About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Sunday, January 16, 2011

ನನ್ನ ರಾಜೀನಾಮೆಗೆ ಕಾರಣವೇನು ?

ಟ್ಟರಿಗಾಗಿಯೇ ಪತ್ರಿಕೆಯನ್ನು ನಾವು ಮೂರೂ ಮಂದಿ ಬಿಟ್ಟಿದ್ದೇವೆ. ಇದರಲ್ಲಿ ಅನುಮಾನವೇ ಇಲ್ಲ. ಮತ್ತು ಹೀಗೆಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆಯೂ ಇಲ್ಲ.

ಏಕೆಂದರೆ, ಸಮಕಾಲೀನ ಪತ್ರಿಕೋದ್ಯಮದ ಬಗ್ಗೆ ಹೇಳುವುದಾದರೆ ವಿಶ್ವೇಶ್ವರ ಭಟ್ಟರಿಲ್ಲದ ಪತ್ರಿಕೋದ್ಯಮದಲ್ಲಿ ಯಾವುದೇ ಮಜವೂ ಇಲ್ಲ. ಹಿಂದಾಗಿದ್ದರೆ ಒಬ್ಬ ಖಾದ್ರಿಯವರಿದ್ದರು, ಒಬ್ಬ ವೈಎನ್ಕೆ ಘಾನ್ನ ಪೀಠವನ್ನಲಂಕರಿಸುತ್ತಿದ್ದರು. ಒಬ್ಬ ಕೆ. ಶಾಮರಾವ್ ಬಂದರೆಂದು ನಡುಗುತ್ತಾ ಪೆನ್ನೆತ್ತಿಕೊಳ್ಳುತ್ತಿದ್ದೆವು....ಹೇಳಿಕೊಳ್ಳಲುನಾಲ್ಕಾರು ಹೆಸರಾದರೂ ಕನ್ನಡ ಪತ್ರಿಕೋದ್ಯಮದಲ್ಲಿ ಇತ್ತು. ಇವತ್ತು ಬರೆಯುವ ಒಬ್ಬನೇ ಒಬ್ಬ ಸಂಪಾದಕನೂ ಕನ್ನಡ ದಿನಪತ್ರಿಕೆಯ ಮಟ್ಟಿಗೆ ಕಾಣುತ್ತಿಲ್ಲ. ಟಾರ್ಚ್ ಹಾಕಿ ತಡಕಾಡಿದರೂ ಒಬ್ಬ ವ್ಯಕ್ತಿಯ ಹೆಸರು ಸಿಗುವುದಿಲ್ಲ. ಸಂಪಾದಕನ ಹುದ್ದೆಯನ್ನು ಕಾರಕೂನರ ಮಟ್ಟಕ್ಕೆ, ಹೆಚ್ಚೆಂದರೆ ಒಬ್ಬ ಸೂಪರ್‌ವೈಸರ್ ಮಟ್ಟಕ್ಕೆ ಇಳಿಸಿ ಇಟ್ಟ ‘ಕೀರ್ತಿ’ಗೆ ಹಲವರು ಭಾಜನರಾಗುತ್ತಾರೆ. ಇನ್ನು ಕೆಲ ಸಂಪಾದಕರು ಆಗೊಮ್ಮೆ ಈಗೊಮ್ಮೆ ಬರೆಯುವ ದುಸ್ಸಾಹಸ ಮಾಡುವುದಿದೆ. ಆದರೆ ಕನ್ನಡ ಅಕ್ಷರಗಳಲ್ಲಿಯೇ ಇರುವ ಅದನ್ನು ತರ್ಜುಮೆ ಮಾಡಿಕೊಳ್ಳಲು ಓದುಗರು ಪರದಾಡುವುದು ಸಾಮಾನ್ಯ ಸಂಗತಿ. ಹಿಂದೆ ಒಂದೆರಡು ಇಂಥ ಸಂಪಾದಕರ ಲೇಖನಗಳು ‘ದಯವಿಟ್ಟು ಅರ್ಥವಾದರೆ ತಿಳಿಸಿಕೊಡಿ‘ ಎಂಬ ಶಿರೋನಾಮೆಯಡಿಯಲ್ಲಿ ಮೇಲ್‌ಗಳಲ್ಲಿ ಓಡಾಡಿದ್ದು ನಿಮಗೆ ನನೆಪಿರಬಹುದು. ಇನ್ನು ‘ಕಪ್ಪು ಸುಂದರಿ’ಯಂಥ ಪತ್ರಿಕೆಗಳ ಸಂಪಾದಕರು ಏನನ್ನು ಬರೆಯುತ್ತಿದ್ದಾರೆ, ಹಾಗೆ ಬರೆದು ಎಂಥ ‘ಅಚ್ಚರಿ’ಗಳನ್ನು ಸೃಷ್ಟಿಸುತ್ತಾರೆ, ಅವರ ಆಸಕ್ತಿಗಳೇನು ಎನ್ನುವುದು ಓದುಗರಿಗೇ ಗೊತ್ತಿರುವುದರಿಂದ ಆ ಬಗ್ಗೆ ಹೇಳುವುದು ಬೇಕಿಲ್ಲ.

ಇಂಥ ಸನ್ನಿವೇಶದಲ್ಲಿ ಪತ್ರಿಕೋದ್ಯಮವನ್ನೇ ಮುಂದುವರಿಸುವುದಿದ್ದರೆ ಅದು ಭಟ್ಟರ ನೇತೃತ್ವದಲ್ಲಿಯೇ. ಅದಿಲ್ಲದಿದ್ದರೆ ಕೇವಲ ಹೊಟ್ಟೆಪಾಡಿಗೋಸ್ಕರ ನೌಕರಿ ಮಾಡುವುದಿದ್ದರೆ ಅದನ್ನು ಟೈಮ್ಸ್ ಸಮೂಹದ ಪತ್ರಿಕೆಯಲ್ಲೇ ಮಾಡಬೇಕೆಂದೇನೂ ಇಲ್ಲ. ಬೇರಾವುದೇ ಪತ್ರಿಕೇತರ ಸಂಸ್ಥೆಗಳಲ್ಲಿ ಇದಕ್ಕಿಂತಲೂ ಹೆಚ್ಚಿನ ಸಂಬಳ ಗಳಿಕೆ ಸಾಧ್ಯವಿದೆ ಎಂಬುದು ವೈಯಕ್ತಿಕವಾಗಿ ನನ್ನ ನಿಲುವಾಗಿತ್ತು. ಹೀಗೆ ಹೇಳಿದರೆ ನಮ್ಮ ರಾಜೀನಾಮೆಗೆ ಇನ್ನೂ ಸ್ಪಷ್ಟ ಕಾರಣಗಳು ತಿಳಿಯಬಹುದು.

ಹೌದು, ವಿಜಯ ಸಂಕೇಶ್ವರ ಅವರಿಂದ ಟೈಮ್ಸ್ ಸಮೂಹಕ್ಕೆ ‘ವಿಜಯ ಕರ್ನಾಟಕ’ ಹಸ್ತಾಂತರವಾದಾಗಲೇ ಓದುಗರಲ್ಲಿ ಮಾತ್ರವಲ್ಲ, ಪತ್ರಕರ್ತರಲ್ಲೂ ಒಂದು ರೀತಿಯ ಅನುಮಾನಗಳು ಮೂಡಿದ್ದು ಸುಳ್ಳಲ್ಲ. ಅದಕ್ಕೆ ನಾವೂ ಹೊರತಾಗಿರಲಿಲ್ಲ. ಆದರೆ ವಿಶ್ವೇಶ್ವರ ಭಟ್ಟರು ಯಾವತ್ತೂ ವೃತ್ತಿಪರತೆಯನ್ನು ನೋಡಿದವರು. ಓದುಗರಿಗೆ ಹೊಸತನ್ನು ಕಟ್ಟಿಕೊಡುವ ಭರದಲ್ಲಿ ಸಂಸ್ಥೆಯ ಹಿತವನ್ನು ಎಂದೂ ಕಡೆಗಣಿಸಿದವರಲ್ಲ. ಹೀಗಾಗಿ ಅವರು ಕೇವಲ ಮ್ಯಾನೇಜಿಂಗ್ ಎಡಿಟರ್ ಅಷ್ಟೇ ಆಗಿರಲಿಲ್ಲ ‘ಮ್ಯಾನೇಜ್‌ಮೆಂಟ್ ಎಡಿಟರ್’ ಸಹ ಆಗಿದ್ದರು. ಲಾಭ ಗಳಿಕೆಯಿಲ್ಲದ ಯಾವ ಪತ್ರಿಕೆಯೂ ಸುಸ್ಥಿರವಾಗಿ ನಿಲ್ಲಲಾರದು. ಪತ್ರಿಕೆ ಉತ್ತಮವಾಗಿ ಬಂದರಷ್ಟೇ ಸಾಲದು ಅದು ಸುದೀರ್ಘ ಅವಯವರೆಗ ನಿಲ್ಲಬೇಕು. ಇದಕ್ಕಾಗಿ ಮ್ಯಾನೇಜ್‌ಮೆಂಟ್‌ನ ಕೈ ಬಲಪಡಿಸುವುದು ಆಯಕಟ್ಟಿನ ಜಾಗದಲ್ಲಿ ಕುಳಿತ ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಸಾಕಷ್ಟು ಬಾರಿ ಅವರು ನಮ್ಮ ಬಳಿ ಹೇಳುತ್ತಿದ್ದರು. ಎಂಥದ್ದೇ ಸಂದರ್ಭದಲ್ಲೂ ಅವರು ಮ್ಯಾನೇಜ್‌ಮೆಂಟ್ ವಿರುದ್ಧದ ನಿಲುವನ್ನು ತಳೆಯುವುದು ಹಾಗಿರಲಿ, ಸಣ್ಣ ಮಾತನ್ನೂ ಆಡಿದ್ದಿಲ್ಲ. ಅಂಥ ವಿಶ್ವೇಶ್ವರ ಭಟ್ಟರೂ ಸಹ ರಾಜೀನಾಮೆ ನೀಡಿ ಹೊರಬರುವಂಥ ಸನ್ನಿವೇಶ ನಿರ್ಮಾಣವಾಗಿದ್ದು ವಿಪರ್ಯಾಸ.

ಹಾಗೆಂದು ಟೈಮ್ಸ್ ಸಮೂಹ ಯಾರನ್ನೂ ಎಂದಿಗೂ ಕೆಟ್ಟದಾಗಿ ನಡೆಸಿಕೊಂಡದ್ದಿಲ್ಲ. ಸತ್ಯ ಹೇಳಬೇಕೆಂದರೆ ಆರಂಭಿಕ ಅನುಮಾನಗಳಿಂದ ಹೊರತಾಗಿಯೂ ಕೆಲಸದ ಮಟ್ಟಿಗೆ ಒಂದು ಶಿಸ್ತು, ಅಕ ವೃತ್ತಿ ಪರತೆ ಬಂದದ್ದೇ ಪತ್ರಿಕೆಯ ಹಸ್ತಾಂತರದ ಬಳಿಕ. ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ ಸಮೂಹ. ದಶಕಗಳಿಂದ ಮಾಧ್ಯಮ ರಂಗದಲ್ಲಿದೆ. ಹತ್ತಾರು ವಿಭಿನ್ನ ಅನುಭವ ಸಂಸ್ಥೆಯ ಜತೆಗಿದೆ. ಈ ಹಿನ್ನೆಲೆಯಲ್ಲಿ ಅದು ಸಹಜವೂ ಆಗಿತ್ತು. ಜತೆಗೆ ಟೈಮ್ಸ್ ಸಮೂಹದ ಸಿಬ್ಬಂದಿ ಎಂದುಕೊಳ್ಳಲು ನಮಗೆ ಹೆಮ್ಮೆಯೂ ಆಗುತ್ತಿತ್ತು. ಅಂಥ ಮನಸ್ಥಿತಿಗೆ ನಾವೆಲ್ಲರೂ ಬರಲು ಕಾರಣ ಸ್ವತಃ ಭಟ್ಟರೇ. ಹಾಗಿದ್ದೂ ಭಟ್ಟರು ಹೊರಬಂದಾಗ ನಾವು ಅದೇ ಸಂಸ್ಥೆಯಲ್ಲಿ ಮುಂದುವರಿಯುವುದು ಉಚಿತ ಎನಿಸಲಿಲ್ಲ.

ಇವೆಲ್ಲಕ್ಕಿಂತ ಹೆಚ್ಚಿನದ್ದು ನಾವಿವತ್ತು ಏನಾಗಿದ್ದೇವೋ ಅದಕ್ಕೆ ‘ನೇರ ಹೊಣೆಗಾರರು’ ಭಟ್ಟರು. ಇದು ಖಂಡಿತಾ ಮುಖಸ್ತುತಿಯಲ್ಲ. ಋಣ ತೀರಿಸುವ ಮಾತಲ್ಲ. ಹಾಗೆ ನೋಡಿದರೆ ಅವರ ಎಷ್ಟೋ ನಿಲುವುಗಳು ವೈಯಕ್ತಿಕವಾಗಿ ನನಗೆ ಸರಿ ಕಂಡಿಲ್ಲ. ಬಹುಶಃ ಅಂಥ ಸ್ಥಾನದಲ್ಲಿ ಕುಳಿತಾಗ ಅವೆಲ್ಲ ಅನಿವಾರ್ಯವೇನೋ ಎಂದುಕೊಂಡು ಸುಮ್ಮನಿದ್ದು ಬಿಟ್ಟಿದ್ದೇನೆ. ಕೆಲವೊಮ್ಮೆ ಬಹಿರಂಗವಾಗಿಯೇ ಅವರನ್ನು ವಿರೋಸಿ ಅವರಿಗೆ ನೋವುಂಟು ಮಾಡಿದ್ದೇನೆ. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಆ ವ್ಯಕ್ತಿಯನ್ನು ಇಷ್ಟ ಪಡಲು, ಪ್ರೀತಿಸಲು, ಆರಾಸಲು ಬೇಕಷ್ಟು ಕಾರಣಗಳು ಇವೆ. ಸಮಕಾಲೀನ ಪತ್ರಿಕೋದ್ಯಮ ಸನ್ನಿವೇಶದಲ್ಲಿ ನಾನು ನನ್ನಂಥವನಿಗೆ ‘ಒಂದು ಮಾದರಿ’ ಶ್ರೀ ಭಟ್ಟರು. ಅಂಥವರೊಟ್ಟಿಗೆ ಕಳೆದ ಹತ್ತು ವರ್ಷಗಳಿಂದ ಅತ್ಯಂತ ಆಪ್ತನಾಗಿ ಕೆಲಸ ಮಾಡಿದ್ದೇನೆ ಎಂಬ ಹೆಮ್ಮೆ ನನಗಿದೆ. ಬೇರೆಲ್ಲ ದೊಡ್ಡದೊಡ್ಡ ವಿಚಾರಗಳು ಹಾಗಿರಲಿ, ಪೆನ್ನೆತ್ತಿಕೊಂಡರೆ ಹೇಗೆ ತುಸುವೂ ಚಿತ್ತಲ್ಲದಂತೆ ಬರೆಯಬೇಕು, ನಾವು ಬರೆಯುವ ಪೆನ್ನು, ಹಾಳೆಗಳು ಹೇಗಿರಬೇಕೆಂಬ ಅತ್ಯಂತ ಪುಟ್ಟ ಪುಟ್ಟ ಸಂಗತಿಗಳಿಗೂ ಅವರೇ ಮಾದರಿ. ಅಲ್ಲಿಂದಲೇ ಆರಂಭವಾಗುತ್ತದೆ ಅವರ ಪತ್ರಿಕೋದ್ಯಮದ ಪಾಠ. ಅವರೆದುರು ಇಂಥವು ಪುಟ್ಟ ಸಂಗತಿಗಳಾಗಲೇ ಇಲ್ಲ. ಒಬ್ಬ ಯೋಧ ಹೇಗೆ ತನ್ನ ಆಯುಧಗಳನ್ನು ಜೋಪಾನಗೊಳಿಸುತ್ತಾನೋ, ಒಬ್ಬ ನಾವಿಕ ಹೇಗೆ ತನ್ನ ದೋಣಿ ಹುಟ್ಟುಗಳನ್ನು ಜತನ ಮಾಡುತ್ತಾನೋ, ಒಬ್ಬ ಡ್ರೈವರ್ ತನ್ನ ವಾಹನವನ್ನು ಸದಾ ಹೊಚ್ಚ ಹೊಸದಾಗಿಟ್ಟುಕೊಳ್ಳಲು ನೋಡುತ್ತಾನೋ ಹಾಗೆಯೇ ಪತ್ರಕರ್ತರಿಗೆ ಪೆನ್ನು ಹಾಳೆಗಳು. ಅದನ್ನು ನಾವು ಅತ್ಯಂತ ಕಾಳಜಿಯಿಂದ ಇಟ್ಟುಕೊಳ್ಳಬೇಕು ಎಂಬುದು ಅವರ ನಿಲುವು. ಅಲ್ಲಿಂದ ಕ್ರಿಯಾಶೀಲ ಬರವಣಿಗೆ ವರೆಗೆ ಎಲ್ಲವನ್ನೂ ಭಟ್ಟರು ತಿದ್ದಿದ್ದಾರೆ. ಹಾಗೆಂದು ಇವ್ಯಾವುದು ನಮ್ಮಲ್ಲಿರಲಿಲ್ಲ ಎಂದಲ್ಲ. ಆದರೆ ಇಂಥವಕ್ಕೆ, ನಮ್ಮೊಳಗಿದ್ದ ಪ್ರತಿಭೆಗೆ ಪುಟವಿಟ್ಟವರು ಅನುಮಾನವೇ ಇಲ್ಲ, ನಮ್ಮ ಪ್ರೀತಿಯ ಸಂಪಾದಕರು. ಸದ್ಯದ ಮಟ್ಟಿಗಂತೂ ಸಂಪಾದಕರ ಹುದೆಯಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವೇ ಇಲ್ಲ. ಹೀಗಾಗಿ ಒಬ್ಬ ಸಂಪಾದಕನ ಜತೆಗೆ ಕೆಲಸ ಮಾಡಬೇಕೆಂಬ ಅದಮ್ಯ ಬಯಕೆಯಿಂದ ಇವತ್ತು ಸಂಸ್ಥೆಯ ಹೊರಗಿದ್ದೇವೆ... ನಾಳೆ ಇದೇ ಸಂಪಾದಕನೊಟ್ಟಿಗೆ ಸಾಂಸ್ಥಿಕ ಅಸ್ತಿತ್ವ ಪಡೆಯುತ್ತೇವೆ....

ಕೇವಲ ಇತಿಹಾಸ ದಾಖಲಿಸುವ ಪತ್ರಕರ್ತರು ನಾವಲ್ಲ, ಸ್ವತಃ ಇತಿಹಾಸ ನಿರ್ಮಿಸುತ್ತೇವೆ...ಒಂದು ‘ಲವಲವಿಕೆ’, ಒಂದು ‘ನೀರು ನೆರಳು’ ಇದಕ್ಕೆ ಸಾಕ್ಷಿ.
ಹೇಗೆಂಬುದನ್ನು ನಾಳೆ ಬರೆಯುವೆ...

9 comments:

 1. ನಿಮ್ಮ ಹೊಸ ಪತ್ರಿಕೆಗೆ ಕಾಯುತ್ತಿದ್ದೇವೆ.

  ReplyDelete
 2. ಭಟ್ಟರ ಸಹಿತ ನೀವೆಲ್ಲಾ ರಾಜೀನಾಮೆ ಕೊಟ್ಟಾಗ ನನ್ನಂಥ ಸಾಂಪ್ರಾದಾಯಿಕ ವಿ ಕ ಓದುಗರಿಗೆ ನಿರಾಸೆ ಯಾಗಿದ್ದು ಸುಳ್ಳಲ್ಲ. ಹಾಗೆಂದು ಸುಮ್ಮನೆ ಕೂರುವವರು ನೀವುಗಳಲ್ಲ. ಸ್ವಾಮಿ ನೀಲಿ ಪತ್ರಿಕೆಯವರ ಕಣ್ಣಿಗೆ ಕಾಣೋದು ಎಲ್ಲಾ ಬರೇ ನೀಲಿ. ಅದು ಅವರ manufacturing defect . ಅಂತವರ ಕಣ್ಣು ಬದಲಿಸಲು ಆಗಲ್ಲ, ಆದರೆ ದೃಷ್ಟಿ ಬದಲಿಸಬಹುದು. ಆ ಕೆಲಸ ನಿಮ್ಮಿಂದ ಬೇಗ ಆಗಲಿ

  ReplyDelete
 3. you did a good thing by listening to your heart. All the best! I am sure your exciting days are ahead of you, not behind.

  -Krupesh

  ReplyDelete
 4. ಹೊಸತು ಹುಡುಕುತ್ತ ಹೊರಟ ನಿಮ್ಮ ಬಳಗಕ್ಕೆ ನಮ್ಮ ಬೆಂಬಲ ಸದಾ ಇದೆ... ಆದ್ರೆ ನೀರು-ನೆರಳು ಮಾತ್ರ ನಿಲ್ಲಿಸ್ಬೇಡಿ... ಅದೂ ಹೊಸರೂಪದಲ್ಲಿ ಹೊರಬರಲಿ..ಕನಿಷ್ಟ ಪಕ್ಷ ಬ್ಲಾಗ್ ನಲ್ಲಾದರೂ....

  ಅಂದ ಹಾಗೆ ಈ 'ಗಿಂಡಿ ಮಾಣಿ' ಅಂದ್ರೆ ಎಂತ...?!
  ಇದ್ರ ಹಿಂದೆ ಏನಾದರೂ ಕುತೂಹಲಕಾರಿ ಸಂಗ್ತಿ ಇರ್ಬೇಕಲ್ಲಾ...?!

  -ಪ್ರಸನ್ನ ಆಡುವಳ್ಳಿ,ಬಾಳೆಹೊನ್ನುರು

  ReplyDelete
 5. ಆತ್ಮೀಯ ಪ್ರಸನ್ನ ಅವರೇ,
  ಗಿಂಡಿಮಾಣಿ ಗಿಂಡಿ ಅದರೊಳಗಣ ನೀರಿನ ಅಧ್ಯಯನ ನಡೆಸುತ್ತಿದ್ದಾನೆ, ನಾಳೆ-ನಾಡಿದ್ದರಲ್ಲಿ ಗಿಂಡಿಯ ಇತಿಹಾಸವನ್ನೂ ಬಿಚ್ಚಿಡುತ್ತಾನೆ. ಒಟ್ಟಾರೆ ಆತ ಬಕೇಟು ಹಿಡಿಯುವವರಿಗೆ ಚೊಂಬು ಹಿಡಿಸುವುದಂತೂ ನಿಶ್ಚಿತ. ಗಿಂಡಿಮಾಣಿಯ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು.
  -ಭಡ್ತಿ

  ReplyDelete
 6. yella patrikegaligu saddu hodedu nilluvanthe hosa kannada patrike praramba madi adastu bega.
  yashassu khanditha.
  dr.raghavendra bhat.k

  ReplyDelete
 7. ಆತ್ಮೀಯ
  ವಿ ಕ ಬಗ್ಗೆ ಹೇಳುವುದಕ್ಕೆ ಮೊದಲು ಭಟ್ಟರ ಬಗ್ಗೆ ಹೇಳಲೇ ಬೇಕು, ಉತ್ತಮ ಎನಿಸುವ೦ಥ ಮತ್ತು ಅತ್ಯದ್ಭುತವಾದ ವಿವರಣೆಯಿ೦ದ ಅವರ ಬರಹಗಳು ಜನರನ್ನ ಬೇಗ ಮುಟ್ಟಿದವು ಆನೋದರಲ್ಲಿ ಎರಡು ಮಾತಿಲ್ಲ. ಭಟ್ಟರ ಪತ್ರಿಕೆ ಅ೦ತ ಒ೦ದು ಕಡೆ ಇನ್ನೊ೦ದು ಕಡೆ ಮಧ್ಯಪುಟದಲ್ಲಿ ಮೌಲ್ಯಯುತ ಬರಹಗಳು ಇವೆರಡೂ ವಿ ಕ ವನ್ನ ನ೦.೧ ಸ್ಥಾನಕ್ಕೇರಿಸಿದವು. ಇದರ ಅಮಲು ಹೆಚ್ಚಾಯಿತೋ ಎ೦ಬ೦ತೆ ಅವರ ಪತ್ರಿಕೆಯ ಮುಖ ಪುಟ ಬದಲಾಯಿತು ಶ್ಲೀಲ ಅಶ್ಲೀಲ ಕ್ಕೆ ವ್ಯತ್ಯಾಸವೇ ಇಲ್ಲದ೦ತೆ ಶೀರ್ಷಿಕೆಗಳು ಬದಲಾದವು
  ಕ್ಯಾಚಿ ಯಾಗಿರ್ಬೇಕು ಅನ್ನೋದನ್ನೇ ಮು೦ದಿಟ್ಟಿಟ್ಟುಕೊ೦ಡು ಪತ್ರಿಕೆ ಕನ್ನಡವನ್ನ ಹಾಳು ಮಾಡಿಬಿಟ್ಟಿತು. ಇದಕ್ಕೆ ಭಟ್ಟರು ಹೊಣೆಯೋ ಅಲ್ಲವೋ ಬಲ್ಲವರೇ ಹೇಳಬೇಕು.
  ಇವೆಲ್ಲದ ಮಧ್ಯೆ ಭಟ್ಟರ ಪುಸ್ತಕಗಳು ಮಾರಾಟವಾದ ರೀತಿ ಇನ್ನೂ ಅಚ್ಚರಿ ಹುಟ್ಟಿಸುತ್ತೆ. ಇದನ್ನ ಅಚ್ಚರಿ ಅನ್ನೋದು ತಪ್ಪು. ಪತ್ರಿಕೆಯ ಸ೦ಪಾದಕನೊಬ್ಬನ ಪುಸ್ತಕವನ್ನ ಜನ ಮೆಚ್ಚಿಕೊ೦ಡ ರೀತಿ ನೋಡಿದ್ರೆ ಅವರ ಖ್ಯಾತಿ ತಿಳಿಯುತ್ತೆ. ನಾನು ಭಟ್ಟರ ಅಭಿಮಾನಿಯಾದದ್ದು ಹಾಗೇ.
  ನಮಗೆ೦ದೇ ಕೊಟ್ಟ ಪುಟ ಲವಲವಿಕೆ. ನನ್ನ ಪ್ರೇಮ ಪತ್ರಗಳು ಅದರಲ್ಲಿ ಬ೦ದುದನ್ನು ಕ೦ಡು ಖುಷಿ ಪಟ್ಟಿದ್ದೇನೆ
  ಹೊಸತನ್ನು ಬಯಸಿದ ಮತ್ತು ಪ್ರಯೋಗಿಸಿದ ಕೀರ್ತಿ ಭಟ್ಟರದು. ಭಟ್ಟರಿಗೆ ಮತ್ತು ಅವರ ವೃ೦ದಕ್ಕೆ ಒಳ್ಳೇದಾಗಲಿ ಅವರೊ೦ದಿಗೆ ನಾವಿದ್ದೇವೆ. ಅವರ ಹೊಸ ಪತ್ರಿಕೆಗಾಗಿ ಕಾದಿದ್ದೇವೆ
  ನಿಮ್ಮ ಹರೀಶ್ ಆತ್ರೇಯ

  ReplyDelete
 8. Bhadti avre,
  Neevu atavaa bhattaru raajinaame kottiddu. TOI na secular yaane dishonest journalismna virudda anta yaake neeravaagi heluttilla?

  ReplyDelete
 9. ನಾವು ಬರಹಗಳ ಓದುಗರೇ ವಿನಹ..
  ಬಳಗದ ಓದುಗರು ಅಲ್ಲ ...
  ಹೊಸತನ್ನು ನಿಮ್ಮಿಂದ ನಿರೀಕ್ಸಿಸುತ್ತೇವೆ...
  ನಾವು ನಿಮ್ಮೊಂದಿಗೆ, ನಿಮ್ಮ ಬರವಣಿಗೆಗಳೊಂದಿಗೆ...
  ಕಡೆವರೆಗೂ... ಕೊನೆವರೆಗೂ...
  -ಚೈತನ್ಯ ಮಂದಾಲ, ಹಾಸನ.

  ReplyDelete