About Me

My photo
ನಾನೆಂದರೆ... ಮಲೆನಾಡಿನ ಸೆರಗಿನಲ್ಲಿರುವ ಸಾಗರ ತಾಲೂಕಿನ ಗೀಜಗಾರು ಎಂಬ ಕಗ್ಗಾಡಿನ ಅಜ್ಜನಮನೆಯಲ್ಲಿ ಹುಟ್ಟಿದವ.ಕರ್ಕಿಕೊಪ್ಪದಲ್ಲಿ ಮನೆ. ಅಲ್ಲೇ ಓದಿದ್ದು, ಕಿತಾಪತಿಗಳನ್ನೆಲ್ಲ ಮಾಡಿದ್ದು. ಮೊದಲಿನಿಂದಲೂ ಶಾಸ್ತ್ರೀಯ ಓದೆಂದರೆ ಅಷ್ಟಕ್ಕಷ್ಟೇ. ಹೇಗೋ ಬಿಕಾಂನ ಕೊನೆಯ ವರ್ಷ ತಲುಪಿ, ಹೊರಳಿದ್ದು ಪತ್ರಿಕೋದ್ಯಮದ ಕಡೆಗೆ. ಅಭ್ಯಾಗತ ನನ್ನೊಳಗಿನ ಕುಲುಮೆಯಲ್ಲಿ ಅರಳಿದ ಪತ್ರಿಕೆ. ವರ್ಷದಲ್ಲಿ ಸ್ವಂತ ಪತ್ರಿಕೆಯೆಂಬ ಒಲೆಗೆ ಕೈಹಾಕಿ ಸುಟ್ಟುಕೊಂಡು, ಶಿವಮೊಗ್ಗದ ಜನವಾರ್ತೆಯಲ್ಲಿ ಜಂಟಿ ಸಂಪಾದಕನಾದೆ. ಆಗಲೇ ಪತ್ರಿಕೋದ್ಯಮ ಡಿಪ್ಲೊಮೊ ಮುಗಿಸಿದ್ದು. ಅಲ್ಲಿಂದ ಹೊಸದಿಗಂತ, ಸಂಯುಕ್ತ ಕರ್ನಾಟಕ ನನ್ನ ಕೈ ಹಿಡಿದು ನಡೆಸಿದವು. ಅಲ್ಲಿಂದ ಸೇರಿದ್ದು ವಿಜಯ ಕರ್ನಾಟಕಕ್ಕೆ. ಹಲವು ಹೊಣೆಗಾರಿಕೆಗಳ ನಂತರ ಕನ್ನಡಕ್ಕೆ ತೀರಾ ಹೊಸದಾದ ದೈನಂದಿನ ಪುರವಣಿ ‘ಲವಲವಿಕೆ’ಯ ಮುನ್ನಡೆಸುವ ಅವಕಾಶ. ಸುದ್ದಿ, ಲೇಖನಗಳಿಗೆ ಕತ್ತರಿ ಪ್ರಯೋಗಿಸುವ ಏಕತಾನತೆಯನ್ನು ಹೊಡೆದೋಡಿಸುತ್ತಿದ್ದುದು ನೀರ ಕುರಿತಾದ ಅಧ್ಯಯನ. ಅದರ ಫಲವಾಗಿ ಸತತ ಆರು ವರ್ಷ ‘ವಿಕ’ದಲ್ಲಿ ಪ್ರತಿ ಶುಕ್ರವಾರ ‘ನೀರು ನೆರಳಿಗೆ’ ಕೊರತೆ ಆಗಿರಲಿಲ್ಲ. ಇದಕ್ಕಾಗಿ ರಾಜ್ಯ ಸರಕಾರ, ಸಿಡಿಎಲ್, ಇಂದೋರ್ ವಿಶ್ವವಿದ್ಯಾಲಯ, ಬಿಎಲ್‌ಡಿಇ ಯಂಥ ಸಂಸ್ಥೆಗಳು ಅಭಿಮಾನವಿಟ್ಟು ಪ್ರಶಸ್ತಿ ನೀಡಿ, ಹೊಣೆಗಾರಿಕೆಯನ್ನು ಎಚ್ಚರಿಸಿವೆ. ನೀರ ಬಗ್ಗೆ ಗೀಚಿದ್ದನ್ನೆಲ್ಲ ಗೆಳೆಯರೊಂದಿಗೆ ಹಂಚಿಕೊಳ್ಳಲು ‘ನೀರ್ ಸಾಧಕ್’ ಜತೆಗೂಡಿದ್ದ. ಈಗ ಎಲ್ಲ ಬಿಟ್ಟು ಓದುಗರ ಜತೆಗೆ ನಿಂತಿರುವಾಗ ‘ಗಿಂಡಿಮಾಣಿ’ ಕೈ ಹಿಡಿದಿದ್ದಾನೆ...ಇನ್ನೇನು ಹೇಳಲಿ ? ನಾನೆಂದರೆ ಇಷ್ಟೇ.

Monday, January 17, 2011

ನಾವೇ ಇತಿಹಾಸ ನಿರ್ಮಿಸುತ್ತೇವೆ

ವೈರಿಗಳು ಎಸೆದ ಕಲ್ಲನ್ನೇ ಸಂಗ್ರಹಿಸಿ ಮನೆ ನಿರ್ಮಿಸಿಕೊಳ್ಳುವುದಿದೆಯಲ್ಲಾ ಅದು ನಿಜವಾದ ಜಾಣತನ. ಅದು ನೈಜ ತಾಕತ್ತು. ಅಂಥದ್ದೊಂದು ಸಿದ್ಧಾಂತದಲ್ಲಿ ನಂಬಿಕೆ ಇಟ್ಟವ ನಾನು. ಹಾಗೆ ಬೀಸಿದ ಕಲ್ಲುಗಳಿಂದ ಕಟ್ಟಿದ ಮನೆಯೇ ಈ ‘ಗಿಂಡಿಮಾಣಿ ಬ್ಲಾಗ್’. ಥ್ಯಾಂಕ್ಸ್ ಟು ರವಿ ಬೆಳಗೆರೆ. ನನ್ನನ್ನು ಈ ಹೆಸರಿನಲ್ಲಿ ವ್ಯಂಗ್ಯ ಮಾಡಿ ಅವತ್ತು ಬರೆಯದಿದ್ದರೆ ನನಗೆ ಇಂಥ ಅಪರೂಪದ ಕಾವ್ಯನಾಮ ಸಿಗುತ್ತಲೇ ಇರಲಿಲ್ಲ. ಈಗಲೇ ಘೋಷಿಸುತ್ತೇನೆ. ಈ ಗಿಂಡಿಮಾಣಿ ಇನ್ನು ಬರೆಯುತ್ತಲೇ ಇರುತ್ತಾನೆ.

‘ವಿಜಯ ಕರ್ನಾಟಕ’ವನ್ನು ಬಿಟ್ಟ ಮರುದಿನದಿಂದಲೇ ನನ್ನ ವಿರುದ್ಧ ಸನ್ಮಾನ್ಯ ಶ್ರೀ ಶ್ರೀ ರವಿ ಬೆಳಗೆರೆಯವರು ತಮ್ಮ ‘ವಾರದ ಅಚ್ಚರಿ’ಯಲ್ಲಿ ಇದ್ದಕ್ಕಿದ್ದಂತೆ ಕಲ್ಲು ಬೀಸಲಾರಂಭಿಸಿದರು. ನನಗೆ ಗೊತ್ತಿದ್ದಂತೆ ಅವರು ಹೀಗೆ ಕಲ್ಲು ಎಸೆಯಲು ಕಾರಣವೇ ಇಲ್ಲ. ಅಷ್ಟಕ್ಕೂ ನಾನೆಂದೂ ಅವರ ಅಂತಃಪುರದವರ ಯಾರ ‘ಹೆಗಲು ಸವರಲೂ’ ಹೋಗಿಲ್ಲ.

ಕೆಲವರಿಗೆ ಹಾಗೆಯೇ, ಸುಖಾಸುಮ್ಮನೆ ಕಲ್ಲು ಎಸೆಯುತ್ತಿರುವ ಚಟ. ಅದು ಹಿರಿಯರು, ಕಿರಿಯರು, ಸಮಾನ ಮನಸ್ಕರು/ ವಯಸ್ಕರು, ಸ್ನೇಹಿತರು, ವೈರಿಗಳು ಇತ್ಯಾದಿ ಯಾವ ಭೇದವೂ ಇರುವುದಿಲ್ಲ. ಒಟ್ಟಾರೆ ಕಲ್ಲು ಬೀಸುತ್ತಲೇ ಇರಬೇಕು. ಬಹುಶಃ ತಾವು ಹೀಗೆ ಕಲ್ಲು ಬೀಸುವುದನ್ನು ನಿಲ್ಲಿಸಿದಾಕ್ಷಣ ನಾಡಿನ ಮಂದಿಯೆಲ್ಲಾ ಸೇರಿ ತಮ್ಮತ್ತಲೇ ಕಲ್ಲೆಸೆಯಲಾರಂಭಿಸುತ್ತಾರೆ ಎಂಬ ಭೀತಿ (ನಂಬಿಕೆ)ಯೂ ಅವರ ಇಂಥ ವರ್ತನೆಗಳಿಗೆ ಕಾರಣವಿರಬಹುದು. ಹೀಗಾಗಿಯೇ ಅವರು ತಮ್ಮ ನಿಕಟ ಗೆಳೆಯ( ಹಾಗಂತ ರವಿಯವರೇ ಸಾಕಷ್ಟು ಬಾರಿ ಹೇಳಿಕೊಂಡದ್ದು) ವಿಶ್ವೇಶ್ವರ ಭಟ್ಟರ ಮೇಲೂ ಕಲ್ಲೆಸೆದದ್ದಿರಬೇಕು.

ಆದರೆ, ರವಿ ಬೆಳಗೆರೆಯವರಿಗೆ ನನ್ನ ವಿಚಾರದಲ್ಲಿ ಅದೆಂಥಾ ಭಯ, ದ್ವೇಷ ಕಾಡುತ್ತಿದೆಯೋ ನನಗಂತೂ ಗೊತ್ತಿಲ್ಲ. ಏಕೆಂದರೆ ಆ ವ್ಯಕ್ತಿಯ ಮೇಲೆ ಅವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ‘ದಾಖಲಿಸುತ್ತಿರುವ ಇತಿಹಾಸದ’ ಬಗ್ಗೆ ಒಂದು ಮಟ್ಟಿಗಿನ ಗೌರವವನ್ನು ಇಟ್ಟುಕೊಂಡಿದ್ದವನು ನಾನು. ಮಾತೆತ್ತಿದರೆ ‘ಒಬ್ಬ ಜವಾಬ್ದಾರಿಯುತ ಪತ್ರಕರ್ತನಾಗಿ ನಾವಿದನ್ನು ಇತಿಹಾಸದಲ್ಲಿ ದಾಖಲಿಸಲೇಬೇಕು...’ ಎಂಬಿತ್ಯಾದಿ ಪುಂಖಾನುಪುಂಖವಾಗಿ ಹೊಮ್ಮುವ ಅವರ ಭಾಷಣದ ಬಗ್ಗೆ ಒಮ್ಮೊಮ್ಮೆ ಅಚ್ಚರಿಯೂ ಆಗುತ್ತಿತ್ತು. ಪತ್ರಕರ್ತನ ಹೊಣೆಗಾರಿಕೆ ಕೇವಲ ಇತಿಹಾಸ ದಾಖಲಿಸುವುದಕ್ಕೆ ಮಾತ್ರವೇ ಸೀಮಿತವೇ ? ಹಾಗಾದರೆ ಇತಿಹಾಸದ ಭಾಗವಾಗಿ ಪತ್ರಕರ್ತ ನಿಲ್ಲುವುದಿಲ್ಲವೇ ? ಆತ ಈ ಸಮಾಜದ ಅಂಗವಲ್ಲವೇ ? ಈ ಎಲ್ಲ ಪ್ರಶ್ನೆಗಳೂ ಮನದಲ್ಲೇಳುತ್ತಿತ್ತು. ಕೊನೆಗೆ-ಎಷ್ಟಾದರೂ ಮಾಜಿ ಇತಿಹಾಸದ ಮಾಸ್ತರರಲ್ಲವೇ. ಅಭ್ಯಾಸ ಬಲದಿಂದ ಎಲ್ಲವನ್ನೂ ಇತಿಹಾಸದ ಚೌಕಟ್ಟಿನಲ್ಲೇ ನೋಡುತ್ತಿರಬಹುದು ಎಂದುಕೊಂಡು ಸುಮ್ಮನಾಗುತ್ತಿದ್ದೆ. ವಿ.ಭಟ್ ತಂಡದ ರಾಜೀನಾಮೆಯ ಬಗ್ಗೆಯೂ ಅದೇ ಇತಿಹಾಸ ದಾಖಲಿಸುವ ಹಂಬಲದಿಂದಲೇ ಬರೆದಿದ್ದರೆ ಸುಮ್ಮನಾಗಿಬಿಡಬಹುದಿತ್ತು. ಆದರೆ ಈ ಸೋ ಕಾಲ್ಡ್ ಇತಿಹಾಸಕಾರರೆಲ್ಲರ ಕತೆಯೂ ಇದೇ ಇರಬಹುದೇ ? ಇತಿಹಾಸವನ್ನು ತಿರುಚದೇ ಅವರೆಂದೂ ಬರೆದವರೇ ಅಲ್ಲ. ನಮ್ಮ ರಾಷ್ಟ್ರೀಯತೆಯಿಂದ ಹಿಡಿದು, ನಮ್ಮ ಆರಾಧನಾ ಸ್ಥಳಗಳು, ನಮ್ಮ ಪರಂಪರೆ, ಸಾಹಿತ್ಯ ಹೀಗೆ ಎಲ್ಲದರ ಬಗ್ಗೆಯೂ ಅವರದ್ದು ಪೂರ್ವಗ್ರಹಪೀಡಿತ ದೃಷ್ಟಿಯೇ. ಹೀಗಾಗಿಯೇ ಕೆಲವೊಮ್ಮೆ ನಮ್ಮ ಪಠ್ಯ ಪುಸ್ತಕಗಳಲ್ಲೂ ಇಂಥವರ ಅಪಸವ್ಯಗಳು ಇತಿಹಾಸದ ಪಾಠವಾಗಿ ಇಣುಕಿಬಿಡುತ್ತವೆ. ತಮ್ಮ ಮೂಗಿನ ನೇರಕ್ಕೆ ಹೇಳಿಕೊಳ್ಳುವುದೇ ನೈಜ ಇತಿಹಾಸ ಎನ್ನುವ ಭಾವನೆ ಅವರದ್ದು. ತಮ್ಮ ಶಿಷ್ಯ ಪರಂಪರೆಗೂ ಅವರು ಅದನ್ನೇ ಬೋಸುವುದು. ಅವರು ಉಗುಳಿದ್ದನ್ನೇ ಸತ್ಯವೆಂದು ನಂಬುವ ಮುಗ್ಧ ಮನಗಳಿಗೂ ಕೊರತೆಯಿಲ್ಲ. ಈ ಎಲ್ಲರ ಬಗೆಗೆ ಸಣ್ಣದ್ದೊಂದು ಕನಿಕರವನ್ನಷ್ಟೇ ತೋರಬಹುದೇ ವಿನಾ ಅದಕ್ಕಿಂತ ಹೆಚ್ಚೇನೂ ಉಳಿಯುವುದಿಲ್ಲ.

ಹಾಗೆಂದು ವೇದಾಂತ ಹೇಳಿಕೊಂಡೇ ಕಳೆಯುವಷ್ಟು ವಾನಪ್ರಸ್ತಕ್ಕೂ ನಾವು ಬಂದು ನಿಂತಿಲ್ಲ. ಕೆಲವೊಮ್ಮೆ ಅವರೆಸೆದ ಕಲ್ಲನ್ನೇ ತಿರುಗಿಸಿ ಬೀಸಲೂ ನಮಗೆ ಗೊತ್ತೆಂಬುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಹಾಗೆ ತಿರುಗಿಸಿ ಎಸೆದರೆ ಮತ್ತೆಂದು ಅದು ಗುರಿ ತಪ್ಪುವ ಪ್ರಶ್ನೆಯೇ ಇಲ್ಲ.

ಅದಕ್ಕಾಗಿಯೇ ಗಿಂಡಿಮಾಣಿ ಮೈಕೊಡವಿ ನಿಂತದ್ದು. ಕೇವಲ ಈ ದಾಟಿಯಲ್ಲೇ ಉತ್ತರಿಸಿದರೆ ಮುಟ್ಟುವಷ್ಟು ಸೂಕ್ಷ್ಮ ಮನಸ್ಸಿನವರಾಗಿದ್ದರೆ ಈ ಪ್ರಮೇಯವೇ ಬರುತ್ತಿರಲಿಲ್ಲ. ಅದಕ್ಕಾಗಿ ಕಾನೂನು ಹೋರಾಟಕ್ಕೂ ನಿಂತಿದ್ದೇವೆ. ಇಷ್ಟು ವರ್ಷದ ಮೇಲೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರಿಗೆ ಪತ್ರಿಕೋದ್ಯಮವೆಂದರೆ ಏನು ಎಂಬುದನ್ನು ಗೆಳೆಯ ಪ್ರತಾಪ್‌ರಂಥ ಕಿರಿಯ ಬೋಸಬೇಕಾಗಿ ಬಂದಿರುವುದು ದುರಂತ. ಆ ಮೂಲಕ ಇತಿಹಾಸವನ್ನು ನಿರ್ಮಿಸ ಹೊರಟಿದ್ದೇವೆ.

ಹೌದು, ಈ ಬಗ್ಗೆ ಅತ್ಯಂತ ಆತ್ಮ ವಿಶ್ವಾಸದಿಂದ ಹೇಳಿಕೊಳ್ಳಬಲ್ಲೆವು. ಕೇವಲ ಇತಿಹಾಸ ದಾಖಲಿಸುವ ಪತ್ರಕರ್ತರು ನಾವಲ್ಲ, ಸ್ವತಃ ಇತಿಹಾಸ ನಿರ್ಮಿಸುತ್ತೇವೆ. ಇಷ್ಟರವರೆಗೆ ‘ವಿಜಯ ಕರ್ನಾಟಕ’ದಲ್ಲಿ ನಮ್ಮ ಬರವಣಿಗೆಗಳನ್ನು ಕಂಡವರು, ತಪ್ಪದೇ ಓದಿದವರಿಗೆ ಈ ಬಗ್ಗೆ ಅನುಮಾನಗಳು ಉಳಿದಿಲ್ಲ. ಒಂದೊಂದು ಅಂಕಣಗಳ ಮೂಲಕ, ಅದಕ್ಕಿಂತ ಹೆಚ್ಚಾಗಿ ಸುದ್ದಿಮನೆಯ ಬೇರೇಬೇರೇ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದೇವೆ. ಇಂಥ ಇನ್ನೂ ಹತ್ತು ಪತ್ರಿಕೆಗಳನ್ನು ಕಟ್ಟುವ ಕಸುವು, ಬುದ್ಧಿ ಮತ್ತೂ ವಯಸ್ಸೂ ಸಹ ದೇವರ ದಯೆಯಿಂದ ನಮ್ಮಲ್ಲಿದೆ. ತಾಕತ್ತಿದ್ದರೆ ಮನಬಂದಂತೆ ಕಾರಿಕೊಳ್ಳುವವರು ಕಾರಕೂನಿಕೆ ಬಿಟ್ಟು ಹೊಸ ಇತಿಹಾಸ ನಿರ್ಮಿಸಿ ತೋರಿಸಲಿ.

ಕೇವಲ, ಕಂಡವರ ಚಾರಿತ್ರ್ಯವಧೆಯನ್ನು ಮಾಡಿಕೊಂಡೇ, ತಮ್ಮ ತೆವಲುಗಳನ್ನು ಯಾವ್ಯವುದೋ ಅಂಕಣಗಳ ಹೆಸರಲ್ಲಿ ಸಮರ್ಥಿಸಿಕೊಂಡೇ, ಅದನ್ನೇ ಪತ್ರಿಕೋದ್ಯಮವೆಂದು ನಾವೆಂದೂ ಸಾರಿಲ್ಲ. ನಮ್ಮ ದೃಷ್ಟಿ, ಆಸಕ್ತಿಗಳು ಯಾವತ್ತೂ ‘ಬಾಟಮ್ ಐಟಮ್’ಗಳತ್ತ ದ್ವಂದ್ವಾರ್ಥದಲ್ಲಿ ಹರಿದಿಲ್ಲ. ನಮ್ಮದೇನಿದ್ದರೂ ನೇರ, ಮಂತ ನೋಟ. ಅದರಲ್ಲಿ ಯಾವ ‘ಸಾಪ್ಟ್ ಕಾರ್ನರ್’ ಸಹ ಇರಲಿಲ್ಲ. ನಮ್ಮ ಖಾಸಗೀ ಸಂಗತಿಗಳ, ಚಟಗಳ ವೈಭವೀಕರಣಕ್ಕೆ ಪತ್ರಿಕೆಯನ್ನು, ಓದುಗರ ಮನವನ್ನು ದುರ್ಬಳಕೆ ಮಾಡಿಕೊಂಡಿಲ್ಲ. ನಾವೆಷ್ಟು ಹಾಸಿಗೆಗಳಲ್ಲಿ ಹೊರಳಾಡಿದ್ದೇವೆ, ಆಗೆಲ್ಲಾ ಎಷ್ಟು ಮುಗುದೆಯರ ಕಣ್ಣೀರು ತಲೆದಿಂಬನ್ನು ಒದ್ದೆ ಮಾಡಿತ್ತೂ ಎಂಬುದರ ಲೆಕ್ಕಕೊಡುತ್ತಾ ಅದನ್ನೇ ಪೌರುಷವೆಂದು ನಮ್ಮ ಅಂಕಣಗಳಲ್ಲಿ ಸಾರಿಕೊಳ್ಳಲಿಲ್ಲ. ರತಿವೈಭವೀಕರಣವೇ ಪತ್ರಿಕೋದ್ಯಮವೆಂಬ ಕೀಳು ಅಭಿರುಚಿಯನ್ನು ಎಂದಿಗೂ ವ್ಯಕ್ತಪಡಿಸಿಲ್ಲ. ಸುಟ್ಟ ಸಿಗರೇಟ್‌ನ ಬೂದಿ ರಾಶಿಯೊಳಗಿಂದಲೇ ಮೇಲೆದ್ದು ವಿಕಟಾಟ್ಟಹಾಸ ಮೆರೆದಿಲ್ಲ. ಗಡಂಗುಗಳನ್ನೇ ಖಾಲಿ ಮಾಡಿ ಬ್ಯಾರೆಲ್ ಹೊಟ್ಟೆಯೊಳಗೆ ವಿಷ ತುಂಬಿಕೊಂಡಿಲ್ಲ. ನಾನು ಈವರೆಗೆ ಬರೆದದ್ದು ಇದ್ದರೆ ಅದು ಅಭಿವೃದ್ಧಿಪರವಾದದ್ದನ್ನೇ. ಒಮ್ಮೆ ಮಾತ್ರ, ಅದ್ಯಾರೋ ಜಿ.ಕೆ.ಗೋವಿಂದರಾವ್ ಎಂಬ ಬುದ್ಧಿಜೀವಿಗಳಂತೆ, ನಾನು ಅಲ್ಲಿಯವರೆಗೆ ಅವರ ಹೆಸರನ್ನೂ ಕೇಳಿರಲಿಲ್ಲ, (ಬಹುಶಃ ಎಲ್ಲರೂ ಕೇಳಿರಬಹುದಾದ ಹೆಸರು ಅವರದ್ದಲ್ಲವೇನೋ) ನನ್ನ ಅಂಕಣದಲ್ಲಿ ಪ್ರಕಟಗೊಂಡಿದ್ದ ಗುಜರಾತ್‌ನಲ್ಲಿನ ಕೃಷಿ ಅಭಿವೃದ್ಧಿಯ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿದ್ದರು. ಅದಕ್ಕೆ ‘ಸೂಕ್ತ ರೀತಿಯಲ್ಲಿ’ ಉತ್ತರಿಸಲು ಅಂಕಣ ಬಳಸಿಕೊಂಡದ್ದನ್ನು ಬಿಟ್ಟರೆ ಯಾವತ್ತಿಗೂ ಹೆಸರಿನಿಂದಲೇ ಸಾಧುಗಳಾಗಿರುವವರು ಉಸುರಿದ್ದನ್ನು ಕೇಳಿಕೊಂಡೋ, ಕೃತಘ್ನ ಕಲಾಕಾರರು ಇಟ್ಟ ಫಿಟ್ಟಿಂಗ್ ಅನ್ನು ನಂಬಿಯೋ, ಭ್ರಷ್ಟ-ದುರಹಂಕಾರಿ ದೇವಶ್ರೇಷ್ಠರು ಕಾರಿಕೊಂಡ ಹತಾಶೆಗೆ ಮರುಗಿಯೋ ಬರೆದವನಲ್ಲ.

ದಿಟ್ಟ, ತೀಕ್ಷ್ಣ ಸತ್ಯಗಳು ಕೆಲವರಿಗೆ ರುಚಿಸದಿದ್ದರೆ ಅದಕ್ಕೆ ನಾವು ಹೊಣೆಗಾರರಲ್ಲ. ಕಳೆದ ಹತ್ತು ವರ್ಷಗಳಿಂದ ಜಲ ಸಂರಕ್ಷಣಾ ಕ್ಷೇತ್ರದಲ್ಲಿ ನಡೆಸಿದ ಅಧ್ಯಯನ, ಆ ಸಂದರ್ಭದಲ್ಲಿ ಅರಿವಿಗೆ ದಕ್ಕಿಸಿಕೊಂಡದ್ದು ಆರು ವರ್ಷಗಳಲ್ಲಿ ಮುನ್ನೂರಕ್ಕೂ ಹೆಚ್ಚು ಬರಹಗಳ ರೂಪದಲ್ಲಿ ಸತತವಾಗಿ ದಾಖಲಿಸಿದ್ದನ್ನು ಅರಿತವರು ‘ಜಲಪತ್ರಕರ್ತ’ರೆಂದು ಕರೆದರೇ ವಿನಃ ಯಾವತ್ತೂ ನಮ್ಮನ್ನು ನಾವೇ ‘ಸತ್ಯ ಸಂದ’ ಪತ್ರಕರ್ತರೆಂದು ಘೋಷಿಸಿಕೊಂಡಿಲ್ಲ. ಅಂಥವನ್ನೆಲ್ಲಾ ಓದುವ ತಾಳ್ಮೆಯಾದರೂ ಇವರಿಗೆ ಹೇಗೆ ಬರಬೇಕು ?
ದುರಂತವೆಂದರೆ ಇದೇ. ನನಗೆ ಗೊತ್ತು. ಇಂಥ ಬರಹಗಳಿಂದ ಇವರೇನೂ ಬದಲಾಗುವುದಿಲ್ಲ. ಅಂಥ ಭ್ರಮೆಗಳೂ ನನ್ನಲ್ಲಿಲ್ಲ. ವೃಥಾ ಸಮಯ ವ್ಯರ್ಥ ಮಾಡುತ್ತಿದ್ದೇನೇನೋ ಅಂತಲೂ ಅನಿಸುತ್ತದೆ. ಆದರೆ ಸುಮ್ಮನೆ ಕುಳಿತುಬಿಟ್ಟರೆ ನಾವೇ ಸಾಕಿದ ನಾಯಿ ನಮ್ಮನ್ನೇ ಕಚ್ಚಲೂ ಹಿಂದೆ ಮುಂದೆ ನೋಡದ ಪರಿಸ್ಥಿತಿ ಬಂದೀತು. ಅಷ್ಟಕ್ಕೂ ಸುಮ್ಮನಿರಬೇಕೇಕೆ ? ಅಭಿವ್ಯಕ್ತಿ ಸ್ವಾತಂತ್ರವೆಂಬುದು ಯಾರದೇ ಜಹಗೀರು ಅಲ್ಲವಲ್ಲಾ ?

ಇತಿಹಾಸ ದಾಖಲಿಸುವ ಇಂಥವರ ಘನ ಇತಿಹಾಸವಾದರೂ ಏನು...
ನಾಳೆ ಬರೆಯುವೆ...

24 comments:

 1. Sir,
  Bold fonts put strain on eyes, make it normal again, like vbhat.in( of course, its a personal opinion. But I think it is a majority opinion)
  Good luck, for whatever new venture your team is about get into!

  ReplyDelete
 2. Hi..........

  There is a saying, "Great persons build there castle using the stones thrown by others".

  Great going Mr Bhadti. Keep the high spirit, like as you people are right now. Wishing the best for you and to your other team members. Create a mile stone in Kannada journalism and literature.

  Cheers,
  Kindara Jogi!

  ReplyDelete
 3. ಕೇವಲ ಇತಿಹಾಸ ದಾಖಲಿಸುವ ಪತ್ರಕರ್ತರು ನಾವಲ್ಲ, ಸ್ವತಃ ಇತಿಹಾಸ ನಿರ್ಮಿಸುತ್ತೇವೆ. No doubt in it. Can't wait more time.

  ReplyDelete
 4. "ವೃಥಾ ಸಮಯ ವ್ಯರ್ಥ ಮಾಡುತ್ತಿದ್ದೇನೇನೋ ಅಂತಲೂ ಅನಿಸುತ್ತದೆ" ನಿಜ ರ.ಬೆ ಅಕ್ಷರಗಳಿಂದ ಭಾವನೆಯನ್ನು ಮೂಡಿಸಿಕೊಳ್ಳುವ ಹಂತ ದಾಟಿ ಹೋಗಿಯಾಗಿದೆ. ಅವರಿಗೆ ನಿಮ್ಮ ಸಮಯ ಹಾಳು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ.

  ReplyDelete
 5. It's heart touching.We do understand your concern and feelings for the society. Your honest efforts in this regard are unquestionable.
  The barking dog should be taught a good lesson .....wish u all the best.

  ReplyDelete
 6. ಭಡ್ತಿಜೀ..ನಿಮ್ಮೊ೦ದಿಗೆ ನಾವಿದೀವಿ.. ಯರದೋ ಅಸಹ್ಯ ಬರವಣಿಗೆಗಳಿ೦ದ, ನಿಮ್ಮ ಮೇಲಿನ ನಮ್ಮ ಗೌರವ ಖ೦ದಿತಾ ಕಡಿಮೆಯಾಗಲಾರದು..

  ಆದ್ರೆ, ನೀವೂ ಅವರ ಬಗ್ಗೆ ಬರೆಯೋದರಿ೦ದ ನಿಮ್ಮ ಘನತೆ ಕಡಿಮೆ ಆಗತ್ತೆ ಅನ್ನೋ ಭಾವನೆ ನಮ್ಮದು..

  -ಕಿರಣ್ ಯಡಗೆರೆ

  ReplyDelete
 7. One small story...
  To fight with the pig you have to get in to ditch... You might win... But pig will enjoy the fight...

  ReplyDelete
 8. ಇತಿಹಾಸವನ್ನು ಸೃಷ್ಟಿಸುವ ಕಿಚ್ಚನ್ನು ಹೊತ್ತಿಸಲು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಕಾರಣರಾದ ಧನ್ಯವಾದವನ್ನು ಅರ್ಪಿಸುತ್ತ,
  ಮತ್ತೋಮ್ಮೆ ಕನ್ನಡಿಗರು ಹೆಮ್ಮೆ ಪಡುವಂತ ಪತ್ರಿಕೆಗಾಗಿ ಕಾತರನಾಗಿದ್ದೇನೆ,

  ಚೇತನ್ ಅರಸೀಕೆರೆ,

  ReplyDelete
 9. ಗಿಂಡಿಮಾಣಿ ಅಭಿಮಾನದ ಹೆಸರಾಗಿದೆ ಸರ್.. ಮುಂದುವರೆಸಿ ಬೆಂಬಲಕ್ಕೆ ನಾವು ಇದ್ದೇವೆ..

  ReplyDelete
 10. Superb....got no words...
  was very much furious and disgusted when i read that Krishna Sundari....
  You are doing a great job..keep that up...also..waiting for the next blogs...eagerly...

  ReplyDelete
 11. ಒಂಥರಾ ಕಿಕ್ ಇದೆ ಗಿಂಡಿಮಾಣಿ ಹೆಸರಲ್ಲಿ .

  ReplyDelete
 12. Dear Sir,

  We are with you. Go ahead.

  Regards,
  Nagaraja

  ReplyDelete
 13. > ಒಮ್ಮೆ ಮಾತ್ರ, ಅದ್ಯಾರೋ ಜಿ.ಕೆ.ಗೋವಿಂದರಾವ್ ಎಂಬ ಬುದ್ಧಿಜೀವಿಗಳಂತೆ,
  > ನಾನು ಅಲ್ಲಿಯವರೆಗೆ ಅವರ ಹೆಸರನ್ನೂ ಕೇಳಿರಲಿಲ್ಲ, (ಬಹುಶಃ ಎಲ್ಲರೂ
  > ಕೇಳಿರಬಹುದಾದ ಹೆಸರು ಅವರದ್ದಲ್ಲವೇನೋ) ನನ್ನ ಅಂಕಣದಲ್ಲಿ ಪ್ರಕಟಗೊಂಡಿದ್ದ
  > ಗುಜರಾತ್‌ನಲ್ಲಿನ ಕೃಷಿ ಅಭಿವೃದ್ಧಿಯ ಬಗೆಗಿನ ಲೇಖನಕ್ಕೆ ಪ್ರತಿಕ್ರಿಯಿಸಿದ್ದರು. ಅದಕ್ಕೆ
  > ‘ಸೂಕ್ತ ರೀತಿಯಲ್ಲಿ’ ಉತ್ತರಿಸಲು ಅಂಕಣ ಬಳಸಿಕೊಂಡದ್ದನ್ನು ಬಿಟ್ಟರೆ
  ಈ ಪ್ರತಿಕ್ರಿಯೆ ಮತ್ತು ಅದಕ್ಕೆ ನೀವು ನೀಡುದ ಉತ್ತರವನ್ನು ನಾನು ಓದಿಲ್ಲ.
  ಅದರ ಕೊಂಡಿ ಅಥವಾ soft copy ಇದ್ದರೆ ನಮ್ಮೊಡನೆ ಹಂಚಿಕೊಳ್ಳಬಹುದೇ?

  ReplyDelete
 14. ನರೇಂದ್ರ ಅವರೇ
  ಆ ಬರಹ ಭಡ್ತಿಯವರ 'ನೀರ್ ಸಾಧಕ್' ಬ್ಲಾಗ್ ನಲ್ಲಿದೆ...ಓದಲು ಕೆಳಗಿನ ಲಿಂಕು ಹಿಡಿದು ಹೋಗಿ...
  http://neersaadhak.blogspot.com/2009/10/blog-post_578.html

  ReplyDelete
 15. ಪ್ರಸನ್ನ ಅವರೇ, ಬಡ್ತಿಯವರ ಲೇಖನದ ಕೊಂಡಿ ನೀಡಿದ್ದಕ್ಕೆ ಧನ್ಯವಾದಗಳು.
  ಆದರೆ, ಅದರಲ್ಲಿ ಜಿ.ಕೆ.ಗೋವಿಂದರಾವ್ ಅವರ ಪ್ರತಿಕ್ರಿಯೆ ಇಲ್ಲ. ಅದರ ಕೊಂಡಿಯೂ ಇದ್ದರೆ, ದಯವಿಟ್ಟು ತಿಳಿಸಿ.

  ReplyDelete
 16. ಅದೂ ಕೂಡಾ ಅಲ್ಲೇ ಇದೆ..ಹೀಗೆ ಹೋಗಿ...
  http://neersaadhak.blogspot.com/2009/10/blog-post_4292.html
  ಇದಕ್ಕೆ ಸಂಬಂಧಿಸಿದ ಬರಹಗುಚ್ಚ ಓದಲು ನೀವು ಈ ದಾರಿ ಹಿಡಿಯಬಹುದು..
  http://neersaadhak.blogspot.com/2009_10_01_archive.html

  ReplyDelete
 17. ಗಿಂಡಿಯನ್ನು ನಾವು ಹಿಡಿದುಕೊಳ್ಳೋಣ...
  ಮಾಣಿಯವರು ಮುಂದೆ ನಿರಾತಂಕವಾಗಿ ಸಾಗಲಿ....

  ReplyDelete
 18. ಅಬ್ಬಾ...! ನಿಮ್ಮೆಲ್ಲರ ಅಭಿಮಾನಕ್ಕೆ ಸೋತು ಹೋಗಿದ್ದೇನೆ. ನಿಜಕ್ಕೂ ಗಿಂಡಿ ಮಾಣಿಯ ಹೃದಯ ಒದ್ದೆಯಾಗಿದೆ. ನಿಮ್ಮೆ ಈ ಪ್ರೋತ್ಸಾಹವೇ ನನ್ನ ಬಲ. ಈ ಬ್ಲಾಗ್ ಇಂಥ ಬರಹಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಭಾವನೆಗಳಿಗೆ ಇದು ವೇದಿಕೆಯಾಗುತ್ತದೆ.
  ಎದೆ ತುಂಬಿದ ಭಾವನೆಗಳೊಂದಿಗೆ
  ನಿಮ್ಮ
  ಗಿಂಡಿಮಾಣಿ

  ReplyDelete
 19. "ಈ ಬ್ಲಾಗ್ ಇಂಥ ಬರಹಗಳಿಗಷ್ಟೇ ಸೀಮಿತವಾಗಿರುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಭಾವನೆಗಳಿಗೆ ಇದು ವೇದಿಕೆಯಾಗುತ್ತದೆ."

  ಸಧ್ಯ..! ಈ ಬ್ಲಾಗ್ ಕೇವಲ ಕಾಲೆಳೆಯುವುದಕ್ಕಷ್ಟೇ ಸೀಮಿತವಾಗಿರುವುದಿಲ್ಲವಲ್ಲ...ಬೇರೆ ಬರಹಗಳೂ ಬೇಗ ಮೂಡಿಬರಲಿ....

  ReplyDelete
 20. first all the best for vbhat team...
  then one request is don't leave that mad dog(ravi)

  ReplyDelete
 21. ಅಲ್ಲಪ್ಪ ....... ಒಬ್ಬರ ಮೇಲೆ ಒಬ್ಬರು ಕೆಸರು ಎರಚಾದುತ್ತಿರುವುಡುತ್ತಿವುದು ಬಿಟ್ಟು ಈ ರಾಜ್ಯದಲ್ಲಿ ಜನರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಚಿಂತಿಸಿ.
  ದಯವಿಟ್ಟು ಈ ಲಿಂಕ್ ನ ಸಾರಾಂಶವನ್ನು ಓದಿ http://www.facebook.com/album.php?aid=27451&id=100001508660835&l=04987eca2a
  ರಾಜು
  ದಾವಣಗೆರೆ
  rajudavanagere@gmail.com

  ReplyDelete
 22. ಅಲ್ಲಪ್ಪ ....... ಒಬ್ಬರ ಮೇಲೆ ಒಬ್ಬರು ಕೆಸರು ಎರಚಾದುತ್ತಿರುವುಡುತ್ತಿವುದು ಬಿಟ್ಟು ಈ ರಾಜ್ಯದಲ್ಲಿ ಜನರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಚಿಂತಿಸಿ.
  ದಯವಿಟ್ಟು ಈ ಲಿಂಕ್ ನ ಸಾರಾಂಶವನ್ನು ಓದಿ http://www.facebook.com/album.php?aid=27451&id=100001508660835&l=04987eca2a
  ರಾಜು
  ದಾವಣಗೆರೆ
  rajudavanagere@gmail.com

  ReplyDelete
 23. Sir.. just I read your above article... I too inspired by your bouncing back potential..
  "Be fearless God and we r with U.." keep moving.. all d best.

  ReplyDelete