About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Tuesday, February 1, 2011

ಅರಿವಿನ ಹೆಜ್ಜೆಯಲ್ಲಿ...


ಪ್ರೀತಿಯ ಓದುಗರೇ,
ನನ್ನ ‘ಜಲರಾಶಿಯಲ್ಲೊಂದು ಬಿಂದು’ ಲೇಖನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಂಡಿತಾ ಅದನ್ನು ಬರೆಯಲು ಕೂರುವ ಮುನ್ನ, ಯಾರದ್ದೋ ಮಾತಿಗೆ ಉತ್ತರ ಕೊಡಬೇಕೆಂಬ ಉದ್ದೇಶ ಇತು. ಆದರೆ ಬರೆಯುತ್ತಾ ಹೋದಂತೆಲ್ಲ ಸಂಬಂಧಗಳ ಕುರಿತಾದ ವೈಯಕ್ತಿಕ ಚಿಂತನೆಗಳು ಅಲ್ಲಿ ಹರವಲಾರಂಬಿಸಿದವು. ಬರವಣಿಗೆಗೊಂದು ಗಾಂಭಿರ‍್ಯ ಸಿಕ್ಕಿತು. ನಿಜಕ್ಕೂ ನಿಮ್ಮ ಅಭಿಮಾನಕ್ಕೆ ನಾನು ಆಭಾರಿ.

ಒಂದೆರಡು ಮಂದಿ ದೂರವಾಣಿಯಲ್ಲಿ ಜಗಳಕ್ಕೇ(ಪ್ರೀತಿಯಿಂದ) ಬಿದ್ದಂತೆಯೇ ನನ್ನ ವಾದಕ್ಕೆ ಪ್ರತಿವಾದವನ್ನು ಮಂಡಿಸಿದರು. ಖುಷಿಯಾಯಿತು. ಬಹಳಷ್ಟು ಮಂದಿ ನನ್ನ ವಾದವನ್ನು ಪುಷ್ಟೀಕರಿಸಿದರು. ಇನ್ನು ಕೆಲವರು ಇಂಥ ಗಂಭೀರ ಶೈಲಿಯ ಬರವಣಿಗೆಗಳು ವ್ಯರ್ಥ. ಅದರಿಂದ ಏನೂ ಸಾಧನೆಯಾಗುವುದಿಲ್ಲ ಎಂದೂ ಹೇಳಿದ್ದಾರೆ. ಎಲ್ಲರ ಮಾತಿನ ಹಿಂದೆಯೂ ಇದ್ದದ್ದು ಒಂದು ಅಸೀಮ ಪ್ರೀತಿ. ಬರೀ ಒಂದು ಥ್ಯಾಂಕ್ಸ್‌ನಿಂದ ಈ ಋಣ ತೀರಿಸಲಾಗದು.

ಶ್ರೀ ಪ್ರಮೋದ್ , ಶ್ರೀ ಜಗದೀಶ್, ಶ್ರೀ ಮನೋಮೂರ್ತಿ ಸೇರಿದಂತೆ ಕೆಲವರು ಇಲ್ಲಿ ಒಂದು ದೃಷ್ಟಿಯಲ್ಲಿ ನಕಾರಾತ್ಮಕ ಭಾವನೆ ವ್ಯಕ್ತವಾಗಿದೆ ಎಂಬ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಯಾತ್ರಿಕ ಪ್ರಗತಿಯನ್ನು ಅಥವಾ ಯಾವುದೇ ಅಬೀವೃದ್ಧಿಯನ್ನು ನಿರಾಕರಿಸುವ ಉದ್ದೇಶ ಖಂಡಿತಾ ನನ್ನದಲ್ಲ. ಇದನ್ನು ದಯವಿಟ್ಟು ಅರ್ಥ ಮಾಡಿಕೊಳ್ಳಿ.

ಜಾಗತೀಕರಣದ ಈ ಸನ್ನಿವೇಶದಲ್ಲಿ ಸಂಬಂಧಗಳು ವೃಥಾಲಾಪಗಳಾಗಿವೆ. ವಸಾಹತುಶಾಹಿ ಚಿಂತನಾ ಕ್ರಮಗಳಲ್ಲಿನ ಜಡತೆ ಇಂದಿಗೂ ಭಾರತೀಯನನ್ನು ಆವರಿಸಿಕೊಂಡಿದೆ. ವಸಾಹತೋತ್ತರ ಭಾರತದ ಮೇಲೆ ಅಚ್ಚಳಿಯದೇ ಉಳಿದುಹೋದ ಪಾಶ್ಚಾತ್ಯ ಪರಂಪರೆಯ ಕಲೆಗಳು ನಮ್ಮ ಮನಸ್ಸುಗಳನ್ನು ದಿನದಿಂದ ದಿನಕ್ಕೆ ಕಂಗೆಡಿಸುತ್ತಿವೆ. ಈ ನೆಲದ ಭಾವನಾತ್ಮಕ ಆಕೃತಿಗಳು ಮನ್ನಣೆ ಕಳೆದುಕೊಂಡಿವೆ ಎನ್ನುವುದನ್ನು ಹೇಳಲು ಪ್ರಯತ್ನಿಸಿದ್ದೇನೆ.

ನಮ್ಮ ಜೀವನವೆಂಬುದು ಇಂದು ಅರಿವಿನಿಂದ ರೂಪಿತವಾಗುತ್ತಿಲ್ಲ. ಆನುಷಂಗಿಕವಾದ ಅಮುಖ್ಯ ಸಂಗತಿಗಳಿಗೆ ಒತ್ತು ನೀಡುತ್ತಿರುವ ಪರಿಣಾಮ ವೈಯಕ್ತಿಕ ಆಸಕ್ತಿಗಳು ಕರಗಿಹೋಗಿವೆ. ಆಸಕ್ತಿ ಹಾಗೂ ಅನಿವಾರ್ಯ ಇವೆರಡರ ನಡುವಿನ ಸಂಘರ್ಷದಿಂದಾಗಿ ಗೊಂದಲಮಯ ಜೀವನ ನಮ್ಮ ಪಾಲಿನದಾಗಿದೆ. ಪ್ರೀತಿಯಿಂದ ಪ್ರೇರಿತವಾದ ಸಂಬಂಧಗಳ ಮಾತು ಬೇರೆ. ಅದು ಮಹತ್ವಾಕಾಂಕ್ಷಿ ಬದುಕಿನ ಮಾದರಿ. ಜೀವನದ ಸಮಗ್ರ ತಿಳಿವಳಿಕೆಗೆ ಕಾರಣವಾಗುವ ಪ್ರೀತಿಯ ಅನುಪಸ್ಥಿತಿಯಲ್ಲಿ ಮನಸ್ಸು ನಿರ್ದಯವಾಗಿದೆ. ಇದು ಹಿಂಸೆಗೆ ಪ್ರೇರಣೆಯೊದಗಿಸಿದೆ.

ಕೈಗಾರಿಕೀಕರಣ ಹಾಗೂ ಯುದ್ಧಗಳಲ್ಲಿ ಯಶಸ್ಸು ಪಡೆಯುವುದೇ ರಾಷ್ಟ್ರ ವ್ಯವಸ್ಥೆಯ ಪರಮೋದ್ದೇಶವಾಗಿದೆ. ನಿರ್ದಯ ಸ್ಪರ್ಧೆ ಹಾಗೂ ಪರಸ್ಪರ ನಾಶಗಳ ವಿಷ ಚಕ್ರದಲ್ಲಿ ಮಾನವ ಬದುಕು ಅರಳುವ ಅವಕಾಶವನ್ನೇ ಕಳೆದುಕೊಂಡಿರುವುದು ದುರದೃಷ್ಟಕರ.


ಸ್ವತಂತ್ರ ನೆಲೆಯ ಆಲೋಚನೆಯನ್ನು ನಾವಿಂದು ಕಳೆದುಕೊಂಡು ಬಿಟ್ಟಿದ್ದೇವೆ. ನಿರ್ದಿಷ್ಟ ವಿನ್ಯಾಸಗಳಿಗಷ್ಟೇ ಸೀಮಿತವಾಗಿರುವ ನಮ್ಮ ಮನಸ್ಸುಗಳಿಂದ ಸಂಬಂಧದ ಸೃಜನಶೀಲತೆ ರೂಪುಗೊಳ್ಳಲು ಸಾಧ್ಯವೇ ಇಲ್ಲ. ವೈಯಕ್ತಿಕ ಬದುಕಿನಂತೆ ಸಾಮಾಜಿಕ ವ್ಯವಸ್ಥೆಯಲ್ಲೂ ಮೌಲ್ಯಗಳು ಕಳೆದುಹೋಗಿವೆ. ವ್ಯಕ್ತಿಯ ಆಂತರ್ಯದಲ್ಲಿ ಮನೆ ಮಾಡಿರಬಹುದಾದ ಅಸ್ಥಿರತೆ ಒಟ್ಟಾರೆ ಜನಜೀವನದ ವಿಶಾಲ ತಳಹದಿಯನ್ನೇ ಕಿರುದಾಗಿಸಿದೆ.

ವ್ಯವಸ್ಥೆಯೆಂಬುದೇ ಛಿದ್ರಗೊಂಡಿರುವಾಗ ಕುಟುಂಬ ಜೀವನದ ಸವಿ ಉಣ್ಣುವ ಹಂಬಲ ಯಾರಲ್ಲೂ ಉಳಿದಿಲ್ಲ. ಸ್ವಸ್ಥ ಕುಟುಂಬದ ಸನ್ನಿವೇಶವೇ ಇಂದು ಕಳೆದುಹೋಗಿರುವುದೂ ಇದೇ ಕಾರಣಕ್ಕೆ. ಅಸಂಬದ್ಧ ಕುಟುಂಬ ವ್ಯವಸ್ಥೆಯೇ ಸುತ್ತಲಿನ ಸಮಸ್ಯೆಗಳಿಗೆ ಕಾರಣವೆಂಬ ಅರಿವು ಜಡಮನಸ್ಸಿಗೆ ಆಗುತ್ತಿಲ್ಲ. ಮೇಲು ನೋಟಕ್ಕೆ ಸ್ವತಂತ್ರ ಹಕ್ಕಿಯಂತೆ ಕಾಣುವ ವ್ಯಕ್ತಿ ಇಂದು ತನ್ನ ಬದುಕಿನ ಬಿಕ್ಕಟ್ಟುಗಳನ್ನು ಅಪರಿಹಾರ್ಯವಾಗಿಸಿಕೊಳ್ಳುತ್ತಿರುವುದು ದುರಂತ.

ಮೂಲಭೂತ ಸಂಘಟಿತ ಜೀವನ ಕ್ರಮದಲ್ಲಿನ ಶಕ್ತಿ ಈ ಸನ್ನಿವೇಶದಲ್ಲಿ ಕುಂದಿರುವುದು ಜಾಗತೀಕರಣದ ನಿಶ್ಶಬ್ದ ಪರಿಣಾಮಗಳಲ್ಲಿ ಪ್ರಮುಖ. ಏಕರೂಪಿ ಜೀವನ ಕ್ರಮಗಳಿಂದಾಗಿ ಆರ್ಥಿಕತೆಯೇ ಸಮಗ್ರ ಅಭಿವೃದ್ಧಿಯ ಮಾನದಂಡವೆಂಬ ಭ್ರಮೆಗೆ ನಾವಿಂದು ತಲುಪಿದ್ದೇವೆ. ಹೀಗಾಗಿ ಆಧುನಿಕ ಸಮಾಜದಲ್ಲಿ ಸಂಬಂಧಗಳ ಗ್ರಹಿಕೆಯೆಂಬುದು ಲಾಭದೃಷ್ಟಿಯಿಂದಲೇ ಅಳೆಯಲ್ಪಡುವಂಥದ್ದು. ತಾತ್ವಿಕ ವ್ಯವಸ್ಥೆಗಳ ಕುರಿತು ಇಲ್ಲಿ ಚರ್ಚೆ ನಡೆಯುವುದೇ ಇಲ್ಲ. ಪರಿಣಾಮ ವ್ಯಾವಹಾರಿಕ ಪರಿಕಲ್ಪನೆಯಡಿಯಲ್ಲೇ ಸಂಬಂಧಗಳು ವ್ಯಾಖ್ಯಾನಕ್ಕೊಳಗಾಗುತ್ತಿವೆ. ವಸಾಹತುಶಾಹಿ ಕಾಲಘಟ್ಟದಲ್ಲಿ ಜನಿಸಿದ ಚಳವಳಿಗಳಾಗಲೀ, ಅಂಥ ಮನೋಭಾವಗಳಾಗಲೀ ಇಲ್ಲಿ ಮುಖ್ಯವಾಗುವುದಿಲ್ಲ. ಕೊನೆಪಕ್ಷ ಹೊಸದೊಂದು ಸಾಹಿತ್ತಿಕ ಚಳವಳಿಯೊಂದನ್ನು ಹುಟ್ಟುಹಾಕುವ ಸಾಮರ್ಥ್ಯವನ್ನೂ ನಾವು ಕಳೆದುಕೊಂಡು ಬಿಟ್ಟಿದ್ದೇವೆಯೇ ಎಂಬ ಸಂಶಯ ಕಾಡುತ್ತಿದೆ. ಪರಕೀಯ ಆಳ್ವಿಕೆಯ ಸ್ವರೂಪವನ್ನು ಸಮಗ್ರವಾಗಿ ಗ್ರಹಿಸಿದ ಮಂದಿಯ ಅನುಭವ ಮುಂದಿನ ತಲೆಮಾರಿಗೆ ಸಮರ್ಥವಾಗಿ ದಾಟದೇ (ಇದ್ದದ್ದನ್ನೂ ಓದುವ ವ್ಯವಧಾನ ನಮಗಿಲ್ಲ ಬಿಡಿ) ಇರುವುದೇ ಇಂದಿನ ಇಂಥ ಸಾಂಸ್ಕೃತಿಕ ಅಪಸವ್ಯಕ್ಕೆ ಕಾರಣವಾಗುತ್ತಿರಬಹುದೇನೋ?

ಬಹುಮುಖಿ ಸಂಸ್ಕೃತಿಯ ಹೆಸರಿನಡಿ ಭಾರತೀಯ ಜೀವನ ಕ್ರಮ ಪಾಲನೆಗೆ ನಾವಿಂದು ಹಿಂಜರಿಯುತ್ತಿದ್ದೇವೆ. ಅಮೂರ್ತ ಹಿಂಸೆಯ ನಡುವೆ ನಮ್ಮ ಸಾಂಸ್ಕೃತಿಕ ಒಳತೋಟಿಯೇ ನಾಶವಾಗುತ್ತಿದೆ. ಭಾರತೀಯರ ಸಾಂಸ್ಕೃತಿಕ ಧಾರ್ಮಿಕ. ಸಾಮಾಜಿಕ ನೆಲೆಗಳು ಸಂಪೂರ್ಣ ಛಿದ್ರಗೊಂಡಿವೆ. ಜೀವನ ಕ್ರಮವೆನ್ನುವುದು ಸೀಮಿತ ವಲಯದಲ್ಲಿ ಸುತ್ತಲಾರಂಭಿಸಿ ವ್ಯಕ್ತಿ, ತನ್ನ ಹೊರಗಿನ ಸೃಜನಶೀಲತೆಗೆ ಪ್ರತಿಸ್ಪಂದಿಸುವುದನ್ನೇ ಮರೆತುಬಿಡುತ್ತಿದ್ದಾನೆ.

ಸಾಮಾಜಿಕ ಅನುಭವದಿಂದ ದೂರ ಸರಿದಿರುವ ಪರಿಣಾಮ ಅಂಥದೊಂದು ಪ್ರೇರಣೆಯ ಬಗ್ಗೆ ಸಣ್ಣ ಚರ್ಚೆಗೂ ಅವಕಾಶವಾಗುತ್ತಿಲ್ಲ. ಅವಕಾಶಹೀನ ಮಾರ್ಗದಲ್ಲಿ ಎಲ್ಲೋ ಕೆಲವೆಡೆ ಹುಟ್ಟುವ ಸಣ್ಣ ದನಿಗಳೂ ಜಾಗತೀಕರಣದ ಆರ್ಭಟದಲ್ಲಿ ಕೇಳದಾಗಿದೆ. ಪ್ರತೀ ವ್ಯಕ್ತಿಗಳಲ್ಲಿಯೂ ಆಂತರಿಕವಾಗಿ ಜನಿಸುವ ಸ್ವಪ್ರeಯೊಂದೇ ಇದಕ್ಕಿರುವ ಪರಿಹಾರ.

ನೆಲೆಗೊಂಡ ಮನೋಭಾವದ ವಿರುದ್ಧ ಮೂಡಿಸಬಹುದಾದ ಆಂತರಿಕ ಜಾಗೃತಿ ಸುಲಭದ ಮಾತಲ್ಲ. ಒಂದೋ ಸಂಪೂರ್ಣ ನಾಶದ ತುದಿಯಲ್ಲಿ ಎಚ್ಚರ ಬರಬೇಕು. ಇಲ್ಲವೇ ಮುಂದಾಗಬಹುದಾದ ಅನಾಹುತದ ಕುರಿತು ಬಲವಾದ ಚಳವಳಿಯೇ ರೂಪುಗೊಳ್ಳಬೇಕು. ಅತ್ಯಂತ ಸಂಕೀರ್ಣ ಇಂದಿನ ಸ್ಥಿತಿಯಲ್ಲಿ ಇವೆರಡೂ ಕಷ್ಟ ಸಾಧ್ಯ. ಸಂಸ್ಕೃತಿಯ ಅಂತಃಶ್ಚೇತನವನ್ನು ಪುನಃ ಜಾಗೃತಿಗೊಳಿಸುವುದು ಯಾವುದೇ ರಕ್ತಪಾತದಂಥ ಕ್ರಿಯೆಗಳಿಂದ ಆಗುವ ಮಾತಲ್ಲ. ಮೂಲತಃ ಭಾರತೀಯ ಸಂಸ್ಕೃತಿ ಅತ್ಯಂತ ಸಬಲವಾದದ್ದು. ಸಣ್ಣ ಪುಟ್ಟ ಹೊಡೆತಗಳಿಂದ ಅದು ಬಗ್ಗುವಂತಹುದಲ್ಲ. ಆದರೂ ನಿರಂತರ ದಾಳಿ ಕೆಲಮಟ್ಟಿಗೆ ಅದನ್ನು ಘಾಸಿಗೊಳಿಸಿಬಿಡಬಹುದಾದ್ದರಿಂದ ಈ ನಿಟ್ಟಿನಲ್ಲಿ ಹೋರಾಟವೊಂದರ ಅಗತ್ಯ ಎದ್ದು ಕಾಣುತ್ತಿದೆ. ಮೂರನೇ ಜಗತ್ತಿನ ಮೇಲೆ ಪಾಶ್ಚಾತ್ಯರ ನಿರಂತರ ಆಕ್ರಮಣದ ಜತೆಗೆ ದೇಸೀತನದ ಬಗೆಗಿನ ಕೀಳರಿಮೆ ಈ ಆತಂಕಕ್ಕೆ ಕಾರಣ.

ಇಂಥ ಅಡೆತಡೆಗಳ ವಿರುದ್ಧ ಸಾಮಾಜಿಕ ಚಳವಳಿಯ ಜತೆಗೆ ರಾಜಕೀಯ ಶಕ್ತಿಯೂ ಕೈ ಜೋಡಿಸಬೇಕು. ದುರಂತವೆಂದರೆ ಇಂದಿನ ರಾಜಕೀಯ ಸನ್ನಿವೇಶ ಬಹುತೇಕ ಸಂಬಂಧ ವಿಘಟನೆಯ ಹಾದಿಯಲ್ಲೇ ಸಾಗಿರುವುದು. ರಾಷ್ಟ್ರೀಯ ಸಂಸ್ಕೃತಿ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿರುವಾಗಲೂ ರಾಜಕೀಯ ಜಾಗೃತಿ ನಮ್ಮಲ್ಲಿ ಮೂಡುತ್ತಿಲ್ಲ. ಆಶಾವಾದದ ಸಂವೇದನೆಯನ್ನೇ ನಮ್ಮ ಬಹುತೇಕ ನಾಯಕರು ಕಳೆದುಕೊಂಡುಬಿಟ್ಟಿದ್ದಾರೆ. ಗಾಢ ಸತ್ವವುಳ್ಳ ಭಾರತೀಯ ಬದುಕು ನಮ್ಮ ನಾಯಕರಿಗೆ ಸಹ್ಯವಾಗುತ್ತಿಲ್ಲ. ಅಮೆರಿಕನ್ ಆಡಳಿತ ಕ್ರಮವೇ ಇಂದು ಸಾಂಸ್ಕೃತಿಕ, ರಾಜಕೀಯ ಪ್ರೇರಣೆಯಾಗಿದೆ. ಮೊದಮೊದಲು ಅಸ್ಪಷ್ಟವಾಗಿದ್ದ ಇದು ಜಾಗತೀಕರಣದ ದಟ್ಟ ಪ್ರಭಾವಕ್ಕೊಳಗಾಗಿ ಬಲವಾಗಿ ಬೇರೂರಿ ಬಿಟ್ಟಿದೆ. ಪ್ರeವಂತ ವರ್ಗವೂ ಇದರಿಂದ ಹೊರತಾಗಿಲ್ಲ. ಪರದೇಶೀ ಸಂಸ್ಕೃತಿಯ ಸಂಪರ್ಕಕ್ಕೆ ಹಾತೊರೆಯುತ್ತಿರುವ ಮೇಲ್ವರ್ಗದ ಮಂದಿ ದಮನಕಾರಿ ನೀತಿಯೇ ಆಡಳಿತದ, ಪ್ರತಿಷ್ಠೆಯ ಸಂಕೇತವನ್ನಾಗಿಸಿಕೊಂಡಿದ್ದಾರೆ.

ಇಂಥ ಸಂಸ್ಕೃತಿಯನ್ನು ಅರಗಿಸಿಕೊಳ್ಳಲು ಭಾರತೀಯರಿಂದ ಸಾಧ್ಯವಿಲ್ಲವೆಂಬುದು ಗೊತ್ತಿದ್ದೂ, ಬ್ರಿಟಿಷ್ ಅಪತ್ಯದ ಸನ್ನಿವೇಶದಲ್ಲಿನ ಅವಾಂತರಗಳ ಅರಿವಿದ್ದೂ, ಸಾಮಾಜಿಕ ಸ್ಥಿತ್ಯಂತರದ ವಿಷಯದಲ್ಲಿ ನಾವು ಎಡವುತ್ತಿರುವುದು ಶೋಚನೀಯ. ಸಂಬಂಧಗಳ ಸ್ಥಿರತೆಯೊಂದೇ ಇದಕ್ಕೆ ಪರಿಹಾರ. ಅತ್ಯಂತ ಬಲಶಾಲಿ ಭಾರತೀಯ ಮನಸ್ಸು ಬೆಳೆದು ಬಂದದ್ದೇ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ. ಈ ಕಾರಣಕ್ಕೇ ನಮ್ಮ ಸ್ವಾಭಿಮಾನವೂ ಅನ್ಯದೇಶೀಯರಿಗೆ ಆದರ್ಶವಾಗಿ ಕಂಡಿತ್ತು. ಹಾಗೆಂದು ಹೊರಗಿನ ಎಲ್ಲ ಬೆಳವಣಿಗೆಗಳನ್ನು ನಾವು ತಿರಸ್ಕರಿಸಬೇಕೆಂದೂ ಅಲ್ಲ. ಆ ಹಠವೂ ನಮಗೆ ಬೇಡ. ಆದರೆ ಸಾಮರಸ್ಯದ ಜತೆಜತೆಗೇ ಈ ನೆಲದ ಸ್ವಂತಿಕೆಯನ್ನು. ಅದರ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕಾದ್ದು ಇಂದಿನ ತುರ್ತು.

ಭಾರತೀಯತೆಯ ಹಿಂದಿನ ಮುಖ್ಯ ಬೇರುಗಳಿರುವುದು ಸಂಬಂಧಗಳ ನೆಲೆಯಲ್ಲಿಯೇ. ವಸಾಹತುಗಳ ಆಗಮನ ಇದರ ಮೂಲವನ್ನೇ ಕತ್ತರಿಸಲು ಪ್ರಯತ್ನಿಸಿತು. ಆ ಸಂದರ್ಭದಲ್ಲಿಯೂ ತನ್ನ ಸಿಕ್ಕು ಬಿಟ್ಟುಕೊಳ್ಳುವ ನಮ್ಮತನ ಇದೀಗ ಜಾಗತೀಕರಣದ ದಾಳಿಗೆ ಸಿಲುಕಿ ಜಾಳುಜಾಳಾಗುತ್ತಿದೆ. ಸಂಬಂಧಗಳ ಗಾಢತೆಯ ನಡುವೆ ಶೀತಲಗಾಳಿ ಸುಳಿದಾಡತೊಡಗಿದೆ. ಗ್ರಾಮೀಣ ಸಂಸ್ಕೃತಿಯ ಮೇಲೆ ನಗರೀಕರಣ ಪ್ರಕ್ರಿಯೆ ಪ್ರಬಲವಾದ ಪ್ರಹಾರ ಮಾಡುತ್ತಿದೆ. ಮನುಷ್ಯ ಮತ್ತು ಸಮಾಜ ಬೇರೆ ಬೇರೆಯಾಗಿ ಕಾಣತೊಡಗಿದೆ. ಪ್ರಗತಿಯತ್ತ ಮುಖ ಮಾಡುವ ಭರದಲ್ಲಿ ನಾಗರೀಕತೆಯ ಸಾಮರಸ್ಯ ನಶಿಸಿಹೋಗುತ್ತಿದೆ. ಅನ್ಯ ದೇಶೀಯ ಸಂಸ್ಕೃತಿಯ ಆಗಮನಕ್ಕೆ ಸಹಜವಾಗಿಯೇ ನಾವು ಉತ್ಕಟವಾಗಿ ಪ್ರತಿಸ್ಪಂದಿಸುತ್ತಿದ್ದೇವೆ. ಇದು ಆಧುನಿಕ ಶಿಕ್ಷಣ ಕ್ರಮದಲ್ಲೂ ಧ್ವನಿಸಿದ ಪರಿಣಾಮ ಸಮಾಜ ತನ್ನ ಚಾರಿತ್ರಿಕ ಸ್ವರೂಪವನ್ನೇ ಕಳೆದುಕೊಳ್ಳುತ್ತಿದೆ.

ಅಂತರಂಗ ತನ್ನ ಸೂಕ್ಷ್ಮತೆಯನ್ನು ಕಳೆದುಕೊಂಡಿದ್ದರೆ ಪ್ರತಿಫಲವಾಗಿ ಆರೋಗ್ಯಕರ ಪ್ರೇಮವೆನ್ನುವುದು ಕಥೆಯಾಗಿ ತೋರುತ್ತಿದೆ. ಸುತ್ತಣ ಸಮಾಜದಲ್ಲಿ ಸಮುದಾಯದಲ್ಲಿ ಮನುಷ್ಯ ಸಂಬಂಧಗಳು ನಾಶವಾಗಿ, ಬದುಕಿನಲ್ಲಿ ಅಸ್ಥಿರತೆ ಇಣುಕುತ್ತಿದೆ. ಇದು ಸಮಾಜ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ವ್ಯಕ್ತಿಯ ವೈಯಕ್ತಿಕ ಬದುಕಿನ ಆರ್ಥಿಕತೆಯ ಮೇಲೂ ಪ್ರಭಾವ ಬೀರಿದುದರಿಂದ ಗುಲಾಮಗಿರಿಯನ್ನು ಆತ ಅರಿವಿಲ್ಲದೇ ಒಪ್ಪಿಕೊಂಡು ಬಿಡುತ್ತಿದ್ದಾನೆ. ದುರದೃಷ್ಟವಶಾತ್ ಇಂದಿನ ಎಲ್ಲ ವ್ಯವಸ್ಥೆಯೂ ನಮ್ಮನ್ನು ಅತಿ ವಿಧೇಯರಾಗಿ, ಯಂತ್ರಜಡರಾಗಿ, ಮತಿಶೂನ್ಯರಾಗಿ ಪರಿವರ್ತಿಸುತ್ತಿದೆ. ಆಂತರಂಗಿಕವಾಗಿ ನಾವು ವಿಕಲಾಂಗರಾಗುತ್ತಿದ್ದೇವೆ. ಇದರಿಂದ ವೈಯಕ್ತಿಕ ಹಾಗೂ ಸಾಮುದಾಯಿಕ ಸಮಸ್ಯೆಗಳು ಹೆಚ್ಚುತ್ತಿವೆ. ಸಹಜವಾಗಿ ಅಸ್ಥಿರತೆಯೂ ಕಾಡಲಾರಂಭಿಸಿ ಭಯಮುಕ್ತ ವಾತಾವರಣವೆಂಬುದು ಶಾಶ್ವತವಾಗಿ ಮರೆಯಾಗುತ್ತಿದೆ.

ಮಾನವ ಸಂಬಂಧಗಳನ್ನು ಅರ್ಥ ಮಾಡಿಕೊಂಡಾಗ ಭಯಕ್ಕೆ ಸ್ಥಾನವೇ ಇರುವುದಿಲ್ಲ. ಮನುಷ್ಯ ಸಹಜ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸಹ್ಯವಾಗಿಸಿಕೊಳ್ಳಲು ಅದರ ಸೂಕ್ಷ್ಮತೆಗಳು, ನೋವು ನಲಿವುಗಳನ್ನು ಕರಗಿಸಿಕೊಳ್ಳಲು ಆತನಿಗೆ ಅಪಾರ ಕ್ರಿಯಾಶೀಲತೆ ಅಗತ್ಯ. ಜಡ ಸಮಾಜದ ಕಟ್ಟುಪಾಡುಗಳಿಗೆ ವಿಧೇಯವಾದ, ನಿಷ್ಕ್ರಿಯ ಸಾಮರಸ್ಯವನ್ನು ಹೊಂದಿರುವ ವ್ಯಕ್ತಿಯಿಂದ ಇದು ಅಸಾಧ್ಯ. ಪೂರ್ವಗ್ರಹ ಪೀಡಿತವಲ್ಲದ ಅನ್ವೇಷಣೆ ಹಾಗೂ ಸ್ವಪ್ರಯತ್ನದಿಂದ ಸ್ಥಾಪಿತವಾಗುವ ಮೌಲ್ಯಗಳನ್ನು ರೂಢಿಸಿಕೊಂಡಾಗ ಮಾತ್ರ ಇಂಥ ಕ್ರಿಯಾಶೀಲತೆಯನ್ನು ಧಕ್ಕಿಸಿಕೊಳ್ಳಲು ಸಾಧ್ಯ.

ಇಂದಿನ ಬಹುತೇಕ ಸಂಘರ್ಷಗಳು, ಭಯೋತ್ಪಾದನೆಯಂಥ ವಿದ್ರೋಹಗಳು, ಸಮಾಜ ಘಾತಕ ಚಟುವಟಿಕೆಗಳು ನಾವು ವ್ಯಕ್ತಿಗಳು, ವಿಚಾರಗಳು, ವಸ್ತುಗಳೊಂದಿಗೆ ಹೊಂದಿರುವ ತಪ್ಪು ಸಂಬಂಧಗಳ ಅಥವಾ ಸಂಬಂಧರಾಹಿತ್ಯದ ಫಲ. ತಾಂತ್ರಿಕತೆಯ ಅತಿಯಾದ ಅವಧಾರಣೆಯಿಂದಾಗಿ ನಾವು ವ್ಯವಸ್ಥೆಯಲ್ಲಿ ವಿಫಲರಾಗುತ್ತಿದ್ದೇವೆ. ಜೀವನವೆಂದರೆ ಕೇವಲ ತಂತ್ರeನದಲ್ಲಿನ ಆವಿಷ್ಕಾರಗಳಲ್ಲ. ಅದು ನೋವು, ನಲಿವು, ಸೌಂದರ್ಯ, ಕುರೂಪ, ಪ್ರೀತಿ-ಪ್ರೇಮಗಳ ಸಂಗಮ. ಇದನ್ನು ಸಮಗ್ರವಾಗಿ ಅರ್ಥೈಸಿಕೊಂಡಾಗ ಅಂಥ ತಿಳಿವಳಿಕೆಗಳು ಹೊಸದಾದ ತಾಂತ್ರಿಕತೆಯೊಂದನ್ನು ರೂಪಿಸಬಲ್ಲುದು. ಇದು ಮನಸ್ಸು ಮತ್ತು ಅಪೇಕ್ಷೆಗಳಿಗೆ ಪೂರಕವಾಗಿರುತ್ತದೆ. ಭಾವನಾ ಜನ್ಯ ತಾಂತ್ರಿಕತೆಯ ಉದ್ದೇಶ ವಿನಾಶವಾಗಿರಲು ಸಾಧ್ಯವೇ ಇಲ್ಲ. ಅದು ಜೀವನದ ಸಮಗ್ರ ಪ್ರಕ್ರಿಯೆಗಳ ಅರಿವಿನ ಮಾರ್ಗ.

ತೀರಾ ಅಗತ್ಯ, ಅನಿವಾರ್ಯವೆಂದೆನಿಸಿರುವ ತಂತ್ರeನ ಇಂದಿನ ನಮ್ಮ ಅಂತರಂಗದ ಒತ್ತಡ-ಸಂಘರ್ಷಗಳನ್ನು ಪರಿಹರಿಸುತ್ತಿಲ್ಲ. ಗಲ್ಲಿಗಲ್ಲಿಗಳಿಗೊಂದು ಯೋಗ ಕಲಿಕಾ ಕೇಂದ್ರಗಳು, ಬೀದಿ ಬೀದಿಗಳಿಗೊಂದು ನಗೆಕ್ಲಬ್‌ಗಳು ಹುಟ್ಟಿಕೊಂಡಿರುವುದೇ ಇದಕ್ಕೆ ಸಾಕ್ಷಿ. ಮಾನಸಿಕ ತುಮುಲಗಳನ್ನು ತಹಬಂದಿಗೆ ತರಲು ಮಠ-ಮಂದಿರಗಳ ಮೊರೆಹೋಗುತ್ತಿರುವವರಿಗೂ ಕೊರತೆಯಿಲ್ಲ. ಮನಶ್ಶಾಂತಿಗಾಗಿ ಬೋಧನೆ, ಪ್ರವಚನಗಳಲ್ಲಿ ಇನ್ನಿಲ್ಲದ ಕೋರಂ ಕಾಣುತ್ತಿರುವುದೂ ಇದೇ ಕಾರಣಕ್ಕೆ. ಜೀವನ ಸ್ವರೂಪವನ್ನು ಗ್ರಹಿಸಿಕೊಳ್ಳದೇ ಆತ್ಮಪ್ರೀತಿಯನ್ನು ತೂರಿ, ಒಲವಿನ ಒರತೆಯಿಲ್ಲದ ಹೃದಯ ಹೊತ್ತು ವೈeನಿಕ ಸಾಧನೆಯೊಂದೇ ಪ್ರತಿಷ್ಠೆಯ ಸಂಕೇತವೆಂದೂ, ಶಸ್ತ್ರ ಸಂಗ್ರಹವೇ ಸಾಮರ್ಥ್ಯದ ಮಾನದಂಡವೆಂದೂ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ.

ವೃತ್ತಿ ಕೌಶಲವೇ ಶಿಕ್ಷಣದ ಅಂತಿಮ ಗುರಿಯೆಂಬುದು ಇಂದಿನ ವಾದ. ಆದರೆ ಉದ್ಯೋಗ ನಿರತನ ಹತಾಶೆಯ ಸ್ಥಿತಿಗೆ ಪರಿಹಾರವನ್ನು ನಮ್ಮ ಶಿಕ್ಷಣ ರೂಪಿಸಿಕೊಡುತ್ತಿಲ್ಲ. ನಮ್ಮತನದ ಅರಿವಿಲ್ಲದ ತಾಂತ್ರಿಕತೆ ಏಕತಾನತೆಗೆ ಕಾರಣವಾಗಿದೆ. ಅಂಥ ಏಕತಾನತೆಯೇ ಬದುಕಿನ ಅಭದ್ರತೆಗೆ ದಾರಿ ಮಾಡಿಕೊಟ್ಟಿದೆ. ಬದುಕೆಂಬುದು ಬರಿದು ಬರಿದಾದ ಪರಿಣಾಮ ಹೊಸತನದ ಕ್ಷಣಗಳಿಂದ ಅದನ್ನು ತುಂಬಿಕೊಡಲು ನಮ್ಮಲ್ಲಿ ಸಂಬಂಧಗಳ ಸೆಲೆಯೇ ಒತ್ತಿಹೋಗಿದೆ. ಭೀಕರ ಬರಗಾಲ ಒಟ್ಟಾರೆ ಮಾನವ ಜೀವನವನ್ನು ಆವರಿಸಿಕೊಂಡುಬಿಟ್ಟಿದೆ. ಈ ಬಾಳಿನ ಸುವಿಶಾಲ ಹರಹು ನಮಗೆ ನಿಲುಕುತ್ತಿಲ್ಲ. ಅನುಭವ, ಅನುಭವಗಳು ಧಕ್ಕದೇ ಹೋಗಿವೆ. ಸಮಗ್ರ ಜೀವನ ಹಾಗೂ ಕ್ರಿಯಾಶೀಲತೆಗಳಿಂದ ನಾವಿಂದು ಬಹುದೂರ ಬಂದುಬಿಟ್ಟಿದ್ದೇವೆ. ಈಗೇನಿದ್ದರೂ ನಮ್ಮ ಜೀವಂತಿಕೆಗಿರುವ ಏಕೈಕ ಸಾಕ್ಷಿಯೆಂದರೆ ಆಕ್ರಮಣಶೀಲತೆ. ಅದನ್ನೇ ನಾವು ಜೀವನದ ಎಲ್ಲ ಸ್ತರಗಳಲ್ಲೂ ಪ್ರಯೋಗಿಸುತ್ತಿದ್ದೇವೆ. ಮನಸ್ಸಿನೊಳಗೂ ಅeತ ಅಂಜಿಕೆಯ ಫಲವಿದು. ಅದನ್ನು ಇನ್ನಷ್ಟು ಕಾಲ ಅeತವಾಗಿಡುವ ಹುನ್ನಾರವಾಗಿ ನಾವು ನಮ್ಮ ಸುತ್ತಲೂ ಇಂಥ ಹುಸಿ ಆಕ್ರಮಣಗಳಿಂದ ಭದ್ರತಾ ವಲಯಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಪ್ರಯತ್ನಕ್ಕೂ ಹೋಗದೆ ಅವರಿಗಿಂತ ನಾವು ಬಲಿಷ್ಠರೆಂದು ತೋರಿಸಿಕೊಳ್ಳಲು ಹವಣಿಸುತ್ತೇವೆ. ಇಂಥ ಹವಣಿಕೆಗಳಲ್ಲಿ ಪ್ರೀತಿಗೆಲ್ಲಿ ಜಾಗ?

ಪ್ರೀತಿ ಎಂದರೆ ಅದು ಸಂವಹನ ಸ್ವರೂಪಿ. ಅದು ನಿಂತಲ್ಲಿ ನಿಲ್ಲಲಾರದು. ನಿರಂತರ ಹರಿಯುವಿಕೆ ಅದರ ಜನ್ಮಗುಣ. ಇಂಥ ಚಲನಶೀಲತೆಯೇ ಇನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವ ರಹದಾರಿಯಾಗುತ್ತದೆ. ಪರಸ್ಪರ ಸ್ಪಂದನದ ಫಲವಾಗಿ ಸಂಬಂಧಗಳು ದೃಢಗೊಳ್ಳುತ್ತದೆ. ಆದರಿಂದು ನಾವು ಪ್ರೀತಿಯೆಂಬುದನ್ನು ಕಳೆದುಕೊಂಡು ಬರಿದಾಗಿ ಬಿಟ್ಟಿದ್ದೇವೆ.

ಸಾಂಸ್ಥಿಕ ವ್ಯವಸ್ಥೆಯೊಂದನ್ನೇ ಮೂಗಿನ ನೇರಕ್ಕಿಟ್ಟುಕೊಂಡು ಉಳಿದೆಲ್ಲ ಭಾವನೆಗಳಿಗೆ ಕಣ್ಕಾಪುಕಟ್ಟಿಕೊಂಡು ನಾಗಾಲೋಟದಿಂದ ಮುನ್ನುಗ್ಗುತ್ತಿದ್ದೇವೆ. ನಮ್ಮ ಮೂಗುದಾಣ ಜಗ್ಗಿ ನಿಯಂತ್ರಿಸುತ್ತಿರುವ ವ್ಯವಸ್ಥೆಯ ಕೂಸಾಗಿ ಸ್ವಂತಿಕೆ ಕಳೆದುಕೊಳ್ಳುತ್ತಿದ್ದೇವೆ. ಇದು ತೀರಾ ಅಪಾಯಕರ. ನಿರ್ದಿಷ್ಟ ಉದ್ದೇಶ ಸಾಧನೆಯಾದ ಕೂಡಲೇ ನಮ್ಮ ಪಾಡಿಗೆ ನಮ್ಮ ಬಿಟ್ಟು ವ್ಯವಸ್ಥೆಯೇ ಫಲಾಯನ ಮಾಡಿಬಿಡಬಹುದು. ಅಂಥ ಸನ್ನಿವೇಶದಲ್ಲಿ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಮನೋಧರ್ಮವೂ ನಮ್ಮಳಿದಿರುವುದಿಲ್ಲ. ನಮ್ಮ ಪರಿಸರಕ್ಕೆ ಮರಳುವ ಹಾದಿಯೂ ತಿಳಿದಿರುವುದಿಲ್ಲ. ಮೂಗುದಾಣ ಹಿಡಿದು ಮುನ್ನಡೆಸುವವರೂ ಇರುವುದಿಲ್ಲ. ಅಂಥ ಹೀನಾಯ ಸ್ಥಿತಿಯಲ್ಲಿ ಕೊರಗುವುದೊಂದೇ ದುರ್ಗತಿ ನಮ್ಮ ಪಾಲಿಗುಳಿದುಬಿಡಬಹುದು. ಹಿಡಿಯಷ್ಟು ಪ್ರೀತಿ ಆಂತರ್ಯದಲ್ಲಿ ಉಳಿದದ್ದೇ ಆದಲ್ಲಿ ಅದೆಂಥದೇ ಮರಳುಗಾಡಿಲಿ. ಸಂಬಂಧಗಳ ಓಯಸಿಸ್‌ಗಳನ್ನು ಹುಡುಕಿಕೊಂಡು ಸಾಗಬಹುದು.

ಪ್ರೀತಿ ಅರಳುವುದು ವೈಯಕ್ತಿಕ ಸ್ವಾತಂತ್ರ್ಯದ ಹೊಂಗಿರಣಗಳ ನಡುವೆ ಮಾತ್ರ. ಬಲವಂತದ ಯಾವುದೇ ಶಿಸ್ತಿನಿಂದಲೂ ಅದರ ವಿಕಸನ ಅಸಾಧ್ಯ. ಬಹಿರಂಗದಲ್ಲಿ ಅತ್ಯಂತ ಶಿಸ್ತಿನ ಮನುಷ್ಯನಾಗಿ ತೋರುವ ಯಾವುದೇ ವ್ಯಕ್ತಿಯಲ್ಲಿ ಆಂತರಂಗಿಕ ತೊಳಲಾಟಗಳಿರಬಹುದು. ಮಾನಸಿಕ ಅಸ್ತವ್ಯಸ್ಥತೆ ಕಾಡುತ್ತಿರಬಹುದು. ಅದು ಬೇರೆಲ್ಲೋ ಧುತ್ತನೆ ಪ್ರತ್ಯಕ್ಷವಾಗಿ ಬಿಡಬಹುದಾದ ಅಪಾಯಗಳಿವೆ. ಸಮಕಾಲೀನ ಸಮಾಜದ ಬದುಕಿಗೆ ಬೇಕಾಗಿ ರೂಢಿಸಿಕೊಂಡಿರುವ ಶಿಸ್ತು ಮಾನಸಿಕ ವಿಪ್ಲವಗಳಿಗೆ ಪರಿಹಾರ ದೊರಕಿಸಿಕೊಡದು. ಅಂಥ ವಿಪ್ಲವಗಳು ಅಂತರಂಗದಲ್ಲಿ ಹುಡುಕಿಕೊಂಡು ಹಠಮಾರಿಯಾಗುತ್ತ ಸಾಗುತ್ತದೆ. ವ್ಯಕ್ತಿಗತ ಭಯ, ದ್ವೇಷಗಳಿಗೆ ಇದೇ ಕಾರಣವಾಗುತ್ತದೆ. ಪ್ರತ್ಯೇಕವಾದಗಳಂಥವು ಇಲ್ಲಿಂದಲೇ ಹುಟ್ಟು ಪಡೆಯುತ್ತವೆ. ಇದನ್ನೇ ಮಹತ್ವಾಕಾಂಕ್ಷೆಯೆಂದು ನಾವು ಪರಿಭಾವಿಸುತ್ತೇವೆ. ಇದರ ಹಿಂದಿನ ಸಮಸ್ಯೆಯನ್ನು ಗ್ರಹಿಸುವ ಪ್ರಯತ್ನಕ್ಕೂ ನಾವು ಮುಂದಾಗುವುದಿಲ್ಲ. ಸಮಗ್ರ ವ್ಯಕ್ತಿತ್ವದ ಎಲ್ಲ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಳ್ಳುವುದರಿಂದ, ಅದರ ಆಯಾಮಗಳ ಅಭಿವ್ಯಕ್ತಿಗೆ ನೆಲೆಯೊದಗಿಸುವುದರಿಂದ ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅದು ಅಂತಿಮವಾಗಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನಾಂದಿಯಾಗುತ್ತದೆ.

ಪರಿವರ್ತನೆಯೆಂಬುದು ವ್ಯವಸ್ಥೆಯಲ್ಲಿ ಬರಬೇಕಾದುದಲ್ಲ. ಇಡೀ ವ್ಯವಸ್ಥೆಯನ್ನೇ ಬದಲಿಸಿಬಿಡುತ್ತೇನೆಂಬುದು ಮೂರ್ಖತನವಾದೀತು. ಬದಲಾವಣೆ ಅಂತರಂಗದಲ್ಲಿ ಕಾಣಿಸಿಕೊಳ್ಳಬೇಕಾದ್ದು. ಪ್ರತೀ ವ್ಯಕ್ತಿಯೂ ಪ್ರೀತಿಪೂರಿತ ಪರಿವರ್ತನೆಯೆಡೆಗೆ ಮುಖ ಮಾಡಿದಾಗ ತಂತಾನೆ ವ್ಯವಸ್ಥೆಯೂ ಬದಲಾಗುತ್ತದೆ.

ಸಮಸ್ತ ಸಂಬಂಧಗಳಲ್ಲಿ ನಾವು ಪ್ರತಿಫಲನಗೊಳ್ಳಬೇಕು. ಆಗ ಸಹಜವಾಗಿ ನಮ್ಮ ಇತಿಮಿತಿಗಳ ದರ್ಶನವಾಗುತ್ತದೆ. ಅಂತಶ್ಚೇತನವನ್ನು ಅದರ ಆಂತರಿಕ ರಚನೆಗಳನ್ನು ಪುನರ್‌ನಿರ್ಮಿಸಿಕೊಳ್ಳಲು ಇದು ಸಹಕಾರಿ. ಭಾವತರಂಗಗಳಲ್ಲಿ ಅಭಿವ್ಯಕ್ತಿಗೊಳ್ಳುವ ಆಕಾರರಹಿತ ಸಂವೇದನೆಗಳು ವ್ಯಕ್ತಿಯನ್ನು ಪರಿಶುದ್ಧಗೊಳಿಸುತ್ತವೆ. ವ್ಯಕ್ತಿತ್ವದ ಸಮಗ್ರ ಪರಿಯೊಳಗೆ ಭಾವನೆಗಳಿಗೆ ಸೂಕ್ತ ಸ್ಥಾನಮಾನಗಳು ಸಿಗದಿದ್ದಾಗ ಹೊಯ್ದಾಟ ಸಹಜ. ಜೀವನದ ಮೂಲಭೂತ ಆಯ್ಕೆ ಇಂಥ ಭಾವನೆಗಳಿಂದಲೇ ನಡೆಯುವಂಥದ್ದು. ಆತ್ಮಬಲದೊಂದಿಗೆ ಮುನ್ನಡಿ ಇಡುವ ಯಾವುದೇ ವ್ಯಕ್ತಿ ಭಾವನೆಗಳನ್ನು, ಅದರೊಂದಿಗೆ ಗಟ್ಟಿಗೊಳ್ಳುವ ಸಂಬಂಧಗಳನ್ನು ನಿರಾಕರಿಸಲಾರ. ಸೃಜನಶೀಲ ವಿರೋ ಆಕ್ರಮಣಶೀಲತೆಗೆ ಎಡೆಮಾಡಿಕೊಡಲಾರ. ಅಂತಃಕರಣದ ವಿಕಾಸ ಕೂಡಾ ಸಾಧ್ಯವಾಗುವುದು ಇಂಥ ಆತ್ಮಾನುಭವಗಳಿಂದಲೇ.

ನಮ್ಮನ್ನು ನಾವು ನಿರ್ದಿಷ್ಟ ಮಿತಿಯೊಳಗೆ ಕಟ್ಟಿಕೊಳ್ಳುವ ಬದಲು ಹೊಸ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳೋಣ. ಪ್ರತಿದಿನದ ಅರುಣೋದಯಕ್ಕೆ ಮೈಯೊಡ್ಡಿ ಹೊಂಗಿರಣಗಳನ್ನು ತೂರಿಸಿಕೊಳ್ಳೋಣ. ಸಂಬಂಧಗಳ ಮೂಸೆಯೊಳಗೆ ಬೇಯುವ ಹೃದಯ ಇನ್ನಷ್ಟು ಪಕ್ವವಾದೀತು. ಸಂಕೀರ್ಣ ಸಮಾಜದೊಳಗೆ ಭಾವನೆಗಳ ಜಿಪುಣತನ ತೋರದೆ ಉದಾರವಾದಿಯಾದರೆ ಮಾತ್ರ ಬದುಕಿನ ಮಹಲು ತಲೆ ಎತ್ತಲು ಸಾಧ್ಯ.

ಪ್ರೀತಿಯೆಂಬುದು ಬರಿದಾಗುವ ಸಂಪನ್ಮೂಲ. ಬಗೆಬಗೆದು ಹಂಚಿದಷ್ಟೂ ಜಲಕಂಡಿ ದೊಡ್ಡದಾಗುತ್ತ ಹೋಗುತ್ತದೆ. ಹೊಸ ನೀರು ಬುಗ್ಗೆಯಾಗಿ ಚಿಮ್ಮುತ್ತದೆ. ಸುತ್ತಲ ಪರಿಸರವೇ ಹಸಿರಾಗುತ್ತ ಸಾಗುತ್ತದೆ. ಬೊಗಸೆಯಲ್ಲಿ ತುಂಬಿಕೊಡುವ ಗುಟುಕುಪ್ರೀತಿ ಹತ್ತಾರು ಬರಡು ಜೀವಗಳಿಗೆ ಪುನರ್ಜನ್ಮ ನೀಡೀತು.

ಸಣ್ಣತನಗಳ ಕದರು ಮೂಡಿ ಆಂತರ‍್ಯದ ಬೆಳಕು ಮಂಕಾಗಲು ಬಿಡದಿರುವ ಜಾಗೃತಿ ನಮ್ಮ ಈಗಿನ ಅಗತ್ಯ. ನಿರಂತರ ಹರಿವೇ ಜೀವನದ ಯಶಸ್ಸಿನ ಗುಟ್ಟು. ಅದೆಂಥದೇ ಆಕ್ರಮಣಗಳಾಗಲೀ ಅವುಗಳನ್ನೆದುರಿಸಿ ನಾವು ನಾವಾಗಿಯೇ ಮುನ್ನಡಿ ಇಡೋಣ. ಪ್ರತಿ ಬೆಳಗು ಹೊಸತಾಗಿರಲಿ. ಹೊಸ ಹೊಸ ಬದುಕ ತರಲಿ. ಹೊಸ ಸಂಬಂಧಗಳ ಕಟ್ಟಿಕೊಡಲಿ ಎಂಬ ಸಕಾರಾತ್ಮಕ ಆಶಯದೊಂದಿಗೇ ಈ ಬರಹಕ್ಕೆ ಫುಲ್‌ಸ್ಟಾಪ್ ಇಡುತ್ತೇನೆ.

4 comments:

  1. sadhya ...! full stop ittarallaa...! matte maamulinante bareyalu todagi...!!

    ReplyDelete
  2. tumba klisheyind koodida lekhana. odugara talme parikshisuttade. neevu helida vicharada sutta sriyuta s.l.bhairappanavara hosa kadambari `kavalu' suttuttade. dayamaadi odi.

    ReplyDelete
  3. wow ಭಡ್ತಿಯವರಿಂದ ನಾವು ನಿರೀಕ್ಷಿಸುವುದು ಹೀಗೆ. ಖುಶಿಯಾಯ್ತು .

    ReplyDelete