವಳಿಕೆಗಳು ಬಿಳಿಗಿರಿಗೆ ಸಹಿಸಲಸಾಧ್ಯವಾಯಿತು.
ಇನ್ನೂ ವಿಚಿತ್ರ ನಡೆದದ್ದು ಆಗಲೇ. ಆಧುನಿಕ ತಾಂತ್ರಿಕತೆಯ ಗಂಧ ಗಾಳಿ ಗೊತ್ತಿಲ್ಲದ ಬಿಳಿಗಿರಿ, ಇಂದಿಗೂ ಬರೆಯುತ್ತಾನೆಯೇ ಹೊರತು ಕಂಪ್ಯೂಟರ್ ನಲ್ಲಿ ಟೈಪ್ ಮಾಡಲು ಬರುವುದಿಲ್ಲ. ಇಂತಹ ಬಿಳಿಗಿರಿ ಸಿಕ್ಕಿಹಾಕಿಕೊಂಡಿದ್ದು ಇದೇ ಕೈಬರಹದಲ್ಲಿ! ತನಗಿರುವ ಇಬ್ಬರು ಹೆಣ್ಣು ಮಕ್ಕಳಿಗಿಂತ ಕಿರಿಯವಳಾದ ಸುಪ್ರಿಯಾಳಿಗೆ, ಐವತೈದು ವರ್ಷದ ಬಿಳಿಗಿರಿ ಪ್ರೇಮ ಪತ್ರವೊಂದನ್ನು ಬರೆದೇ ಬಿಡುತ್ತಾನೆ! ಅದರಲ್ಲಿ "ನೀನಿಲ್ಲದೆ ನನ್ನ ಬದುಕೇ ಶೂನ್ಯ, ಮರುಭೂಮಿಯಂಥ ನನ್ನ ಹೃದಯದಲ್ಲಿ ಓಯಸಿಸ್್ನಂತೆ ನಿನ್ನ ಪ್ರವೇಶವಾಗಿದೆ ದಯವಿಟ್ಟು ನನ್ನ ಕೈ ಬಿಡದೆ ಒಪ್ಪಿಕೋ. ನಿನ್ನನ್ನು ಮಹಾರಾಣಿಯಂತೆ ನೋಡಿಕೊಳ್ಳುತ್ತೇನೆ' ಎಂದು ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾನೆ. ಅಲ್ಲಿಗೆ ಅವಳ ಸಹನೆಯ ಕಟ್ಟೆ ಒಡೆಯುತ್ತದೆ. ಗೋಮುಖ ವ್ಯಾಘ್ರನ ಅಸಲಿ ಮುಖ ಅರಿವಾಗುತ್ತದೆ. ಅಲ್ಲಿಯವರೆಗೆ "ಪ್ರೀತಿ ಪರೀಕ್ಷೆ' ಎನ್ನುತ್ತಿದ್ದ ಕಪಟ ಮಾತುಗಳು ಅವಳ ಅರಿವಿಗೆ ಬರುತ್ತವೆ. "ಮಗಳೆ' ಎಂದು ಬೊಗಳೆ ಬಿಡುತ್ತಿದ್ದವನ ನೀಚತನದ ಅರಿವಾಗುತ್ತೆ. ಇಂಥ ದುಃಖದ ಮಡುವಿನಲ್ಲಿ ಕುಳಿತಿದ್ದ ಸುಪ್ರಿಯಾ, ವಿನಯಚಂದ್ರ ಕೇಳಿದ ಪ್ರಶ್ನೆಗೆ ಕೆನ್ನೆಗೆ ಬಾರಿಸಿದ್ದು ಸಹಜವಿತ್ತು.
ಆಮೇಲೆ...?
ಕಾಮ ಪಿಪಾಸುವಿನ ಪ್ರೇಮ ಪತ್ರವನ್ನು ವಿನಯಚಂದ್ರನಿಗೆ ತೋರಿಸುತ್ತಾಳೆ ಆಕೆ. ಅವನಿಗೂ ಅರ್ಥವಾಗುತ್ತದೆ ತಾನೇಕೆ ರಾತ್ರಿಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಸತ್ಯ. ತಾವು ಇಲ್ಲಿಗೆ ಬಂದು ತಿಂಗಳು ಕಳೆಯುತ್ತಾ ಬಂದರೂ ಮದುವೆ ವಿಷಯ ಎತ್ತದ ಬಿಳಿಗಿರಿಯ ಅಸಲಿತನದ ಪರಿಚಯವಾಗಿ ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ. ಆದರೂ ತಾವಿರುವ ಪರಿಸ್ಥಿತಿಯ ಅರಿವಾಗಿ ತಮ್ಮ ಆರ್ಥಿಕ ಮಟ್ಟ ಸುದಾರಿಸುವವರೆಗೆ ತಡೆಯಲು ಹೇಳುತ್ತಾನೆ.
ಇದು ಅವಳಿಗೆ ಸಹಿಸಲಾಗುವುದಿಲ. ಅವನ ಮೇಲೆಯೇ ಅನುಮಾನ ಮೂಡಲಾರಂಭಿಸುತ್ತದೆ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಎದೆಗುಂದದ ಸುಪ್ರಿಯಾಗೆ ತಾಯಿಯ ನೆನಪಾಗಿ ಅವಳಿಗೆ ಫೋನ್ ಮಾಡುತ್ತಾಳೆ. ಮನೆ ಬಿಟ್ಟು ಬಂದಾಗಲಿಂದ ನಡೆದ ಎಲ್ಲಾ ವಿಚಾರಗಳ ಬಗ್ಗೆ ವಿವರಿಸುತ್ತಾಳೆ. ಎಲ್ಲವನ್ನೂ ಕೇಳಿದ ಮಾತೃ ಹೃದಯದಲ್ಲಿ ದುಃಖದ ಕಟ್ಟೆ ಒಡೆಯುತ್ತದೆ. ಪಾಪಿಯ ಕೂಪದಲ್ಲಿ ಮಗಳು ಅನುಭವಿಸಿದ ಪ್ರತ್ಯಕ್ಷ ನರಕದ ನೆನಪಾಗಿ, ತಾಯಿ ಕೂಡಲೇ ಕಾರ್ಯ ಪ್ರವೃತ್ತಳಾಗುತ್ತಾಳೆ.
ಕೂಡಲೆ ಗಂಡನ ಜೊತೆ ಚರ್ಚಿಸುತ್ತಾಳೆ. ವಿಷಯ ತಿಳಿದ ಸುಪ್ರಿಯಾ ತಂದೆ ಕೆಲ ಗ್ರಾಮಸ್ಥರ ಜೊತೆ ನೇರವಾಗಿ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಬೋಧನೆ ಕೇಳಿ, ಬಿಳಿಗಿರಿಯನ್ನು ಹಿಗ್ಗಾ ಮುಗ್ಗಾ ಥಳಿಸುತ್ತಾರೆ. ಇದ್ದ ಒಬ್ಬಳೇ ಮಗಳನ್ನು ಹಾದಿ ತಪ್ಪಿಸಿ ನರಕದ ಕೂಪಕ್ಕೆ ತಳ್ಳುವ ಪ್ರಯತ್ನ ಮಾಡಿದ ಎಂಬ ಕಾರಣಕ್ಕೆ ವಿನಯಚಂದ್ರನಿಗೂ ಗೂಸಾ ಬೀಳುತ್ತೆ.

ಕ್ಲೈಮ್ಯಾಕ್ಸ್...
ಬಿಳಿಗಿರಿ ಮಾಡಿದ ಎಲ್ಲಾ ಪಾಪದಲ್ಲೂ ವಿನಯಚಂದ್ರನ ಕೈವಾಡವಿದೆ ಎಂದು ಸುಪ್ರಿಯಾ ಕೂಡಾ ನಂಬುತ್ತಾಳೆ. ಸದ್ಯಕ್ಕೆ ಈ ಪಾಪಿಯಿಂದ ದೂರವಾದರೆ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದ ಸುಪ್ರಿಯಾ ತನ್ನ ಪ್ರೀತಿಯನ್ನು ಕೂಡಾ ಮರೆಯುತ್ತಾಳೆ. ವಿನಯಚಂದ್ರನನ್ನು ಬಿಟ್ಟು ತನ್ನ ತಂದೆಯ ಜೊತೆ ಊರಿಗೆ ಹೊರಡುತ್ತಾಳೆ. ತನ್ನ ತಪ್ಪೇ ಇಲ್ಲದೆ ಘಟಿಸಿದ ಬೆಳವಣಿಗೆಗಳ ಅರಿವಾಗದೆ ಚಿಂತಾಕ್ರಾಂತನಾಗುತ್ತಾನೆ ವಿನಯಚಂದ್ರ. ಸುಪ್ರಿಯಾ ಮನೆ ಬಿಟ್ಟ ಮಾರನೇ ದಿನವೇ ವಿನಯಚಂದ್ರನನ್ನು ಮನೆ ಖಾಲಿ ಮಾಡಿಸುತ್ತಾನೆ ಬಿಳಿಗಿರಿ. ಗೊತ್ತಿಲ್ಲದ ಊರಿನಲ್ಲಿ ನೆಲೆಯಿಲ್ಲದೆ ಪರದಾಡಲಾಗದೆ ಮತ್ತೆ ಊರು ಸೇರುತ್ತಾನೆ. ಸುಪ್ರಿಯಾಳನ್ನು ಪಡೆಯಲು ಮತ್ತೆ ಪ್ರಯತ್ನ ಮುಂದುವರೆಸುತ್ತಾನೆ. ಆದರೆ ಅವಳಿಗೆ ಮತ್ತು ಅವಳ ಕುಟುಂಬಕ್ಕೆ
ಅವನ ಮೇಲೆ ನಂಬಿಕೆಯಿಲ್ಲದೆ ಹೊರದಬ್ಬುತ್ತಾರೆ. ಅದೊಂದು ದಿನ ಸುಪ್ರಿಯಾಳಿಗೆ ಬೇರೊಬ್ಬನ ಜೊತೆ ಮದುವೆಯೂ ಆಗುತ್ತದೆ. ಪ್ರೀತಿಸಿದ ಹುಡುಗಿ ದೂರವಾದ ಗುಂಗಿನಲ್ಲಿ ವಿನಯಚಂದ್ರನಿಗೆ ಹುಚ್ಚು ಹಿಡಿದು ಮತ್ತೆ ಬೆಂಗಳೂರಿನ ನಿಮ್ಹಾನ್ಸ್ ಸೇರುತ್ತಾನೆ. ಪ್ರೇಮಿಗಳನ್ನು ದೂರ ಮಾಡಿದ ಪಾಪ ಹೊತ್ತ ಬಿಳಿಗಿರಿ ಮಾತ್ರ ಮತ್ತೊಂದು ಜೋಡಿ ತನ್ನನ್ನು ಹುಡುಕಿ ಬರುತ್ತದೆ, ಅವಳಿಗೆ ಗಾಳ ಹಾಕಬಹುದು ಎಂದು ಕಾಯುತ್ತಲೇ ಇದ್ದಾನೆ; ಯುವಕ ಯುವತಿಯರೆ ಹುಷಾರ್ !

3 comments:

  1. A must read article for youngsters who believe biligiri and his writings.

    ReplyDelete
  2. ಅಯ್ಯಪ್ಪ.. ಎಂತಾ ಜನ ಇರ್ತಾರೋ.. ಕಂಡವರ ಮನೆ ಮಕ್ಕಳು ಅಂದ್ರೆ ಇಷ್ಟು ಸಸಾರನಾ ಈ ಜನಕ್ಕೆ.. ಥೂ

    ReplyDelete